ಕೆರೆಕಟ್ಟೆ ಹೂಳು ತೆಗೆದು ಮಳೆ ನೀರು ಸಂಗ್ರಹಿಸಿ : ಎಲ್ ಕೆ ಅತೀಕ್

ತುಮಕೂರು

      ಮಳೆಗಾಲ ಆರಂಭವಾಗುವುದರೊಳಗೆ ಹಳ್ಳಿಗಳ ಕೆರೆಕಟ್ಟೆಗಳನ್ನು ಪಟ್ಟಿ ಮಾಡಿ, ಜಲಾಮೃತ ಯೋಜನೆಯಡಿ ಹೂಳು ತೆಗೆದು, ನೀರು ಹರಿದುಬರುವ ಕಾಲುವೆಗಳ ಗಿಡಗೆಂಟೆ ತೆರವು ಮಾಡಿ ಹೆಚ್ಚು ಮಳೆ ನೀರು ಸಂಗ್ರಹಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

        ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿದ ಅವರು, ಮಳೆ ಬಂದಾಗ ಕೆರೆಗಳಲ್ಲಿ ಹೆಚ್ಚು ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ದನಕರುಗಳಿಗೆ ಕುಡಿಯುವ ನೀರು ಲಭ್ಯವಾಗುತ್ತದೆ, ಆ ಭಾಗದ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಹೇಳಿದರು.

      ಈ ಕಾರ್ಯ ಆಂದೋಲನದ ರೀತಿ ನಡೆಯಬೇಕು, ಡೀಸಿ ನೇತೃತ್ವದ ಜಲಾಮೃತ ಯೋಜನೆ ಜಿಲ್ಲಾ ಸಮಿತಿ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು, ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಕ್ರಮ ತೆಗೆದುಕೊಳ್ಳಬೇಕು. ಮಳೆ ಕಮ್ಮಿಯಾದರೂ ಸಹಿಸಿಕೊಳ್ಳುವ ರೀತಿ ಮಳೆ ನೀರು ಸಂಗ್ರಹಿಸುವ ಕೆಲಸ ಆಗಬೇಕು. ಮೇ ಅಂತ್ಯದೊಳಗೆ ಎಲ್ಲಾ ಕೆರೆ ಕಟ್ಟೆಗಳ ಹೂಳು ತೆಗೆದು ಹೆಚ್ಚು ನೀರು ತುಂಬಲು ನೆರವಾಗಬೇಕು ಎಂದು ಹೇಳಿದರು.

       ನರೇಗಾ ಯೋಜನೆಯಡಿ ದೊಡ್ಡ ದೊಡ್ಡ ಕೆರೆಗಳಲ್ಲಿ ಜೆಸಿಬಿ ಬಳಸಿ, ಗ್ರಾಮಸ್ಥರ ಸಹಕಾರ ಪಡೆದು ಹೂಳು ತೆಗೆಯಿರಿ, ರೈತರು ಹೂಳನ್ನು ತಮ್ಮ ಟ್ರಾಕ್ಟರ್‍ಗಳಲ್ಲಿ ತುಂಬಿಕೊಂಡು ಹೋಗುವಂತೆ ಅವರ ನೆರವು ಪಡೆಯಿರಿ. ವಾರ, ಎರಡು ವಾರದವರೆಗೆ ಒಂದು ಕರೆಯಲ್ಲಿ ಜೆಸಿಬಿ ಬೀಡು ಬಿಟ್ಟು ಈ ಕಾರ್ಯನಿರ್ವಹಣೆ ಮಾಡಲು ಯೋಜನೆ ರೂಪಿಸಿ ಎಂದು ಎಲ್ ಕೆ ಅತೀಕ್ ಅಧಿಕಾರಿಗಳಿಗೆ ತಿಳಿಸಿದರು.

      ಮಹಾತ್ಮ ಗಾಂಧಿ ನರೇಗಾ ಯೋಜನೆಗೆ 75 ಲಕ್ಷ ಮಾನವ ದಿನಸೃಷ್ಠಿ ಮಾಡಲು ಜಿಲ್ಲೆಗೆ ಗುರಿ ನೀಡಲಾಗಿದೆ. ಇದನ್ನು ಅಧಿಕಾರಿಗಳು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕು. ಎಲ್ಲಾ ಹತ್ತು ತಾಲ್ಲೂಕುಗಳಲ್ಲೂ ಜಲ ಸಂರಕ್ಷಣೆ, ಜಲಾನಯನ, ಗಿಡನೆಡುವ ಕಾರ್ಯಕ್ರಮ, ರೈತರಿಗೆ ವೈಯಕ್ತಿಕವಾಗಿ ಲಾಭವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ, ತಾಲ್ಲೂಕು ಪಂಚಾಯ್ತಿ ಇಓಗಳು ಪಿಡಿಓಗಳಿಗೆ ಹೆಚ್ಚಿನ ಜವಾಬ್ದಾರಿ ಕೊಟ್ಟು ಸಾರ್ಥಕ ರೀತಿಯಲ್ಲಿ ಕೆಲಸ ಮಾಡುವಂತೆ ಹೇಳಿದರು.

ಬಹು ಗ್ರಾಮಗಳಿಗೆ ನೀರಿಲ್ಲ

     ಬಹು ಗ್ರಾಮ ಯೋಜನೆಗಳ ಕಾಮಗಾರಿ ಮುಂದುವರೆದಿವೆಯಾದರೂ ಈ ಯೋಜನೆಯಡಿ ಗ್ರಾಮಗಳಿಗೆ ಸರಬರಾಜು ಮಾಡಲು ನೀರಿನ ಸಂಪನ್ಮೂಲವಿಲ್ಲದಿದ್ದರೆ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್, ನೀರಿನ ಮೂಲವಿಲ್ಲದೆ ಯೋಜನೆ ರೂಪಿಸಿದ್ದೂ ಸರಿಯಲ್ಲ ಎಂದರು.

       ಜಿಲ್ಲೆಯ ಎಲ್ಲಾ 33 ಬಹು ಗ್ರಾಮ ಯೋಜನೆಗಳಿಗೆ ಹೇಮಾವತಿ ನೀರೇ ಆಧಾರ, ಆದರೆ, ಯಾವ ಯೋಜನೆಗೂ ನೀರಿನ ಪೂರೈಕೆ ಸಾಧ್ಯವಾಗುತ್ತಿಲ್ಲ, ನಾಲ್ಕು ವರ್ಷಗಳ ನಂತರ ಗುಬ್ಬಿ ತಾಲ್ಲೂಕು ಸಿ ಎಸ್ ಪುರ ಕೆರೆ ಬಹು ಗ್ರಾಮ ಯೋಜನೆ ಈಗ ಚಾಲನೆಯಾಗಿದೆ, ಆದರೆ, ಅದು ದೀರ್ಘಾವಧಿ ಕಾಲ ಮುಂದುವರೆಯುವುದರ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದರು.

ತಾವರೆಕೆರೆಗೆ ನೀರಿಗೆ ಅಡ್ಡಿ

        ಶಿರಾ ತಾಲ್ಲೂಕು ತಾವರೆಕೆರೆ ಬಹುಗ್ರಾಮ ಯೋಜನೆಯಲ್ಲಿ 64 ಹಳ್ಳಿಗಳು ಸೇರಿವೆ. ಇಲ್ಲಿ ಬಹು ಗ್ರಾಮ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ. ಹಳ್ಳಿಗಳಿಗೆ ಸರಬರಾಜು ಮಾಡಲು ನೀರೇ ಇಲ್ಲ. ಶಿರಾ ಕೆರೆಯಿಂದ ಈ ಯೋಜನೆಗೆ ನೀರು ಪಡೆಯಬೇಕು. ಆದರೆ, ಶಿರಾ ನಗರಕ್ಕೆ ನೀರು ಸಾಕಾಗುವುದಿಲ್ಲ ಎಂದು ಶಿರಾ ನಗರಸಭೆಯವರು ಬಹು ಗ್ರಾಮ ಯೋಜನೆಯ ಜಾಕ್‍ವೆಲ್‍ಗೆ ಕಲ್ಲು ತುಂಬಿ ನೀರು ಹರಿಯದಂತೆ ತಡೆದಿದ್ದಾರೆ ಎಂದು ಅಧಿಕಾರಿ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದರು.

        ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅವರಿಗೆ ಸೂಚನೆ ನೀಡಿ ಅತೀಕ್ ಅವರು, ಶಿರಾ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರೊಂದಿಗೆ ಚರ್ಚೆ ಮಾಡಿ, ತಾವರೆಕೆರೆ ಬಹುಗ್ರಾಮ ಯೋಜನೆಗೆ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳುವಂತೆ ಹೇಳಿದರು.

ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ

         ಕುಡಿಯುವ ನೀರಿನ ಯೋಜನೆಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಬರುವುದಿಲ್ಲ. ಚುನಾವಣಾ ಆಯೋಗ ಅನುಮತಿ ನೀಡಿದೆ. ಅಗತ್ಯವಿರುವ ಕಡೆ ಹೊಸ ಕೊಳವೆ ಬಾವಿ ಕೊರೆಯಲು ಕೂಡಲೇ ಟೆಂಡರ್ ಕರೆಯಿರಿ. ಪ್ರತಿ ತಾಲ್ಲೂಕಿನಲ್ಲಿ ಎಷ್ಟು ಕಡೆ ಕೊರೆಯಬೇಕು ಎಂಬ ಪಟ್ಟಿ ತಯಾರಿಸಿ, ಸಿಇಓಯಿಂದ ಆದೇಶ ಪಡೆದು ಬೋರ್‍ವೆಲ್ ಕೊರೆಯಲು ಟೆಂಡರ್ ಕರೆದು ಹಳ್ಳಿಗಳಿಗೆ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದರು.

         ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ದುರಸ್ಥಿಗೊಳಿಸಿ, 15 ವರ್ಷ ಮೀರಿದ ನೀರಿನ ಘಟಕಗಳನ್ನು ತೆಗೆದು ಹೊಸದನ್ನು ಮರುಸ್ಥಾಪಿಸಿ ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಓ ಶುಭಾ ಕಲ್ಯಾಣ್ ಮತ್ತಿತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

        ಇದಕ್ಕೂ ಮುನ್ನ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರು ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿದರು. ಕೊರಟಗೆರೆ ತಾ.ನ ಬೈಚೇನಹಳ್ಳಿ, ಗಟ್ಲಹಳ್ಳಿ, ಅಕ್ಕಿರಾಂಪುರ, ಮಧುಗಿರಿ ತಾ.ನ ರಂಗನಹಳ್ಳಿ, ನಲ್ಲೇಕಾಮನಹಳ್ಳಿ, ಪಾವಗಡ ತಾ.ನ ಕಣಿವೇನಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳನ್ನು ಪರಿಶೀಲಿಸಿದರು. ಜಿಪಂ ಸಿಇಓ ಶುಭಾ ಕಲ್ಯಾಣ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪ್ರಧಾನ ಕಾರ್ಯದರ್ಶಿಗಳ ಪ್ರವಾಸದ ಜೊತೆಗಿದ್ದರು,

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap