ಕೆ ಜಿ ಎಸ್ ಟಿ ತಿದ್ದುಪಡಿಗೆ ಅನುಮೋದನೆ

ಬೆಳಗಾವಿ

         ಕರ್ನಾಟಕ ಸರಕು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2018ಕ್ಕೆ ವಿಧಾನ ಸಭೆಯಲ್ಲಿಂದು ಸರ್ವಾನುಮತದ ಅಂಗೀಕಾರ ದೊರೆಯಿತು.

         ಹಣಕಾಸು ಇಲಾಖೆ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧೇಯಕ ಮಂಡಿಸಿ, ಉದ್ದೇಶವನ್ನು ಸದನಕ್ಕೆ ವಿವರಿಸಿದರು. ಕೇಂದ್ರ ಸರ್ಕಾರ ಸರಕು ಸೇವೆ ತೆರಿಗೆ ಅಧಿನಿಯಮ 2017ನ್ನು ಕೇಂದ್ರ ಸರಕುಗಳ ಮತ್ತು ಸೇವೆಗಳ ತೆರಿಗೆ ಅಧಿನಿಯಮ 2018ರ ಮೂಲಕ ತಿದ್ದುಪಡಿ ಮಾಡಿದೆ. ಸರಕು ಮತ್ತು ಸೇವಗಳ ತೆರಿಗೆ ಏಕರೂಪದ ತೆರಿಗೆ ವ್ಯವಸ್ಥೆಯಾಗಿರುವುದರಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರಕುಗಳ ಮತ್ತು ಸೇವಾ ತೆರಿಗೆ ಮಂಡಳಿಯ ಶಿಫಾರಸ್ಸುಗಳ ಅನುಸಾರ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.

        ಜಿ.ಎಸ್.ಟಿ ಅಡಿ ರಿಟರ್ನ್ ಸಲ್ಲಿಕೆ ಕ್ರಮವನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಕರ್ನಾಟಕ ಸರಕು ಸೇವೆ ತೆರಿಗೆ ಅಧಿನಿಯಮಕ್ಕೆ ತಿದ್ದುಪಡಿ ಅವಶ್ಯವಿತ್ತು. ಈ ಮೊದಲು ತುರ್ತು ಸ್ವರೂಪವಾಗಿದ್ದ ಸುಗ್ರೀವಾಜ್ಞೆಯನ್ನು ಬದಲಾಯಿಸಿ ತಿದ್ದುಪಡಿ ಮಸೂದೆಗೆ ಸದನ ಅನುಮತಿ ನೀಡಬೇಕೆಂದು ಮನವಿ ಮಾಡಿದರು.

          ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಜೆ.ಸಿ.ಮಾಧುಸ್ವಾಮಿ, ಪಿ.ರಾಜೀವ್, ಗೋವಿಂದ ಕಾರಜೋಳ, ಅರಗ ಜ್ಞಾನೇಂದ್ರ ಸೇರಿದಂತೆ ಅನೇಕ ಶಾಸಕರು ತಿದ್ದುಪಡಿಯನ್ನು ಸ್ವಾಗತಿಸಿ, ಹಲವು ಸಲಹೆ ಸೂಚನೆಯನ್ನು ನೀಡಿದರು. ಸಭಾಧ್ಯಕ್ಷ ಪೀಠದಲ್ಲಿದ್ದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ವಿಧೇಯಕವನ್ನು ಮತಕ್ಕೆ ಹಾಕಿದಾಗ ವಿಧೇಯಕ ಸರ್ವಾನುಮತದಿಂದ ಅಂಗೀಕಾರವಾಯಿತು.

         ನಂತರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ತಂದಿರುವ ವಿಧೇಯಕಕ್ಕೆ ವಿಧಾನ ಸಭೆ ಅಂಗೀಕಾರ ನೀಡಿತು.ಮುಖ್ಯಮಂತ್ರಿ ಅವರು ವಿಧೇಯಕದ ಉದ್ದೇಶವನ್ನು ಸದನಕ್ಕೆ ವಿವರಿಸಿ ಪಾರದರ್ಶಕ ಕಾಯ್ದೆಯಲ್ಲಿ ಕೆಲವು ಸುಧಾರಣೆ ತಂದಿದ್ದು ಅದರ ನಿಯಮದಡಿ ತಿದ್ದುಪಡಿ ವಿಧೇಯಕವನ್ನು ಸದನಕ್ಕೆ ಮಂಡಿಸುತ್ತಿರುವುದಾಗಿ ತಿಳಿಸಿದರು. ಬಿಜೆಪಿಯ ಹಲವಾರು ಶಾಸಕರು ತೀವ್ರ ಆಕ್ಷೇಪ ವ್ಯೆಕ್ತಪಡಿಸಿದರು. ಸರ್ಕಾರ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದ ಹಿನ್ನಲೆಯಲ್ಲಿ ಉಪಾಧ್ಯಕ್ಷರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದಿಂದ ವಿಧೇಯಕಕ್ಕೆ ಅನುಮೋದನೆ ದೊರೆಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap