ತುಮಕೂರು
ವಿದ್ಯಾರ್ಥಿಗಳು ದೇಶದ ಭವಿಷ್ಯದ ಬೆನ್ನೆಲುಬುಗಳು. ನೀವೆಲ್ಲರೂ ದೇಶಕ್ಕೆ ತನ್ನ ಕೊಡುಗೆ ಏನೆಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ರಾಷ್ಟ್ರ ಪ್ರೇಮ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀಮತ್ ಸ್ವಾಮಿ ಜಪಾನಂದ ಜೀ ಮಹಾರಾಜ್ ತಿಳಿಸಿದರು.
ನಗರದ ಬಿ.ಎಚ್ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ರೋವರ್ಸ್ ಮತ್ತು ಸೇವಾದಳ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಬದುಕುಳಿಯಬೇಕಾದರೆ ರೈತರು, ಸೈನಿಕರು ಹಾಗೂ ಶಿಕ್ಷಕರು ಉಳಿಯಬೇಕಾಗಿದೆ. ಆದರೆ ದುರಂತ ಪರಿಸ್ಥಿತಿಯೆಂದರೆ ಈ ಮೂವರಿಗೆ ಹೆಚ್ಚು ಗಮನ ಕೊಡುತ್ತಿಲ್ಲ. ನಾವು ಇವರಿಗೆ ಎಲ್ಲಿಯವರೆಗೂ ಗೌರವ ಕೊಡುವುದಿಲ್ಲವೋ ಅಲ್ಲಿಯವರೆಗೂ ದೇಶ ಉಳಿಯುವುದಿಲ್ಲ. ನಾವು ದೇಶ ಪ್ರೀತಿಸುವುದನ್ನು ಮರೆತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಪಂಚವನ್ನು ಆಳುತ್ತಿರುವ ನಾಸಾದ ಹತ್ತು ಜನ ವಿಜ್ಞಾನಿಗಳಲ್ಲಿ ಏಳು ಜನ ಭಾರತೀಯರೇ ಎಂಬುದು ನಮ್ಮ ಹೆಮ್ಮೆ. ನಾವು ನಮ್ಮ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ದೇಶ ತಾನಾಗೆ ಬೆಳೆಯುತ್ತದೆ. ನಮ್ಮ ದೇಶ ನಿಮ್ಮಂತಹ ಯುವ ಚೇತನಗಳ ಹೆಗಲ ಮೇಲಿದೆ ಎಂದರು.
ಈ ಕಾಲೇಜಿನಲ್ಲಿ ನಡೆದಾಡುವ ದೇವರಾದ ಸಿದ್ದಗಂಗಾ ಶ್ರೀ ಗಳು ನಡೆದ ಪವಿತ್ರ ಭೂಮಿ. ಅವರ ಸಂಸ್ಥೆಯಿಂದ ವಿದ್ಯೆ ಕಲಿತ ಪ್ರತಿಭೆಗಳು ಬಹಳಿಷ್ಟಿವೆ. ಈ ಮಣ್ಣಿನಲ್ಲಿ ಇನ್ನು ಅನೇಕ ಮಹನೀಯರು ನಡೆದಾಡಿ ಹೋಗಿದ್ದಾರೆ. ಅಂತಹ ಪವಿತ್ರ ಮಣ್ಣಿನಲ್ಲಿ ನೀವು ವಿದ್ಯೆ ಕಲಿಯುತ್ತಿರುವುದು ನಿಮ್ಮ ಪುಣ್ಯ ಎಂದರು.
ಇತ್ತೀಚೆಗೆ ಅಮೇರಿಕಾ ಮತ್ತು ಇರಾನ್ ಯುದ್ದೋನ್ಮಾನದ ಸ್ಥಿತಿಯಲ್ಲಿವೆ. ಇಂತಹ ಸಂದರ್ಭದಲ್ಲಿ. ವಿಶ್ವ ಶಾಂತಿಗೆ ಹೆಸರಾದ ನಮ್ಮ ದೇಶವನ್ನು ಇರಾನ್ ಹೀಗೆ ವ್ಯಾಖ್ಯಾನಿಸಿದೆ. ಈ ಸಂದಿಗ್ಧ ಸ್ಥಿತಿಯಲ್ಲಿ ಭಾರತ ದೇಶ ಮಧ್ಯ ಪ್ರವೇಶಿಸಿದರೆ ವಿಶ್ವ ಶಾಂತಿ ದೊರಕುತ್ತದೆ ಎಂದಿರುವುದು ನಾವು ಹೆಮ್ಮೆ ಪಡಬೇಕಾದ ಸಂಗತಿ ಎಂದರು.
ಇಂದು ಸಾಧು ಸಂತರೆ ಈ ದೇಶದ ಆಸ್ತಿಯಾಗಿದ್ದಾರೆ. ಶಿವಕುಮಾರ ಸ್ವಾಮೀಜಿಗಳಂತ ದೇವರು ಅದೆಷ್ಟೊ ಮಕ್ಕಳು ವಿದ್ಯೆಯಿಂದ ಹಿಂದೆ ಸರಿಯುತ್ತಿದ್ದರೇನೋ, ಶಿವನ ಕೈಲಾಸ ಬೇರೆಲ್ಲೂ ಇಲ್ಲ. ಅದು ಸಿದ್ದಗಂಗೆಯಲ್ಲಿದೆ. ಅಂತೆಯೆ ಅನೇಕ ಸಾಧು ಸಂತರು ವಿದ್ಯೆಗೆ ಪ್ರಾಮುಖ್ಯತೆ ನೀಡಿ ಸಂಸ್ಥೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ಮಾತನಾಡಿ, ಮಕ್ಕಳು ದೇಶವನ್ನು ಕಟ್ಟುವ ಪ್ರಜೆಗಳಾಗಬೇಕು. ಬದುಕಿನಲ್ಲಿ ಹಠ ಬಹಳ ಮುಖ್ಯವಾಗುತ್ತದೆ. ಹಠವಿದ್ದರೆ ಜಯ ಸಾಧಿಸಬಹುದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಮಟ್ಟ ಹೆಚ್ಚುತ್ತದೆ. ಕಾಲೇಜು ಈ ರೀತಿಯಲ್ಲಿ ಉತ್ತಮವಾಗಿ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಟಿ.ಎ ಲಲಿತ ಕುಮಾರಿ ಮಾತನಾಡಿ, ಈ ಹಿಂದೆ ವಿಜ್ಞಾನ ವಿಷಯದಲ್ಲಿ ಮಕ್ಕಳಿಗೆ ಪುಟಗಳು ಸಾಕಾಗುತ್ತಿರಲಿಲ್ಲ. ಹೆಚ್ಚುವರಿ ಪೇಜುಗಳನ್ನು ಪಡೆದು ಬರೆಯುವಂತಾಗಿತ್ತು. ಅದನ್ನು ತಪ್ಪಿಸಿ ಈಗ ಎಲ್ಲ ಮಕ್ಕಳಿಗೆ ಇಲಾಖೆಯು ಉತ್ತರ ಪತ್ರಿಕೆಯ ಪುಟಗಳನ್ನು ಹೆಚ್ಚಿಸಿದೆ. ಇದರಿಂದ ಮಕ್ಕಳಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದ ಅವರು, ಮಕ್ಕಳು ಪರೀಕ್ಷೆಯನ್ನು ಎದುರಿಸುವ ಬಗ್ಗೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮಾಹಿತಿ ನೀಡಬೇಕು. ಜೊತೆಗೆ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದಾಗ ಸಿಗುವ ನಾನಾ ಸೌಲಭ್ಯಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರ ಬಡ ಮಕ್ಕಳಿಗೆ ಅನೇಕ ಸೌಲಭ್ಯವನ್ನು ಒದಗಿಸಿದೆ. ಇನ್ನೇನು ಕೆಲವೆ ದಿನಗಳಲ್ಲಿ ಪರೀಕ್ಷೆ ಬರುತ್ತಿದೆ ಮಕ್ಕಳು ಈಗಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.
ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ, ಮಕ್ಕಳು ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದು ಕಾಲೇಜಿಗೆ ಕೀರ್ತಿಯನ್ನು ತರಬೇಕು. ಕಾಲೇಜಿನ ಸವಲತ್ತುಗಳನ್ನು ಸಮರ್ಪಕವಾಗಿ ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಮಕ್ಕಳ ಕರ್ತವ್ಯ, ಜವಾಬ್ದಾರಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಿ.ಕೆ ಜಯರಾಮಯ್ಯ ಮಾತನಾಡಿ, ಮಕ್ಕಳಿಗೆ ಬೆಳಿಗ್ಗೆಯೇ ತರಗತಿಗಳು ಪ್ರಾರಂಭವಾಗುವುದರಿಂದ ಮನೆಗಳಲ್ಲಿ ಉಪಹಾರವನ್ನು ಸೇವಿಸುದಕ್ಕಾಗುತ್ತಿಲ್ಲ. ಇಲ್ಲಿಗೆ ಬಂದು ಪುಟ್ಬಾತ್‍ಗಳಲ್ಲಿ ಆಹಾರ ಸೇವಿಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕಾಲೇಜಿಗೆ ಒಂದು ಕ್ಯಾಂಟೀನ್ ವ್ಯವಸ್ಥೆ ಬೇಕಾಗಿದೆ. ಅದು ಸ್ವಾಮೀಜಿಗಳ ಸಹಕಾರದಲ್ಲಿ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಯ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾಲೇಜಿನ ಸಾಂಸ್ಕøತಿಕ ಕಾರ್ಯದರ್ಶಿ ಮೋಹನ್‍ಕುಮಾರ್, ಕ್ರೀಡಾ ಕಾರ್ಯದರ್ಶಿ ಡಾ.ಜಿ.ಎಚ್ ಲೋಕೇಶ್, ಎನ್‍ಎಸ್‍ಎಸ್ ಘಟಕಾಧಿಕಾರಿ ನಾಗರಾಜು ಸೇರಿದಂತೆ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ