ಜೂ.19ರಂದು ಖರ್ಗೆ ನಾಮಪತ್ರ ಸಲ್ಲಿಕೆ..!

ಬೆಂಗಳೂರು

     ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಜೂನ್ 19 ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ.

    ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳೂ ಆಗಿರುವ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯರಾದ ಪರಮೇಶ್ವರ್, ಖಂಡ್ರೆ, ಸತೀಶ್ ಜಾರಿಕಿಹೊಳಿ, ಆರ್.ವಿ. ದೇಶಪಾಂಡೆ, ಯು.ಟಿ ಖಾದರ್, ಪ್ರಿಯಾಂಕ್ ಖರ್ಗೆ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

     ನಾಮಪತ್ರ ಸಲ್ಲಿಕೆಗೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಖರ್ಗೆ ಅವರ ಗೆಲುವಿಗೆ ಸಹಕರಿಸುವಂತೆ ನಿರ್ಣಯ ಕೈ ಗೊಳ್ಳಲಾಯಿತು. ಶಾಸಕರ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಅವರಿಂದ ಖರ್ಗೆ ಬಿ ಫಾರಂ ಪಡೆದರು. ಕೋವಿಡ್ 19 ಸೋಂಕು ನಿಯಂತ್ರಣ ಉದ್ದೇಶದಿಂದ ಕಟ್ಟುನಿಟ್ಟಿನ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವ ಸೂಚನೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ನಾಮಪತ್ರ ಸಲ್ಲಿಸುವಾಗ ಅವಕಾಶ ಕಲ್ಪಿಸಿರಲಿಲ್ಲ.

     ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನವಾಗಿದ್ದು, ಜೂನ್ 10 ರಂದು ನಾಮಪತ್ರ ಪರಿಶೀಲನೆ 12 ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಇಂದು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರನ್ನು ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲಿಸಿದೆ.  

     ಭಾನುವಾರ ರಾತ್ರಿ ದೇವೇಗೌಡ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕರೆ ಮಾಡಿ, ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು. ನೀವು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ ನಿಮಗೆ ಸಂಪೂರ್ಣ ಬೆಂಬಲ ನೀಡಲಿದೆ, ನೀವು ನಾಮಪತ್ರ ಸಲ್ಲಿಸಿ, ಉಳಿದಿದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಎಐಸಿಸಿ ನಾಯಕಿ ಭರವಸೆ ನೀಡಿದ್ದರು.
 
      ಇದಕ್ಕೂ ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು.  ಈ ಸಂದರ್ಭದಲ್ಲಿ ಖರ್ಗೆ ಅವರು ಸಹ ಪಾಲ್ಗೊಂಡಿದ್ದರು. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ನಾಯಕರಾದ ಪರಮೇಶ್ವರ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಕೆ.ಎಚ್. ಮುನಿಯಪ್ಪ, ಹರಿಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap