ತುಮಕೂರು:
ಜೆಡಿಎಸ್ ವಿರುದ್ಧ ಕಿಡಿಕಾರಿರುವ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕೂರುವುದೇ ಸೂಕ್ತ ಎಂದಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಜೆಡಿಎಸ್‍ನವರು ವ್ಯವಹಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಕುರಿತು ಆ ಪಕ್ಷದಲ್ಲಿ ಚರ್ಚೆಗಳು ನಡೆದಿವೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳುವುದು ಸೂಕ್ತ ಎಂದಿದ್ದಾರೆ.
ಸೋಮವಾರ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವ ಜವಾಬ್ದಾರಿ ಬಿಜೆಪಿ ಪಕ್ಷದ ಮೇಲಿದೆ. ಅದು ಸಹ ಅಷ್ಟು ಸುಲಭದ ವಿಚಾರವಲ್ಲ. ಈ ನಡುವೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಕುರಿತು ಜೆಡಿಎಸ್ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಮೈತ್ರಿ ಸರ್ಕಾರವನ್ನು ಯಾರೂ ಬೀಳಿಸಿಲ್ಲ. ತಂತಾನೇ ಬಿದ್ದುಹೋಗಿದೆ. ಪಾಪದ ಕೊಡ ತುಂಬಿದ ಸರ್ಕಾರವಾಗಿತ್ತು. ಈಗ ಅದು ಪತನವಾಗಿದೆ. ಇದು ಒಳ್ಳೆಯದೇ ಆಗಿದೆ. ಇದೀಗ ಬಾಹ್ಯ ಬೆಂಬಲ ನೀಡುವುದಾಗಿ ಒಳಗೊಳಗೆ ವ್ಯವಹಾರ ನಡೆಸುತ್ತಿದ್ದಾರೆ. ಇವರೆಲ್ಲ ಪಕ್ಕಾ ವ್ಯವಹಾರಸ್ಥರು.
ತಮ್ಮ ವ್ಯವಹಾರವನ್ನು ನಡೆಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು.ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹಿಂದೆ ಒಬ್ಬನೇ ಒಬ್ಬ ಶಾಸಕನೂ ಇಲ್ಲ. ಹೀಗಿರುವಾಗ ಅವರು ಹೇಗೆ ವಿಪಕ್ಷ ನಾಯಕರಾಗುತ್ತಾರೆ. ಹಾಗೆ ನೋಡಿದರೆ ಪಕ್ಷವನ್ನು ಮುನ್ನಡೆಸುವ ಹಾಗೂ ಖ್ಯಾತಿ ಇರುವ ಸಿದ್ದರಾಮಯ್ಯನವರೇ ಇದಕ್ಕೆ ಸೂಕ್ತವಾದ ವ್ಯಕ್ತಿ. ಅವರೇ ವಿಪಕ್ಷ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳಲಿ ಎಂದರು.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದ ಕೆ.ಎನ್.ರಾಜಣ್ಣ ಅವರು ಮೈತ್ರಿ ಸರ್ಕಾರದ ವಿರುದ್ಧ ಹಲವು ಬಾರಿ ಮುಗಿಬಿದ್ದಿದ್ದರು. ವಿಶೇಷವಾಗಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮೊನ್ನೆ ನಡೆದ ಬಿ.ಎಸ್.ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮಕ್ಕೆ ಹಾಜರಾಗಿ ಯಡಿಯೂರಪ್ಪ ಅವರಿಗೆ ಶುಭ ಕೋರಿ ಬಂದಿದ್ದಾರೆ.