ಬೆಳಗಾವಿ
ಪ್ರತಿವರ್ಷದಂತೆ ಈ ಬಾರಿಯೂ ಕಿತ್ತೂರು ಉತ್ಸವವನ್ನು ಅಕ್ಟೋಬರ್ 23, 24 ಹಾಗೂ 25 ರಂದು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕಿತ್ತೂರು ಉತ್ಸವ-2019 ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷ ಕೂಡಾ ಉತ್ಸವದಲ್ಲಿ ಸ್ಥಳೀಯ ಹಾಗೂ ಹೊರಗಿನ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಉತ್ಸವದಲ್ಲಿ ಹೆಚ್ಚಿನ ರೀತಿಯಲ್ಲಿ ಮಳಿಗೆಗಳು ಬರುವ ಸಾಧ್ಯತೆ ಇದೆ ಎಂದರು.
ಕಿತ್ತೂರು ಉತ್ಸವಕ್ಕೆ 1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಹಾಗೂ ರಾಜ್ಯ ಮಟ್ಟದ ಕೃಷಿ ವಿಚಾರ ಸಂಕಿರಣ, ರಾಜ್ಯ ಮಟ್ಟದ ಕವಿ ಗೋಷ್ಠಿ, ಪುರುಷ ಹಾಗೂ ಮಹಿಳೆಯರಿಗೆ ಕುಸ್ತಿ, ಮುಕ್ತ ಕಬಡ್ಡಿ, ವಾಲಿಬಾಲ್, ಸೈಕ್ಲಿಂಗ್ ಕ್ರೀಡಾ ಕೂಟಗಳನ್ನು ಸಹ ಆಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ನಾಡ ಹಬ್ಬವಾದ ಕಿತ್ತೂರು ಉತ್ಸವದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಿತ್ತೂರ ಚೆನ್ನಮ್ಮ ಉತ್ಸವ ಕಾರ್ಯಕ್ರಮ ದೇಶದ ಹೆಮ್ಮೆಯ ಕಾರ್ಯಕ್ರಮವಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸ್ವಾತಂತ್ರ್ಯ ಕಹಳೆಯನ್ನು ಮೊಳಗಿಸಿದ ಮೊದಲ ಮಹಿಳೆ ಹಾಗೂ ಸ್ವಾತಂತ್ರ್ಯ ಮೂಲಭೂತ ಕಾರಣೀಕೃತರಾದವರು ವೀರ ರಾಣಿ ಚೆನ್ನಮ್ಮ ಅವರು ಎಂದು ಹೇಳಿದರು.
ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅಕ್ಟೋಬರ್ 23 ರಂದು ಸಂಜೆ 7 ಗಂಟೆಗೆ ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆ 8-30 ಗಂಟೆಗೆ ಬೆಳಗಾವಿ ಸಮೀಪದ ಕಾಕತಿಯಲ್ಲಿ ರಾಣಿ ಚೆನ್ನಮ್ಮ ಮೂರ್ತಿಯ ಪೂಜೆ ನಡೆಯಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಿತ್ತೂರು ಉತ್ಸವ-2019 ರ ಪ್ರಚಾರ ಸಾಮಗ್ರಿಗಳನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಬಿಡುಗಡೆಗೊಳಿಸಿದರು.ಅಪರ ಜಿಲ್ಲಾಧಿಕಾರಿ ಅಶೋಕ ದುಡಗಂಟಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕಿತ್ತೂರ ತಹಸೀಲ್ದಾರ್ ಪ್ರವೀಣ ಜೈನ್ ಅವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ