ಖಾಸಗಿ ಕಾಲೇಜಿಗೆ ಸಡ್ಡು ಹೊಡೆದ ಸರ್ಕಾರಿ ಪಿಯು ಕಾಲೇಜು

ಹುಳಿಯಾರು:

    ಸರ್ಕಾರಿ ಶಾಲಾ, ಕಾಲೇಜುಗಳೆಂದರೆ ಮೂಗು ಮುರಿಯುವ ಇಂದಿನ ಕಾಲದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪಠ್ಯ ಬೋದನೆ, ಫಲಿತಾಂಶ, ಪ್ರವೇಶಾತಿಯಲ್ಲಿ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದಿದೆಯಲ್ಲದೆ ಜಿಲ್ಲೆಯಲ್ಲೇ ಗುಣಮಟ್ಟದ ಶಿಕ್ಷಣದಿಂದ ಸದ್ದು ಮಾಡುತ್ತಿದೆ.

    ಹೌದು, ಒಂದು ಕಾಲದಲ್ಲಿ ಪ್ರವೇಶಾತಿ ಕುಂಠಿತವಾಗಿ ಮುಚ್ಚುವ ಹಂತಕ್ಕೆ ಬಂದಿದ್ದ ಈ ಕಾಲೇಜಿಗೆ ಇಂದು ಪ್ರವೇಶಾತಿ ಪಡೆಯಲು ನೂಗು ನುಗ್ಗಲು ಏರ್ಪಟ್ಟಿದೆ. ಪ್ರವೇಶಾತಿ ಅಂತಿಮ ದಿನ ಇನ್ನೂ ಉಳಿದಿರುವಾಗಲೇ ದಾಖಲೆಯ ಪ್ರವೇಶಾತಿ ಬಂದಿದೆ. ನಿತ್ಯ ಕನಿಷ್ಠ ಇಪ್ಪತ್ತೈದರಿಂದ ಮೂವತ್ತು ಮಂದಿ ಪ್ರವೇಶಾತಿಗೆ ಅರ್ಜಿ ಪಡೆಯುತ್ತಿದ್ದು ದಾಖಲಾತಿಗಾಗಿಯೇ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ.

ದಾಖಲೆಯ ದಾಖಲಾತಿಗೆ ಫಲಿತಾಂಶ ಕಾರಣ

    ಕಳೆದ 6 ವರ್ಷಗಳ ಹಿಂದಷ್ಟೆ ಕೇವಲ ಇನ್ನೂರು ವಿದ್ಯಾರ್ಥಿಗಳ ದಾಖಲಾತಿಯಿದ್ದ ಈ ಕಾಲೇಜಿನಲ್ಲಿ ಇಂದು ನಾಲ್ಕು ನೂರು ದಾಟಿರುವುದಕ್ಕೆ ಕಾಲೇಜಿನ ಫಲಿತಾಂಶ ಮುಖ್ಯ ಕಾರಣವಾಗಿದೆ. 6 ವರ್ಷಗಳ ಹಿಂದೆ ಶೇ.72 ಫಲಿತಾಂಶ ಬರುತ್ತಿದ್ದ ಕಾಲೇಜಿನಲ್ಲಿ ಈ ವರ್ಷ ಶೇ.91.3 ರಷ್ಟು ಬಂದಿದೆ. ಅಲ್ಲದೆ ಪತ್ರಿ ವರ್ಷ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ. ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದಾರೆ. ಕೆಲವು ವಿಷಯದಲ್ಲಂತೂ ನೂರಕ್ಕೆ ನೂರು ಅಂಕಗಳನ್ನು ಪಡೆಯುತ್ತಿದ್ದಾರೆ.

 ವರ್ಷ ಪೂರ್ತಿ ಇಲ್ಲಿ ತರಗತಿಗಳೆ

     ಉತ್ತಮ ಫಲಿತಾಂಶದ ಹಿಂದೆ ಗುಣಮಟ್ಟದ ಶಿಕ್ಷಣ ಇರುವುದು ಈ ಕಾಲೇಜಿನ ಹೆಗ್ಗಳಿಗೆ. ಕಳೆದ 3 ವರ್ಷಗಳಿಂದಲೂ ಇಲ್ಲಿ ವರ್ಷ ಪೂರ್ತಿ ತರಗತಿಗಳು ನಡೆಯುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ರಾಷ್ಟ್ರೀಯ ಹಬ್ಬ, ಭಾನುವಾರ, ಬಂದ್, ದಸರ ರಜೆ, ಬೇಸಿಗೆ ರಜೆ ಹೀಗೆ ಯಾವ ರಜೆಯಲ್ಲೂ ಕಾಲೇಜಿಗೆ ಬೀಗ ಜಡಿದ ನಿದರ್ಶನವಿಲ್ಲ. ಪ್ರಥಮ ವರ್ಷ ಪ್ರವೇಶ ಪಡೆದು ಜೂನ್ 1 ರಂದು ಕಾಲೇಜಿಗೆ ಹಾಜರಾದರೆ ದ್ವಿತೀಯ ಪಿಯುಸಿ ಪರೀಕ್ಷೆವರೆವಿಗೂ ಇಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಮಾಡಲಾಗುತ್ತದೆ. ಇಲಾಖೆಯ ಸಹಕಾರದಲ್ಲಿ ಆನ್‍ಲೈನ್ ಕ್ಲಾಸ್ ಮಾಡಲಾಗುತ್ತದೆ.

 ಹಾಜರಾತಿಗೆ ಬಯೋಮೆಟ್ರಿಕ್ ಪದ್ಧತಿ ಜಾರಿ

       ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಂತೆ ಸಂಜೆವರೆವಿಗೂ ಈ ಕಾಲೇಜಿನ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಹಿಡಿದಿಟ್ಟುಕೊಳ್ಳುವುದು ಹೆಗ್ಗಳಿಕೆ. ಚಿತ್ರಮಂದಿರದ ಕಡೆ ಮುಖ ಮಾಡುವ ವಿದ್ಯಾರ್ಥಿಗಳನ್ನು ಉಪನ್ಯಾಸಕರೇ ಚಿತ್ರಮಂದಿರಕ್ಕೆ ಹೋಗಿ ಪೋಟೋ ತೆಗೆದು ಪೋಷಕರಿಗೆ ವಿಷಯ ಮುಟ್ಟಿಸುವ ಮೂಲಕ ಫಿಲಂಗೆ ಹೋಗುವುದನ್ನು ತಡೆದರು. ಕಾಲೇಜಿಗೆ ಗೈರಾದರೆ ಪೋಷಕರ ಮೊಬೈಲ್ ಗೆ ಮೆಸೆಜ್ ಕಳುಹಿಸುವ ಮೂಲಕ ಗೈರು ಹಾಜರಿ ತೆಡೆದರು. ಬಹುಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಪದ್ಧತಿ ಜಾರಿ ಮಾಡಿ ಸಂಜೆ 5 ವರೆವಿಗೂ ಇದ್ದವರಿಗೆ ಮಾತ್ರ ಹಾಜರಾತಿ ಕೊಡುವುದಾಗಿ ಹೇಳಿ ಮಧ್ಯಾಹ್ನದ ಊಟ ಸಹಿತ ಕಾಲೇಜಿಗೆ ವಿದ್ಯಾರ್ಥಿಗಳು ಬರುವಂತೆ ಬದಲಾಯಿಸಿದ್ದಾರೆ.

 ಉಚಿತ ಸಿಇಟಿ, ಎನ್‍ಇಇಟಿ ಕೋಚಿಂಗ್

       ತುಮಕೂರು, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು ಗಡಿ ಗ್ರಾಮಗಳಿಗೆ ಹುಳಿಯಾರು ಶೈಕ್ಷಣಿಕ ಕೇಂದ್ರವಾಗಿದ್ದರೂ ಪಿಯುಸಿಯಲ್ಲಿ ಸೈನ್ಸ್ ಪಡೆಯಲಿಚ್ಚಿಸುವವರು ತಿಪಟೂರು, ತುಮಕೂರು, ಹೊಸದುರ್ಗ ಸೇರಿದಂತೆ ನೆರೆಯ ಜಿಲ್ಲೆಗೆ ಹೋಗುತ್ತಿದ್ದರು. ಆದರೆ ಈಗ ಸೈನ್ಸ್ ಓದುವವರಿಗೆ ಹುಳಿಯಾರು ಕಾಲೇಜು ಹಾಟ್ ಫೇವರೆಟ್ ಆಗಿ ಮಾರ್ಪಟ್ಟಿದೆ. ಹಾಗಾಗಿಯೇ ಕಳೆದ 5 ವರ್ಷಗಳ ಹಿಂದೆ ಸೈನ್ಸ್‍ಗೆ ಕೇವಲ 30 ವಿದ್ಯಾರ್ಥಿಗಳು ಓದುತ್ತಿದ್ದ ಕಾಲೇಜಿನಲ್ಲಿ ಈಗ 100 ರ ಗಡಿ ದಾಟಿದೆ. ಇದಕ್ಕೆ ಇಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಸಿಇಟಿ, ಎನ್‍ಇಇಟಿ ತರಗತಿಗಳನ್ನು ಉಚಿತವಾಗಿ ನಡೆಸುತ್ತಿರುವುದು ಹಾಗೂ ಉತ್ತಮ ಫಲಿತಾಂಶ ಕಾರಣ ಎನ್ನಲಾಗುತ್ತಿದೆ.

      ಸರ್ಕಾರಿ ಕಾಲೇಜನ್ನು ಈ ಮಟ್ಟಿಗೆ ಕಟ್ಟಲು ಪ್ರಾಚಾರ್ಯರು ಸೇರಿದಂತೆ ಉಪನ್ಯಾಸಕ ವೃಂದ ಶ್ರಮವಿದೆ. ಇಲ್ಲಿ ಪ್ರಾಚಾರ್ಯ, ಉಪನ್ಯಾಸಕ, ಗುಮಾಸ್ತ ಎನ್ನುವ ಬೇಧವಿಲ್ಲದೆ ಎಲ್ಲರೂ ಎಲ್ಲಾ ಕೆಲಸವನ್ನು ಪ್ರೀತಿಯಿಂದ ಮಾಡುತ್ತಾರೆ. ತಮ್ಮ ಸಬ್ಜೆಟ್‍ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಉಪನ್ಯಾಸರೇ ತಮ್ಮ ಹಣದಲ್ಲಿ ಪುರಸ್ಕರಿಸುತ್ತಾರೆ. ಆನ್‍ಲೈನ್ ಅಪ್ ಲೋಡ್ ಕೆಲಸವನ್ನೂ ಸಹ ಸಿಬ್ಬಂಧಿಯೇ ಮಾಡ್ತಾರೆ. ಒಟ್ಟಾರೆ ಹುಳಿಯಾರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವಣ ನಿರ್ಮಾಣವಾಗಿದ್ದು ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಮೂಡಿದೆ. ಹಾಗಾಗಿಯೇ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.90 ತಕ್ಕೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸಹ ಪಟ್ಟಣ ಪ್ರದೇಶಗಳಿಗೆ ಹೋಗುವುದಕ್ಕಿಂತ ಇಲ್ಲಿಯೇ ಕಲಿತರೆ ಒಳಿತು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ. ಹಾಗಾಗಿ ದಾಖಲೆಯ ಮಟ್ಟಕ್ಕೆ ದಾಖಲಾತಿಗಳಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link