ತುಮಕೂರು
ಬಾಕಿ ವೇತನ ಹಾಗೂ ಪಿಎಫ್ ನೀಡಲು ಒತ್ತಾಯಿಸಿ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳ ಅಡಿಗೆ ಸಿಬ್ಬಂದಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಖಾಯಂ ಅಡಿಗೆಯವರು ವರ್ಗಾವಣೆಯಾಗಿ ಬಂದಿದ್ದಾರೆಂದು ಇಲ್ಲಿದ್ದ ಮೂವರು ಹೊರಗುತ್ತಿಗೆ ಅಡಿಗೆ ಸಿಬ್ಬಂದಿಯನ್ನು ನಾಳೆಯಿಂದ ಕೆಲಸಕ್ಕೆ ಬರಬೇಡಿ, ಖಾಯಂ ಸಿಬ್ಬಂದಿ ಬಂದಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್‍ಗಳು ಹೇಳಿದ್ದಾರೆ. ಹತ್ತಾರು ವರ್ಷಗಳಿಂದ ಇಲ್ಲಿ ಕೆಲಸ ಮಾಡಿದ ನಮ್ಮನ್ನು ಏಕಾಏಕಿ ಕೆಲಸದಿಂದ ತೆಗೆದರೆ ತಮ್ಮ ಜೀವನ ಹೇಗೆ, ಕೆಲಸದಿಂದ ತೆಗೆಯವ ಪ್ರಯತ್ನ ಕೈಬಿಡಬೇಕು ಎಂದು ಒತ್ತಾಯಿಸಿದರು.
ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಈ ಹೋರಾಟ ಬೆಂಬಲಿಸಿ ಭಾಗವಹಿಸಿದ್ದರು. ಮೂರುನಾಲ್ಕು ತಿಂಗಳಿನಿಂದ ಅಡಿಗೆ ಸಿಬ್ಬಂದಿಗೆ ಸಂಬಳ ಕೊಟ್ಟಿಲ್ಲ. ಗುತ್ತಿಗೆ ಏಜೆನ್ಸಿಯವರು ಯಾರು ಎಂಬುದು ಗೊತ್ತಿಲ್ಲ, ಅವರ ಮುಖವನ್ನೂ ನೋಡಿಲ್ಲ, ಯಾರನ್ನು ಸಂಬಳ ಕೇಳುವುದು. ಸಂಬಳವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಡಿಗೆ ಸಿಬ್ಬಂದಿ ಅಳಲು ತೋಡಿಕೊಂಡರು. ಜೊತೆಗೆ ಇವರೆಗೆ ಹೊಗುತ್ತಿಗೆ ಸಿಬ್ಬಂದಿಗೆ ಪಿಎಫ್ ನೀಡಿಲ್ಲ, ಪಿಎಫ್ ಸಂಬಂಧಿಸಿದ ದಾಖಲಾತಿಗಳನ್ನು ಯಾವ ಸಿಬ್ಬಂದಿಗೂ ನೀಡಿಲ್ಲ ಎಂದರು.
ಮನವಿ ಸ್ವೀಕರಿಸಿದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಗುತ್ತಿಗೆದಾರರಾದ ಬಾಲಾಜಿ ಏಜೆನ್ಸಿಯವರೊಂದಿಗೆ ಮಾತುಕತೆ ನಡೆಸಿದ್ದು ಶೀಘ್ರವಾಗಿ ಕನಿಷ್ಠ ಎರಡು ತಿಂಗಳ ಸಂಬಳ ನೀಡುವಂತೆ ಸೂಚಿಸಿದ್ದಾಗಿ ಹೇಳಿದರು. ಪಿಎಫ್ ಹಣ ಬಿಡುಗಡೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಗುತ್ತಿಗೆದಾರರಿಗೆ ಇಲಾಖೆಯಿಂದ 80 ಲಕ್ಷ ರೂ. ಪಾವತಿ ಆಗಬೇಕಾಗಿರುವುದು ಬಾಕಿ ಇದೆ. ಆದರೆ, ಗುತ್ತಿಗೆ ನಿಯಮದಂತೆ ಇಲಾಖೆ ಹಣಕ್ಕೆ ಕಾಯದೆ ಗುತ್ತಿಗೆದಾರರು ಪ್ರತಿ ತಿಂಗಳೂ ಸಿಬ್ಬಂದಿಗೆ ಸಂಬಳ ನೀಡಬೇಕು. ಆದರೆ ನಾಲ್ಕು ತಿಂಗಳಾದರೂ ಸಂಬಳವಿಲ್ಲ ಎಂದು ಅಡಿಗೆ ಸಿಬ್ಬಂದಿ ಹೇಳಿದರು.
ನಗರದಲ್ಲಿ ಸಮಾಜ ಕಲ್ಯಾಣ ಇಲಾಕೆಯ 23 ಹಾಸ್ಟೆಗಳಿದ್ದು ಎಲ್ಲಾ ಹೊರಗುತ್ತಿಗೆಯ ಅಡಿಗೆ ಸಿಬ್ಬಂದಿಯದು ಇದೇ ಸಮಸ್ಯೆಯಾಗಿದೆ. ಇವರಿಗೆ ವಾರದ ರಜೆಯೂ ಇಲ್ಲ. ಸಂಬಳ, ಸೌಲಭ್ಯಗಳೂ ಇಲ್ಲ ಎಂದು ಹೇಳಿದರು.ನಗರದ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಹೆಚ್ಚುವರಿಯಾಗಿ 53 ಹೊರಗುತ್ತಿಗೆ ಸಿಬ್ಬಂದಿ ನೇಮಿಸಲಾಗಿದೆ. ಆದರೆ ಯಾರನ್ನೂ ಕೆಲಸದಿಂದ ತೆಗೆಯುವ ಪ್ರಶ್ನೆಯೇ ಇಲ್ಲ, ಅವರಿಗೆಲ್ಲಾ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಅಧಿಕಾರಿ ಶ್ರೀನಿವಾಸ್ ಹೇಳಿದರು.
ಸಂಘಟನೆಗಳ ಮುಖಂಡರಾದ ಪಿ ಸಿ ರಾಮಯ್ಯ, ಕೆಂಪರಾಜು, ಕುಮಾರ್ ಮಾದರ್, ಪಿ ಎನ್ ರಾಮಯ್ಯ ಮೊದಲಾದವರು ಈ ವೇಳೆ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
