ಕೆ.ಎನ್.ಆರ್. ನೇತೃತ್ವದಲ್ಲಿ ಸ್ವಾಭಿಮಾನಿ ಸಮಾವೇಶ ..!!

ಶಿರಾ:

      ಪ.ಜಾತಿ ಹಾಗೂ ಪ.ಪಂಗಡಗಳ ಮೀಸಲಾತಿ ಸೌಲಭ್ಯ ಹೆಚ್ಚಿಸುವಂತೆ, ನೇತ್ರಾವತಿ, ಅಪ್ಪರ್ ಭದ್ರಾ ಯೋಜನೆಗಳನ್ನು ಜಿಲ್ಲೆಯ ಬರ ಪೀಡಿತ ತಾಲ್ಲೂಕುಗಳಿಗೆ ಅತಿ ಶೀಘ್ರದಲ್ಲಿ ಜಾರಿಗೊಳಿಸುವಂತೆ ಹಾಗೂ ಈ ಕೂಡಲೇ ನದಿ ಜೋಡಣೆಯಂತಹ ಮಹತ್ವದ ಕಾರ್ಯಗಳನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಮಾಜಿ ಶಾಸಕ ಹಾಗೂ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ನೇತೃತ್ವದಲ್ಲಿ ಕೆ.ಎನ್.ಆರ್. ಅಭಿಮಾನಿ ಬಳಗದ ವತಿಯಿಂದ ಜೂನ್:13 ರಂದು ಜಿಲ್ಲಾ ಕೇಂದ್ರದಲ್ಲಿ ಸ್ವಾಭಿಮಾನಿ ಸಮಾವೇಶವನ್ನು ಕೈಗೊಳ್ಳಲಾಗಿದೆ ಎಂದು ಮಾಜಿ ಶಾಸಕ ಸಾ.ಲಿಂಗಯ್ಯ ತಿಳಿಸಿದರು.

      ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಸಚಿವರಲ್ಲದಿದ್ದರೂ ತುಮಕೂರು ಜಿಲ್ಲೆಯಲ್ಲಿ ಒಬ್ಬ ಸಚಿವರು ಮಾಡಬೇಕಾದ ಜನ ಸಾಮನ್ಯರ ಕೆಲಸಗಳನ್ನು ನಿರ್ವಹಣೆ ಮಾಡಿದ್ದಾರೆ. ಯಾವುದೇ ಒಂದು ಜಾತಿಗೆ ಜೋತು ಬೀಳದೆ ಜಾತ್ಯಾತೀತ ಭಾವನೆಯಿಂದ ಎಲ್ಲಾ ಜಾತಿ ಮುಖಂಡರ ಮನಸ್ಸನ್ನು ಗೆದ್ದಿರುವ ರಾಜಣ್ಣ ಅವರ ವಿರುದ್ಧ ಕೆಲ ಕಿಡಿಗೇಡಿಗಳು ಇಲ್ಲ ಸಲ್ಲದ ಹೇಳಿಕೆ ನೀಡಿ ಅವರನ್ನು ತೇಜೋವಧೆ ಮಾಡುವ ಪ್ರಯತ್ನ ನಡೆಸಿರುವುದು ಖಂಡನಾರ್ಹ ಎಂದರು.

       ಈ ಹಿಂದೆ ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದಾಗಲೂ ಛಲವಾದಿ ಸಮಾಜದ ಶಾಸಕರು, ಸಚಿವರುಗಳು ಗಿರಿಜನರ ಬಗ್ಗೆ ಗೌರವಗಳನ್ನು ಇಟ್ಟಿದ್ದರು ಆದರೆ ಇದೀಗ ಡಾ.ಜಿ.ಪರಮೇಶ್ವರ್ ಅವರ ಬೆಂಬಲಿಗರು ದಲಿತರು ಹಾಗೂ ಪ.ಪಂಗಡ ಸೇರಿದಂತೆ ಜಾತಿ ಜಾತಿಗಳ ನಡುವೆ ವೈಷಮ್ಯದ ಬೀಜ ಬಿತ್ತಲು ಹೊರಟಿದ್ದಾರೆ. ದಲಿತರನ್ನು ಒಡೆದು ಚೂರು ಚೂರು ಮಾಡುವ ಪ್ರಯತ್ನಗಳು ಡಾ.ಪರಮೇಶ್ವರ್ ಅವರ ಬೆಂಬಲಿಗರಿಂದ ನಡೆದಿದೆ ಎಂದು ಆರೋಪಿಸಿದರು.

        ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರನ್ನು ಪರಾಜಯಗೊಳಿಸಲು ಆ ಕ್ಷೇತ್ರದಲ್ಲಿ ಛಲವಾದಿ ಜನಾಂಗವನ್ನು ಎತ್ತಿಕಟ್ಟಲಾಗಿತ್ತು. ದಲಿತರು, ಹಿಂದುಳಿದ ವರ್ಗದ ರಾಜಕಾರಣಿಗಳೇ ದಲಿತ ಹಾಗೂ ಹಿಂದುಳಿದವರನ್ನು ತುಳಿಯುವ ಪ್ರಯತ್ನ ನಡೆದಿರುವುದು ಎಷ್ಟರಮಟ್ಟಿಗೆ ಸರಿ?. ಬದಲಾದ ಜಿಲ್ಲೆಯ ರಾಜಕೀಯ ಸನ್ನಿವೇಶದ ನಡುವೆ ಡಾ.ಜಿ.ಪರಮೇಶ್ವರ್ ಅವರ ಬೆಂಬಲಿಗರು ರಾಜಣ್ಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅವರನ್ನು ತೇಜೋವಧೆ ಮಾಡಿದ್ದು ರಾಜಣ್ಣ ಅವರ ಅಭಿಮಾನಿಗಳು ದಂಡು ಅವರ ರಕ್ಷಣೆಗೆ ಸದಾ ಇದೆ ಎಂಬುದನ್ನು ಅರಿಯಬೇಕಿದೆ ಎಂದರು.

        ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದು ಮೈತ್ರಿಯ ಲೋಸಭಾ ಚುನಾವಣೆಯ ಹಿನ್ನಡೆಗೆ ಸಿದ್ಧರಾಮಯ್ಯ ಅವರನ್ನು ಗುರಿ ಮಾಡುವುದು ಸರಿಯಲ್ಲ. ಮೈತ್ರಿಗೆ ಹಿನ್ನಡೆಯಾಗಲು ಅವರೊಬ್ಬರೇ ಕಾರಣರಲ್ಲ. ಡಿ.ಕೆ.ಶಿ, ಖರ್ಗೆಯಂತಹ ಅನೇಕ ಘಟಾನುಘಟಿಗಳೂ ಇದ್ದು ಈ ಪರಾಜಯಕ್ಕೆ ಇಡೀ ಮೈತ್ರಿ ಸರ್ಕಾರದ ಮುಖಂಡರೆಲ್ಲರೂ ಜವಾಬ್ದಾರರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಳಿಯುವುದಿದ್ದರೆ ಅದು ಕೆ.ಎನ್.ರಾಜಣ್ಣ ಹಾಗೂ ಸಿದ್ಧರಾಮಯ್ಯ ಅವರಿಂದ ಮಾತ್ರಾ ಸಾದ್ಯ. ಪಕ್ಷವನ್ನು ಟೊಂಕಕಟ್ಟಿ ನಿಲ್ಲಿಸಿ ಸಂಘಟನೆ ಮಾಡುವ ಶಕ್ತಿ ಇರುವುದು ಈ ಇಬ್ಬರಿಗೆ ಮಾತ್ರಾ ಎಂದು ಸಾ.ಲಿಂಗಯ್ಯ ಸ್ಪಷ್ಟಪಡಿಸಿದರು.

       ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ರಾಮಚಂದ್ರಯ್ಯ ಮಾತನಾಡಿ ತುಮಕೂರು ಜಿಲ್ಲೆಗೆ ಕೆ.ಎನ್.ರಾಜಣ್ಣ ಅವರ ಕೊಡುಗೆ ಸಾಕಷ್ಠಿದೆ. ಸಹಕಾರಿ ಕ್ಷೇತ್ರದಲ್ಲಿ ಅವರು ಮಾಡಿರುವಂತಹ ಸಾಧನೆಯನ್ನು ಇಡೀ ರಾಜ್ಯದ ಜನ ಸ್ಮರಿಸುವಂತಾಗಿದೆ. ಇಂತಹ ಜಾತ್ಯಾತೀತ ವ್ಯಕ್ತಿಯನ್ನು ಅಪಮಾನಿಸುವಂತಹ ಹೇಳಿಕೆಗಳನ್ನು ಪರಮೇಶ್ವರ್ ಬೆಂಬಲಿಗರು ನಡೆಸಿದ್ದಾರೆಂದು ದೂರಿದರು.

       ಶಿರಾದಲ್ಲಿ ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಕೆ.ಎನ್.ಆರ್. ವಿರುದ್ಧ ಆರೋಪಿಸಿ ಗುಟುರು ಹಾಕಿದ ಚಂದ್ರಶೇಖರಗೌಡ ಅವರು ಕೆ.ಎನ್.ಆರ್. ಬೆಂಬಲದಿಂದ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದರು. ರಾಜಣ್ಣ ಅವರ ಸಹಕಾರದಿಂದಲೇ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿದ್ದ ಕೊಡವಾಡಿ ಚಂದ್ರಶೇಖರ್ ಇದೀಗ ರಾಜಣ್ಣ ಅವರ ಅಳಿಲು ಸೇವೆಯನ್ನೇ ಮರೆತು ಅವರ ವಿರುದ್ಧವೇ ಹೇಳಿಕೆ ನೀಡುತ್ತಿದ್ದು ಇವರೆಲ್ಲಾ ಸೇರಿಕೊಂಡು ರಾಜಣ್ಣ ಅವರು ಮಾಡಿದ ಉಪಕಾರವನ್ನೇ ಸ್ಮರಿಸದಿರುವುದು ವಿಪರ್ಯಾಸವೇ ಸರಿ.

      ಇಷ್ಟಕ್ಕೂ ರಾಜಣ್ಣ ಅವರ ಸಂಪೂರ್ಣ ಬೆಂಬಲದಿಂದ ಜಿ.ಪಂ. ಸದಸ್ಯರಾಗಿದ್ದ ಕೆಂಚಮಾರಯ್ಯ ಕೂಡಾ ಇವರದೇ ಸಾಲಿಗೆ ಸೇರಿರುವುದು ವಿಷಾಧನೀಯ. ಇವರೆಲ್ಲಾ ರಾಜಣ್ಣ ಅವರ ಸಹಕಾರದ ಬರೀ ಫಲಾನುಭವಿಗಳಷ್ಟೇ ಅಲ್ಲ, ಇವರು ವಿಶೇóಷ ಘಟಕದ ಫಲಾನುಭವಿಗಳು ಎಂದು ಎಸ್.ರಾಮಚಂದ್ರಯ್ಯ ಲೇವಡಿ ಮಾಡಿದರು.

        ತಾ.ಪಂ. ಮಾಜಿ ಅಧ್ಯಕ್ಷ ಜಿ.ಎನ್.ಮೂರ್ತಿ ಮಾತನಾಡಿ ಜೂನ್:13 ರಂದು ನಡೆಸುತ್ತಿರುವ ಸ್ವಾಭಿಮಾನಿ ಸಮಾವೇಶವು ಒಂದು ಮಹತ್ವದ ನಿರ್ಣಯದ ದಿನವೂ ಆಗಿದ್ದು ಜಿಲ್ಲೆಯ ಅದರಲ್ಲೂ ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಡ ಹೇರುವ ಪ್ರಯತ್ನವೂ ಆಗಿದೆ. ಅಂದು ನಡೆಯುವ ಈ ಸಮಾವೇಶದಲ್ಲಿ ಸುಮಾರು 30,000 ಮಂದಿ ಸೇರಲಿದ್ದು ಇದೊಂದು ಪಕ್ಷಾತೀತ ಹಾಗೂ ಜಾತ್ಯಾತೀತ ಸಮಾವೇಶವೂ ಆಗಿರುತ್ತದೆ ಎಂದರು.

         ಜಿಲ್ಲಾ ಯಾದವ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಬಾಬು ಮಾತನಾಡಿ ಕೆ.ಎನ್.ಆರ್. ಅವರಿಂದ ಸಾಕಷ್ಟು ಲಾಭ ಪಡೆದವರೇ ಅವರ ವಿರುದ್ಧ ಆರೋಪ ಮಾಡಲು ಆರಂಭಿಸಿದ್ದು ಕೆ.ಎನ್.ಆರ್. ಅವರ ಹಿಂದೆ ಅವರ ಅಭಿಮಾನಿಗಳ ಬೃಹತ್ ಪಡೆಯೇ ಇದ್ದು ಅವರನ್ನು ಹಿಮ್ಮಟ್ಟಿಸುವ ಹಾಗೂ ಅವರನ್ನು ತೇಜೋವಧೆ ಮಾಡಿದವರ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವ ಮುನ್ನ ಅಂತಹವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಅಗತ್ಯ ಎಂದರು.

       ದಯಾನಂದಸಾಗರ್, ರಂಗರಾಜು, ವಿಶ್ವನಾಥ್, ಪ್ರಸನ್ನಕುಮಾರ್, ಗುಜ್ಜಾರಪ್ಪ, ಕರಿಯಣ್ಣ, ಎ.ಪಿ.ಎಂ.ಸಿ. ಅಧ್ಯಕ್ಷ ಪಿ.ಎನ್.ಮುಕುಂದಪ್ಪ, ಚಿದಾನಂದ್, ರಾಮದಾಸ್, ಬಂಡೇ ರಾಮಕೃಷ್ಣ, ಬುಕ್ಕಾಪಟ್ಟಣ ಸತ್ಯನಾರಾಯಣ್, ಅಜೇಯ್, ಶಾಗದಡು ಶಿವಣ್ಣ, ಚಿನ್ನೋಬನಾಯಕ, ಓಬಳಯ್ಯ, ಮನೋಹರನಾಯಕ, ಶಿವು, ಲಕ್ಷ್ಮೀಸಾಗರ ಪ್ರಸನ್ನಕುಮಾರ್, ಹಂದಿಕುಂಟೆ ಶ್ರೀಧರಮೂರ್ತಿ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap