ಚಿತ್ರದುರ್ಗ:
ದೇಶಭಕ್ತಿ ಹೆಸರಿನಲ್ಲಿ ಅಮಾಯಕರನ್ನು ಹತ್ಯೆಗೈಯುವವರು ಮೊದಲು ಕೆರೆಗಳ ಹೂಳೆತ್ತಿಸಿ ಸಕಲ ಜೀವರಾಶಿಗಳಿಗೂ ನೀರುಣಿಸುವ ಕೆಲಸ ಮಾಡಲಿ ಎಂದು ಮೈನಾ, ನೂರೊಂದು ನೆನಪು, ಆ ದಿನಗಳು ಚಿತ್ರದ ನಟ ಚೇತನ್ ದೇಶಭಕ್ತಿಯ ಹೆಸರಿನಲ್ಲಿ ಶಾಂತಿ ಕದಡುತ್ತಿರುವವರಿಗೆ ಸವಾಲು ಹಾಕಿದರು.
ತಿಮ್ಮಣ್ಣನಾಯಕನ ಕೆರೆಗೆ ಮಂಗಳವಾರ ಭೇಟಿ ನೀಡಿ ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿತ್ರದುರ್ಗ ಐತಿಹಾಸಿಕ ಪ್ರಸಿದ್ದಿ ಪಡೆದ ಜಿಲ್ಲೆ. ಇಲ್ಲಿ ಅನೇಕ ಕೋಟೆ ಕೊತ್ತಲ ಸ್ಮಾರಕಗಳಿವೆ. ತಿಮ್ಮಣ್ಣನಾಯಕನಕೆರೆ ಒಂದು ಕಾಲದಲ್ಲಿ ಚಿತ್ರದುರ್ಗ ನಗರದ ಜನತೆಗೆ ಕುಡಿಯುವ ನೀರು ಪೂರೈಸುತ್ತಿತ್ತು. ಈಗ ಮಳೆ ಕಡಿಮೆಯಾಗಿರುವುದರಿಂದ ಬತ್ತಿ ಹೋಗಿದೆ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ ತಿಮ್ಮಣ್ಣನಾಯಕನ ಕೆರೆಯಲ್ಲಿ ಬೆಳೆದಿದ್ದ ಮುಳ್ಳಿನ ಗಿಡಗಳನ್ನು ತೆಗೆಸಿ ಹೊಳೆತ್ತಿಸುವ ಕಾರ್ಯಕ್ಕೆ ಕೈಹಾಕಿರುವುದನ್ನು ಶ್ಲಾಘಿಸಿದರು.
ಮಾನವನಿಂದ ಹಿಡಿದು ಪ್ರಾಣಿ ಪಕ್ಷಿಗಳಿಗೂ ನೀರು ಅತ್ಯಮೂಲ್ಯವಾದುದು. ಕೆರೆಗಳ ಹೂಳೆತ್ತಿದರೆ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಸುತ್ತಮುತ್ತಲಿನ ಬೋರ್‍ಗಳಲ್ಲಿ ನೀರಿನ ಮಟ್ಟ ಹೆಚ್ಚಲಿದೆ. ಇಂತಹ ಪುಣ್ಯದ ಕೆಲಸಗಳಿಗೆ ದಾನಿಗಳು ನೆರವಿನ ಹಸ್ತ ಚಾಚಬೇಕು. ದೇಶಭಕ್ತಿ ದೇಶಭಕ್ತಿ ಎಂದು ಕನವರಿಸುವವರು ಮೊದಲು ನೀರಾವರಿಗೆ ಹೆಚ್ಚು ಒತ್ತು ಕೊಟ್ಟು ನೀರಿನ ಸಂಗ್ರಹ ಮಾಡಿ ದೇಶಭಕ್ತಿಯನ್ನು ಪ್ರದರ್ಶಿಸಲಿ ಎಂದರು
ಯುವ ಕರ್ನಾಟಕ ತಂಡ ರಾಜ್ಯಾದ್ಯಂತ ಪ್ರವಾಸ ಮಾಡುತ್ತ ಈಗ ಚಿತ್ರದುರ್ಗಕ್ಕೆ ಬಂದಿದೆ. ಬೀದರ್, ಕಲ್ಬುರ್ಗಿ, ಯಾದಗಿರಿ, ಬಳ್ಳಾರಿಯಲ್ಲಿ ಅಲೆಮಾರಿ ಜನಾಂಗದವರು ಅತ್ಯಂತ ಬಡತನದಿಂದ ಬದುಕುತ್ತಿದ್ದಾರೆ. ಸರ್ಕಾರವೂ ಕೂಡ ಅಲೆಮಾರಿಗಳನ್ನು ನಿರ್ಲಕ್ಷಿಸುತ್ತಿದೆ. ಹಾಗಾಗಿ ಅಲೆಮಾರಿಗಳನ್ನು ಜಾಗೃತಗೊಳಿಸುವುದಕ್ಕಾಗಿ ರಾಜ್ಯ ಮಟ್ಟದ ಅಲೆಮಾರಿ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.ಹೆಚ್.ಅಂಜಿನಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.