ತುಮಕೂರು
ರಾಜ್ಯ ಸರಕಾರ ಖಾಸಗಿ ಅನುದಾನ ರಹಿತ ಶಾಲೆಗಳ ಮೇಲೆ ನಿರಂತರವಾಗಿ ಮಾಹಿತಿ ಪಡೆಯುವ ನೆಪದಲ್ಲಿ ಕಿರುಕುಳ ಮಾಡುತ್ತಿವೆ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಹಾಲನೂರು ಲೇಪಾಕ್ಷ ಆರೋಪ ಮಾಡಿದರು.
ನಗರದ ಮಾರುತಿ ಇಂಟರ್‍ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ಆರ್‍ಟಿಇ ತಂದು ಆರು ವರ್ಷಗಳಾಗಿವೆ. ಈ ಕಾಯ್ದೆಯ ಪ್ರಕಾರ ಆರ್‍ಟಿಇ ಮಕ್ಕಳ ಶುಲ್ಕವನ್ನು ಸರ್ಕಾರ ಬಜೆಟ್‍ನಲ್ಲಿ ಮೀಸಲಿಟ್ಟಿದ್ದು, ಅದರಂತೆ ಸೆಪ್ಟಂಬರ್ ತಿಂಗಳಲ್ಲಿ ಒಂದು ಕಂತಿನಲ್ಲಿ ಹಣ ಬಿಡುಗಡೆ ಮಾಡಬೇಕು. ಜನವರಿಯಲ್ಲಿ ಎರಡನೇ ಕಂತು ಬಿಡುಗಡೆ ಮಾಡಬೇಕು. ಆದರೆ ಈ ಬಾರಿ ಜೂನ್ ತಿಂಗಳು ಬಂದರೂ ಇಲ್ಲಿಯವರೆಗೆ ಎರಡನೇ ಕಂತಿನ ಹಣ ಬಂದಿಲ್ಲ ಎಂದು ಆರೋಪಿಸಿದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಆರ್‍ಟಿಇ ಹಣವನ್ನು ಬಿಡುಗಡೆ ಮಾಡಿದ್ದಾರೆ. ಆದರೆ 400ಕ್ಕೂ ಹೆಚ್ಚು ಶಾಲೆಗಳಿರುವ ತುಮಕೂರು ಶೈಕ್ಷಣಿಕ ಜಿಲ್ಲೆಗೆ ಹಣ ಬಿಡುಗಡೆ ಮಾಡಿಲ್ಲ. ಕೇಳಿದರೆ ಸ್ಪಷ್ಠ ಉತ್ತರ ದೊರೆಯುತ್ತಿಲ್ಲ. ಕೇವಲ ಹಣ ಖಾಲಿ ಆಗಿದೆ. ಹಣ ಬಂದಿಲ್ಲ ಎಂಬ ಉಡಾಫೆ ಉತ್ತರಗಳನ್ನು ಹೇಳುತ್ತಿದ್ದಾರೆ. ಅಲ್ಲದೆ ಶಾಲೆಗಳ ಮಾಹಿತಿ ಕೇಳುವ ನೆಪದಲ್ಲಿ ಅಧಿಕಾರಿಗಳು ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜೂನ್ 30ರೊಳಗೆ ಆರ್‍ಟಿಇ ಹಣವನ್ನು ಬಿಡುಗಡೆ ಮಾಡದಿದ್ದರೆ ಶಾಲೆಗಳನ್ನು ಬಾಯ್ಕಟ್ ಮಾಡಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಪಠ್ಯ ಪುಸ್ತಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇನ್ನೂ ಪಠ್ಯ ಪುಸ್ತಕ ಬಂದಿಲ್ಲ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬರಬೇಕಿತ್ತು. ಜೂನ್ ತಿಂಗಳಾದರೂ ಶೇ.75 ರಷ್ಟು ಪಠ್ಯ ನೀಡಿಲ್ಲ. ಕಳೆದ ಬಾರಿ ಶೇ.30 ರಷ್ಟು ಪಠ್ಯ ಬಂದಿರಲಿಲ್ಲ. ನಾವು ನೀಡಿದ ಇಂಡೆಂಟ್‍ಗೆ ಪೂರ್ತಿಯಾಗಿ ಹಣ ಪಡೆಯುತ್ತಾರೆ ಆದರೆ ಪುಸ್ತಕ ಮಾತ್ರ ನೀಡುವುದಿಲ್ಲ. ಮೂರು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ. ಅಲ್ಲದೇ ಜಿಎಸ್ ಟಿ ನೆಪದಲ್ಲಿ ಶುಲ್ಕ ಹೆಚ್ಚು ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲಿಯೂ ಯಾವುದೇ ರೀತಿಯ ಮಾಹಿತಿ ನೀಡುತ್ತಿಲ್ಲ ಎಂದು ಜಂಟಿ ಕಾರ್ಯದರ್ಶಿ ಲೋಕೇಶ್ ತಿಳಿಸಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಾವು ಎಲ್ಲಾ ರೀತಿಯ ಸ್ಪಂದನೆ ನೀಡುತ್ತಿದ್ದರೂ ಅವರ ಕಿರುಕುಳ ಮಾತ್ರ ತಪ್ಪಿಲ್ಲ. ಶಾಲೆಗೆ ಭೇಟಿ ನೀಡುವ ಅಧಿಕಾರಿಗಳು 30 ಮಕ್ಕಳಿಗೆ ಒಂದು ಶೌಚಾಲಯ ಇದೆಯೇ ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಸರಕಾರಿ ಶಾಲೆಗಳಲ್ಲಿ ಎಷ್ಟು ಶೌಚಾಲಯ ಇದೆ. ಅದನ್ನು ಅವಲೋಕನ ಮಾಡಬೇಕು. ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.
ಸರಕಾರಿ ಶಾಲೆಯಲ್ಲಿ ನೀಡುವ ಮೂಲಭೂತ ಸೌಲಭ್ಯಗಳಿಗಿಂತ ಹೆಚ್ಚಿನ ಸೌಲಭ್ಯಗಳನ್ನು ನಾವು ನೀಡಿದ್ದೇವೆ. ಆದರೂ ಪದೇ ಪದೇ ನಮ್ಮ ಶಾಲೆಗಳ ಮೇಲೆ ಗಧಾ ಪ್ರಹಾರ ಮಾಡಿದರೆ ನಾವು ಶಾಲೆಗಳನ್ನು ಹೇಗೆ ನಡೆಸುವುದು. ಮಕ್ಕಳಿಗೆ ಪಾಠ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಡಾ.ಜಯರಾಂ ರಾವ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ಪ್ರಕಾಶ್, ಮಂಜುನಾಥ್, ಖಜಾಂಚಿ ಚಂದ್ರಶೇಖರ್, ನಿಖಿಲ್, ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.