ಕೆರೆ ಅಂಗಳದಲ್ಲಿ ಯುಜಿಡಿ ಅವಾಂತರ: ಬೇಕಿದೆ ಶಾಶ್ವತ ಪರಿಹಾರ

ತುಮಕೂರು

     ನಗರದ ಅಕ್ಕ ತಂಗಿ ಕೆರೆಯ ವಿದ್ಯಾನಗರ ಭಾಗದ ಅಂಗಳದಲ್ಲಿ ಒಳಚರಂಡಿ ತ್ಯಾಜ್ಯದ ಕೊಳಚೆ ಸಂಗ್ರಹವಾಗಿ ಗಬ್ಬು ನಾರುತ್ತಿದೆ. ಕುವೆಂಪು ನಗರ, ವಿದ್ಯಾನಗರ, ಅಲ್ಲಿನ ಕೈಗಾರಿಕಾ ಪ್ರದೇಶದಿಂದ ಹರಿದು ಬರುವ ಒಳಚರಂಡಿಯ ಕೊಳಚೆ ನೀರು ಕೆರೆ ಅಂಗಳದಲ್ಲಿ ಸಂಗ್ರಹವಾಗುತ್ತಿದೆ. ಅಲ್ಲಿನ ಎರಡು ಮ್ಯಾನ್ ಹೋಲ್‍ಗಳು ಪದೇಪದೆ ಕಸ ತುಂಬಿ ಬಂದ್ ಆಗುವ ಕಾರಣ, ಕೊಳಚೆ ಮುಂದೆ ಹರಿಯದೆ ಮ್ಯಾನ್ ಹೋಲ್‍ನಿಂದ ಉಕ್ಕಿ ಹರಿದು ಕೆರೆ ಅಂಗಳದಲ್ಲಿ ಶೇಖರಣೆಯಾಗುತ್ತಿದೆ. ಇದು ಇವತ್ತಿ ಸಮಸ್ಯೆಯಲ್ಲ, ಸುಮಾರು ಹದಿನೈದು ವರ್ಷಗಳಿಂದಲೂ ಪರಿಸ್ಥಿತಿ ಹೀಗೇ ಇದೆ.

    ಯುಜಿಡಿಯ ಮಲೀನ ನೀರು ಇಲ್ಲಿ ಕೊಳೆತು ವಾತಾವರಣ ಕೆಡಿಸಿದೆ. ವಿದ್ಯಾನಗರ, ಭಾರತಿ ನಗರ, ಹೊಸಳಯ್ಯನ ತೋಟ ಹಾಗೂ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಅಷ್ಟೂ ವರ್ಷಗಳಿಂದ ದುರ್ವಾಸನೆಯಲ್ಲಿ ಉಸಿರುಕಟ್ಟಿ ಬದುಕುವಂತಾಗಿದೆ. ಕೆರೆ ಅಂಗಳಕ್ಕೆ ಮಾಂಸದ ತ್ಯಾಜ್ಯ, ಕಟ್ಟಡ ತೆರವುಗೊಳಿಸಿದ ತ್ಯಾಜ್ಯ ,ನಿರುಪಯೋಗಿ ವಸ್ತುಗಳನ್ನು ರಾತ್ರಿ ವೇಳೆ ಕದ್ದು ಮುಚ್ಚಿ ತಂದು ಹಾಕಲಾಗುತ್ತದೆ. ಮದುವೆಯಂತಹ ಸಮಾರಂಭಗಳಲ್ಲಿ ಮಿಕ್ಕಿದ ಅಡುಗೆ ಪದಾರ್ಥವನ್ನೂ ತಂದು ಸುರಿಯಲಾಗುತ್ತದೆ. ಇದರಿಂದ ಹಂದಿ, ನಾಯಿಗಳು ಇಲ್ಲಿ ಬಂದು ಸೇರಿಕೊಂಡು ವಾತಾವರಣವನ್ನು ಮತ್ತಷ್ಟು ಹದಗೆಡಿಸುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.

    ಕೆರೆ ಅಂಗಳದಲ್ಲಿ ಸಂಗ್ರಹವಾಗಿರುವ ಯುಜಿಡಿ ಕೊಳಚೆ ಕೊಳೆತು ದುರ್ನಾತ ಬೀರುತ್ತದೆ. ಮನೆಯಲ್ಲಿ ಇರುವುದೇ ಕಷ್ಟ ಎನ್ನುವಂತಾಗಿದೆ. ಈ ಕಾರಣದಿಂದ ಸಂಬಂಧಿಗಳು ನಮ್ಮ ಮನೆಗೆ ಬರಲೂ ಅಸಹ್ಯಪಡುತ್ತಾರೆ. ಕೆರೆಯಲ್ಲಿ ಸುರಿದಿರುವ ಕೋಳಿ ಪುಕ್ಕ ಗಾಳಿ ಬೀಸಿದರೆ ಮನೆಯೊಳಕ್ಕೆ ಹಾರಿಬರುತ್ತವೆ ಎಂದು ಅಲ್ಲಿ ನಿವಾಸಿ ವನಜಾ ತೊಂದರೆ ಹೇಳಿಕೊಳ್ಳುತ್ತಾರೆ.

    ಈ ಕೆರೆ ಸುತ್ತಮುತ್ತ ಜನ ವಸತಿ ಪ್ರದೇಶ, ಪಕ್ಕದಲ್ಲಿ ವಿದ್ಯಾವಾಹಿನಿ ಕಾಲೇಜಿನಲ್ಲಿ ಸಾವಿರಾರು ಮಕ್ಕಳು ಓದುತ್ತಿದ್ದಾರೆ. ಅವರಿಗೆಲ್ಲಾ ತೊಂದರೆಯಾಗಿದೆ. ನಗರ ಮಧ್ಯೆ ಇಂತಹ ಕೊಳಚೆ ಪ್ರದೇಶ ನಿರ್ಮಾಣ ಆಗಿದೆ. ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳಿ ಎಂದು ಅಧಿಕಾರಿಗಳು ಹೇಳುತ್ತಾರೆ, ಈ ಸ್ಥಿತಿಯಲ್ಲಿ ಹೇಗೆ ಸ್ವಚ್ಚತೆ ಸಾಧ್ಯ? ಹಂದಿ, ನಾಯಿಗಳ ಜೊತೆಗೆ ನೋಣ, ಸೊಳ್ಳೆಗಳು ಇಲ್ಲಿಂದಲೇ ಉತ್ಪತ್ತಿಯಾಗುತ್ತವೇ ನೋ ಎನ್ನುವಷ್ಟು ಹೆಚ್ಚಿವೆ.

      ಸಾಂಕ್ರಾಮಿಕ ರೋಗಗಳು ತುಮಕೂರು ನಗರಕ್ಕೆ ಇಲ್ಲಿಂದಲೇ ಹರಡುತ್ತವೇನೊ ಎನ್ನುವಷ್ಟು ಈ ಸ್ಥಳ ಗಬ್ಬು ನಾರುತ್ತಿದೆ. ಮಲೇರಿಯಾ, ಡೆಂಗ್ಯೂನಂತಹ ಕಾಯಿಲೆಗಳು ಆರಂಭವಾಗುವ ಸಂದರ್ಭದಲ್ಲಿ ಇಲ್ಲಿನ ಜನ ಹೆಚ್ಚು ಆತಂಕಕ್ಕೊಳಗಾಗುತ್ತಾರೆ. ಸರ್ವ ರೋಗಕ್ಕೂ ಈ ಕೆರೆ ಅಂಗಳವೇ ಮೂಲ ಎನ್ನುವಂತಾಗಿದೆ. ಏನು ಮಾಡುವುದು ಸಮಸ್ಯೆ ಬಗೆಹರಿಸಿ ಎಂದು ಹೇಳಬೇಕಾದವರಿಗೆಲ್ಲಾ ಹೇಳಿದ್ದೇವೆ. ಇದಕ್ಕೊಂದು ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ವಿದ್ಯಾನಗರ ನಿವಾಸಿ ನಿವೃತ್ತ ಶಿಕ್ಷಕ ಶ್ರೀರಾಮಯ್ಯ ಬೇಸರ ವ್ಯಕ್ತಪಡಿಸಿದರು.
ನಾಗರೀಕರ ಪ್ರತಿಭಟನೆ

      ಈ ಕೆರೆ ಅಂಗಳದಲ್ಲಿರುವ ಎರಡು ಮ್ಯಾನ್ ಹೋಲ್‍ಗಳು ಪದೇಪದೆ ಕಟ್ಟಿಕೊಂಡು ಯುಜಿಡಿ ನೀರು ಹರಿದುಹೋಗುತ್ತಿಲ್ಲ, ತುಂಬಿರುವ ಕಸವನ್ನು ತೆರವು ಮಾಡಿ, ಒಳಚರಂಡಿ ನೀರು ಮುಂದೆ ಹರಿದು ಭೀಮಸಂದ್ರದ ಟ್ರೀಟ್ ಮೆಂಟ್ ಪ್ಲಾಂಟ್‍ಗೆ ಸರಾಗವಾಗಿ ಹರಿದು ಹೋಗುವಂತೆ ಮಾಡಿ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಈ ಕೆರೆಯನ್ನು ಉದ್ಯಾನವನವಾಗಿ ಅಭಿವೃದ್ಧಿಪಡಿಸಿ ಉತ್ತಮ ಪರಿಸರ ನಿರ್ಮಾಣ ಮಾಡಿ.

     ಮತ್ತೆ ಇಲ್ಲಿ ಕಸ ಹಾಕದಂತೆ ನಗರ ಪಾಲಿಕೆ ಕಟ್ಟೆಚ್ಚರ ವಹಿಸಲಿ ಎಂದು ಸ್ಥಳೀಯರು ಒತ್ತಾಯ ಮಾಡುತ್ತಲೇ ಇದ್ದಾರೆ. ಹಲವು ಬಾರಿ ಪ್ರತಿಭಟನೆ ನಡೆಸಿ, ನಗರಪಾಲಿಕೆಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹತ್ತಾರು ವರ್ಷಗಳಾದರೂ ಸಮಸ್ಯೆ ಬಗೆಹರಿಸುವ ಪ್ರಯತ್ನಗಳಾಗಿಲ್ಲ. ಜನ ಒತ್ತಡ ಹಾಕಿದಾಗ ಅಧಿಕಾರಿಗಳು ಬಂದು ಮ್ಯಾನ್ ಹೋಲ್ ಕಸ ತೆರೆವು ಮಾಡಿ ಹೋಗುತ್ತಾರೆ. ಮತ್ತೆ ಅದೇ ಸಮಸ್ಯೆ ಮುಂದುವರೆಯುತ್ತದೆ.

     ಶಾಶ್ವತವಾಗಿ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂಬುದು ಜನರ ಆರೋಪ.ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರಿಗೆ ದಂಡ ಹಾಕಲು ನಗರಪಾಲಿಕೆ ಆಯುಕ್ತರು ಆದೇಶ ಮಾಡಿದ್ದಾರೆ, ವಿವಿಧ ಪ್ರಕರಣಗಳಲ್ಲಿ ದಂಡ ಹಾಕಲಾಗಿದೆ. ಆದರೆ, ಅಕ್ಕತಂಗಿ ಕೆರೆಗೆ, ಪಕ್ಕದ ಹೆದ್ದಾರಿಯ ಸರ್ವೀಸ್ ರಸ್ತೆಗೆ ಮೂಟೆಗಟ್ಟಲೆ ಕಸ ತಂದು ಸುರಿಯುವುದನ್ನು ತಡೆಯಲಾಗಿಲ್ಲ. ಅಂತಹವರನ್ನು ಪತ್ತೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಾಗರೀಕರು ಒತ್ತಾಯ.

ಶಾಶ್ವತ ಪರಿಹಾರ ಆಗಬೇಕು

      ರಾತ್ರಿ ವೇಳೆ ಯಾರ್ಯಾರೋ ಬಂದು ಇಲ್ಲಿ ಕಸ ಸುರಿದು ಹೋಗುತ್ತಾರೆ ಎಂದು ಸಾರ್ವಜನಿಕರು ತಮಗೂ ದೂರು ನೀಡಿದ್ದಾರೆ. ಅದನ್ನು ತಡೆಯಲು ನಗರಪಾಲಿಕೆಯಿಂದ ಕಾವಲು ಹಾಕುವ, ಕಸ ಹಾಕುವವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕೆರೆಯ ಈ ಕೊಳಕು ಪ್ರದೇಶವನ್ನು ಸ್ವಚ್ಚಗೊಳಿಸಿ, ಸಾರ್ವಜನಿಕ ಉದ್ಯಾನವನವಾಗಿ ಅಭಿವೃದ್ಧಿಪಡಿಸಿ, ಫೆನ್ಸಿಂಗ್ ಹಾಕಿ ಅಕ್ರಮ ಚಟುವಟಿಕೆ ತಡೆಯಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿರುವುದಾಗಿ 22ನೇ ವಾರ್ಡ್ ನಗರಪಾಲಿಕೆ ಸದಸ್ಯ ಶ್ರೀನಿವಾಸ್ ಹೇಳಿದರು.

     ಕಳೆದ ತಿಂಗಳು ನಗರ ಪಾಲಿಕೆ ಆಯುಕ್ತ ಭೂಬಾಲನ್ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ಮಾಡಿದ್ದರು, ನಂತರ ಅಧಿಕಾರಿಗಳು ಮ್ಯಾನ್ ಹೋಲ್ ಕಸ ತೆರವು ಮಾಡಿ, ನೀರು ಹರಿದುಹೋಗುವಂತೆ ಮಾಡಿದ್ದರು. ಕೆಲವೇ ದಿನಗಳಲ್ಲಿ ಮತ್ತೆ ಮ್ಯಾನ್‍ಹೋಲ್ ತುಂಬಿಕೊಂಡು ಅದೇ ಸಮಸ್ಯೆ ಮುಂದುವರೆದಿದೆ.

    ಹೊಸ ಪೈಪ್ ಲೈನ್ ಅಳವಡಿಸಿ ಅದರ ಹರಿಯುವಿಕೆ ಸಾಮಥ್ರ್ಯ ಹೆಚ್ಚುಮಾಡಬೇಕೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಜೊತೆಗೆ, ಕೆರೆ ಅಂಗಳಕ್ಕೆ ಕಸ ಹಾಕದಂತೆ ತಡೆಯಲು ಈ ಭಾಗದಲ್ಲಿ ಫೆನ್ಸಿಂಗ್ ಅಳವಡಿಸಿ, ಶಾಶ್ವತ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸಲಹೆ ನೀಡಿರುವುದಾಗಿ ಸದಸ್ಯ ಶ್ರೀನಿವಾಸ್ ತಿಳಿಸಿದರು.

     ಒಳಚರಂಡಿಯ ಸಮಸ್ಯೆಗಳನ್ನು ನಗರ ಪಾಲಿಕೆ ನಿವಾರಣೆ ಮಾಡಿ, ಅಲ್ಲಿ ಕೊಳಚೆ ನಿಲ್ಲದಂತೆ ಕ್ರಮ ತೆಗೆದುಕೊಳ್ಳಬೇಕು. ಅಕ್ಕತಂಗಿ ಕೆರೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ. ಕೆರೆ ಅಂಗಳವನ್ನು ಸಾರ್ವಜನಿಕ ಉದ್ಯಾನವನ ವಾಗಿ ಅಭಿವೃದ್ಧಿಪಡಿಸಿ ಸ್ವಚ್ಚ ಪರಿಸರ ನಿರ್ಮಾಣ ಮಾಡಬೇಕು ಎಂಬುದ ಸ್ಥಳೀಯರ ಆಶಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap