ಬೆಂಗಳೂರು
ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ತನಿಖೆಯಾದರೆ ಸತ್ಯಾಂಶ ಹೊರಬರಲಿದೆ ಎಂದು ರಾಜ್ಯಸಭಾ ಸದಸ್ಯ ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಗೆ ಈಗಾಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಅಲದೇ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಸಹ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಪಿಪಿಎ ಕಿಟ್ ಸೇರಿ ಎಲ್ಲವೂ ತನಿಖೆಯಾಗಬೇಕು.ಇದಕ್ಕೆ ಹಣ ಎಷ್ಟು ಖರ್ಚಾಗಿದೆ,ಕಿಟ್ ಮೌಲ್ಯವೇನು ಎಂಬ ಬಗ್ಗೆ ಸಮಿತಿ ತನಿಖೆ ಮಾಡಿ ಸತ್ಯಾಂಶವನ್ನು ಹೊರಹಾಕಲಿದೆ ಎಂದರು.
ಪ್ರಧಾನಿ ಮೋದಿ ಲೇಹ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಖರ್ಗೆ, ಪ್ರಧಾನಿ ಏನು ಮಾಡುತ್ತಾರೆಂಬುದು ಅವರ ಮಂತ್ರಿ ಮಂಡಲಕ್ಕೆ ಗೊತ್ತಾಗುತ್ತಿಲ್ಲ. ಮೊದಲು ಲೇಹ್‍ಗೆ ಸಚಿವ ರಾಜನಾಥ್ ಸಿಂಗ್ ಹೋಗುತ್ತಾರೆ ಎಂದಿತ್ತು. ಆದರೀಗ ಮೋದಿಯವರೇ ಹೋಗಿ ಬಂದಿದ್ದಾರೆ. ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿ ನೋಡಿ ಬಂದಾದ ಮೇಲಾದರೂ ಮೋದಿ ದೇಶದ ಜನಕ್ಕೆ ವಸ್ತುಸ್ಥಿತಿ ತಿಳಿಸಬೇಕಿತ್ತು. ಜೂನ್ 15 ರಂದು ಏನಾಯಿತು ಗಡಿಯಲ್ಲಿ ಎಂಬ ಬಗ್ಗೆ ಜನರಿಗೆ ತಿಳಿಸಬೇಕೆಂದು ಕಾಂಗ್ರೆಸ್ ಮೋದಿಯನ್ನು ಒತ್ತಾಯಿಸುತ್ತಲೇ ಬಂದಿದೆ. ಈಗ ಲೇಹ್ ಭೇಟಿ ಮಾಡಿ ಬಂದಿರುವ ಪ್ರಧಾನಿ ಯಾವ ವಿಚಾರವನ್ನು ಜನರ ಮುಂದಿಡುತ್ತಾರೆಯೋ ಕಾದು ನೋಡೋಣ ಎಂದು ಸೂಚ್ಯವಾಗಿ ಹೇಳಿದರು.
ಕೇಂದ್ರವನ್ನು ಪ್ರಶ್ನಿಸುವವರನ್ನು ಮತ್ತು ಸರ್ಕಾರಕ್ಕೆ ಒಳ್ಳೆಯ ಸಲಹೆ ಕೊಟ್ಟರೂ ದೇಶದ್ರೋಹಿಗಳು ಎಂದು ಹೇಳುತ್ತಾರೆ. ಮೋದಿ ಈಗ ತಾವಾಗಿಯೇ ಸತ್ಯಾಂಶವನ್ನು ಬಹಿರಂಗಪಡಿಸಲಿ. ದೇಶ ಒಟ್ಟಾಗಿರಬೇಕು, ಸೈನಿಕರಿಗೆ ಬೆಂಬಲ ಕೊಡಬೇಕು, ದೇಶವನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಒಂದಿಂಚೂ ಭೂಮಿ ಬೇರೆಯವರಿಗೆ ಹೋಗಬಾರದು. ಅದಕ್ಕೆ ಪಕ್ಷ ಬೆಂಬಲಿಸಲಿದೆ.ಒಂದು ಕಡೆ ಕೋವಿಡ್, ಇನ್ನೊಂದೆಡೆ ಚೀನಾ ಉಪಟಳ. ಇವು ಒಗ್ಗಟ್ಟಾಗಿರಬೇಕಾದ ದಿನಗಳು.ವಾಸ್ತವಾಂಶವನ್ನು ಜನರಿಗೆ ತಿಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
