ಬೆಂಗಳೂರು
ಗ್ರಾಮೀಣ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಹೆಚ್ಚಿಸುವಲ್ಲಿ ಕೆಎಂಎಫ್ ಪಾತ್ರ ಮಹತ್ವದ್ದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್0) ನ ನೂತನ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಶೇ. 80 ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರು ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿದ್ದು, ಮತ್ತು ಅತಿ ಸಣ್ಣ ರೈತರು ಹಾಲು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.14 ಸಾವಿರ ಸ್ವಸಹಾಯ ಸಂಘಗಳಿವೆ. 25 ಲಕ್ಷ ಸದಸ್ಯರು ಅದರ ಲಾಭ ಪಡೆಯುತ್ತಿದ್ದಾರೆ. ಪ್ರತಿನಿತ್ಯ 84.43 ಲಕ್ಷ ಲೀಟರ್ ಹಾಲು ನಗರಗಳಿಗೆ ಸರಬರಾಜು ಆಗಿದ್ದು, 24 ಕೋಟಿ ರೂ. ಆದಾಯ ದೊರೆಯುತ್ತಿದೆ ಎಂದರು.
ದೇಶದಲ್ಲಿ ಗುಜರಾತ್ ನ ಅಮೂಲ್ ಅನ್ನು ಹೊರತುಪಡಿಸಿದರೆ ಕೆಎಂಎಫ್ ಎರಡನೇ ಸ್ಥಾನದಲ್ಲಿದೆ. ಹೈನುಗಾರಿಕೆ ಅಭಿವೃದ್ಧಿಗೆ ಉತ್ತಮ ತಳಿಯ ಜಾನುವಾರುಗಳನ್ನು ಉತ್ಪಾದಿಸುವ ಅಗತ್ಯವಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಇದನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದರು.
ಇದಕ್ಕೂ ಮೊದಲು ಮಾತನಾಡಿದ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಎಲ್. ಜಾರಕಿಹೊಳಿ, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಹಾಲು ಮಾರಾಟಕ್ಕೆ ಸರ್ಕಾರ ಒದಗಿಸುತ್ತಿರುವ ಪ್ರೋತ್ಸಾಹ ಧನವನ್ನು 5ರೂ.ಗಳಿಂದ 6 ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಮನವಿ ಮಾಡಿದರು.ಗಲ್ಫ್ ರಾಷ್ಟ್ರಗಳಲ್ಲಿ ಕೂಡ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆಯಿದ್ದು, ಮುಂದಿನ ದಿನಗಳಲ್ಲಿ ಅದನ್ನು ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕದಂತೆ ಒಕ್ಕೂಟದ ಸದಸ್ಯರು ಪ್ರಧಾನಿ ನರೇಂದ್ರ ಮೋದಿಗೆ ಬರೆದಿದ್ದರು. ಈ ಸಂಬಂಧ ಯಡಿಯೂರಪ್ಪ ಅವರನ್ನು ಮನವಿ ಮಾಡಿದಾಗ, ಅವರ ತಕ್ಷಣ ಕೇಂದ್ರ ಸಚಿವರಿಗೆ ಕರೆ ಮಾಡಿ ಒಪ್ಪಂದದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು. ಒಪ್ಪಂದದಿಂದ ಕೇಂದ್ರ ಹಿಂದೆ ಸರಿಯುವಲ್ಲಿ ಯಡಿಯೂರಪ್ಪ ಅವರ ಪಾತ್ರ ಮಹತ್ವದ್ದು ಎಂದರು.
ಕೆಎಂಎಫ್ ನೂತನವಾಗಿ ತಯಾರಿಸಿದ ನಂದಿನಿ ಚೀಸ್, ದೇಶಿ ಹಾಲು, ಕ್ರೀಮ್, ಹಲಸು, ಸ್ಟ್ರಾಬೆರಿ, ಮಾವು, ಸೇಬು, ಸೀಬೆಕಾಯಿ, ಲಿಚ್ಚಿ, ಚಿಕ್ಕು, ತೆಂಗಿನಕಾಯಿ, ಕಾರದ ಮಾವಿನ ಐಸ್ ಕ್ರೀಂ, ವೆನಿಲ್ಲಾ ಪೇಸ್ಟ್ರೀ ಹಾಲಿನ ಐಸ್ ಕ್ರೀಂ, ಮಾವು, ಬಾಳೆಹಣ್ಣು, ಬ್ಲ್ಯೂಬೆರಿಯ ಗ್ರೀನ್ ಯೋಗರ್ಟ್ , ರಸ್ಕ್ ಮತ್ತಿತರರ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








