ತುಮಕೂರು
ತುಮಕೂರು ನಗರವು `ಸ್ಮಾರ್ಟ್ ಸಿಟಿ` ಆಗುತ್ತಿರುವ ಹೊತ್ತಿನಲ್ಲಿ ನಗರದ ವಿವಿಧ ಭಾಗಗಳಲ್ಲಿ ರಸ್ತೆ ಬದಿ ಕೋಳಿ ಅಂಗಡಿಗಳ ತ್ಯಾಜ್ಯದ ರಾಶಿ ಬೀಳುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆದು, ಕೋಳಿ ಅಂಗಡಿಗಳವರ ಸಂಘವು ಕೈಗೊಳ್ಳುವ ತೀರ್ಮಾನ ಅನುಸರಿಸಿ ತುಮಕೂರು ಮಹಾನಗರ ಪಾಲಿಕೆಯು ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಪಾಲಿಕೆಯ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ (8 ನೇ ವಾರ್ಡ್- ಕಾಂಗ್ರೆಸ್) ಅವರ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ವತಿಯಿಂದ ಗುರುವಾರ ಬೆಳಗ್ಗೆ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ಏರ್ಪಟ್ಟಿದ್ದ ಕೋಳಿ ಅಂಗಡಿಗಳವರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ನಗರದ ಅನೇಕ ರಸ್ತೆಗಳ ಬದಿಯಲ್ಲಿ ಕೋಳಿ ಅಂಗಡಿಗಳ ಕಸ ರಾಶಿ ಬೀಳುತ್ತಿರುವ ಬಗ್ಗೆ ಸೈಯದ್ ನಯಾಜ್ ಅವರು ಕಳವಳ ವ್ಯಕ್ತಪಡಿಸಿ, “ಈ ಸಮಸ್ಯೆ ಪರಿಹಾರ ಆಗಲೇಬೇಕು. ಆದ್ದರಿಂದ ಈ ಹಿಂದೆ ಇದ್ದಂತೆ ಕೋಳಿ ಅಂಗಡಿಗಳವರ ಸಂಘದವರೇ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಿಕೊಳ್ಳಬಹುದು.
ಇಲ್ಲದಿದ್ದರೆ ಆ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯೇ ಕಾನೂನಿನ ಪ್ರಕಾರ ಮುಂದಿನ ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ” ಎಂದು ಹೇಳಿದಾಗ, ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಕಾರ್ಪೋರೇಟರ್ ಮಹಮದ್ ಹಫೀಜ್ ಮತ್ತು ಸಭೆಯಲ್ಲಿದ್ದ ಇತರರು “ಸಂಘದವರು ಪ್ರತ್ಯೇಕ ಸಭೆ ನಡೆಸಿ ತೀರ್ಮಾನ ಕೈಗೊಂಡು ಮುಂದಿನ ಸಭೆಯಲ್ಲಿ ಪಾಲಿಕೆಗೆ ತಿಳಿಸಲಾಗುವುದು” ಎಂದು `ರವಸೆ ನೀಡಿದರು. ಆಗ “ಸಂಘದವರು ಕೈಗೊಳ್ಳುವ ತೀರ್ಮಾನವೇನೆಂಬುದನ್ನು ಗಮನಿಸಿ ಪಾಲಿಕೆಯು ಟೆಂಡರ್ ಕರೆಯಬೇಕೇ? ಅಥವಾ ಪಾಲಿಕೆಯಿಂದಲೇ ವಿಲೇವಾರಿ ಮಾಡಬೇಕೇ?” ಎಂಬುದನ್ನು ನಿರ್ಧಾರಿಸುವ ನಿಲುವು ತಾಳಲಾಯಿತು.
ಪ್ರಸ್ತುತ ತುಮಕೂರು ನಗರವು ಸ್ಮಾರ್ಟ್‍ಸಿಟಿ ಆಗುತ್ತಿದೆ. ಆದರೂ ನಗರದಲ್ಲಿ ಎಲ್ಲೆಂದರಲ್ಲಿ ಕೋಳಿ ಅಂಗಡಿ ಕಸದ ರಾಶಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕೋಳಿ ಅಂಗಡಿಗಳವರು ಪಾಲಿಕೆಗೆ ಸಹಕಾರ ಕೊಡಬೇಕು” ಎಂದು ಸೈಯದ್ ನಯಾಜ್ ಅವರು ಆರಂಭದಲ್ಲಿ ಮನವಿ ಮಾಡಿಕೊಂಡರು.
ಕೋಲ್ಡ್‍ಸೋರೇಜ್ ಅನಿವಾರ್ಯ
ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, “ಕೋಳಿ ಮತ್ತು ಮಾಂಸದ ಅಂಗಡಿಗಳಲ್ಲಿ ಪ್ರಾಣಿಗಳ ಮಾಂಸವನ್ನು ಕಾನೂನಿನ ಪ್ರಕಾರ ನೇತುಹಾಕುವಂತಿಲ್ಲ. ಆದರೆ ಹಿಂದಿನಿಂದ ಅದು ಹಾಗೆಯೇ ನಡೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ. ನಿಯಮದ ಪ್ರಕಾರ ಹಾಗೂ ಆರೋಗ್ಯಸುರಕ್ಷತೆ ದೃಷ್ಟಿಯಿಂದ ಡ್ರೆಸ್ಸಿಂಗ್ ಆದ ಬಳಿಕ ತಕ್ಷಣವೇ ಮಾಂಸವನ್ನು ಕೋಲ್ಡ್ ಸೋರೇಜ್‍ನಲ್ಲೇ ಇಡಬೇಕು. ಈ ನಿಟ್ಟಿನಲ್ಲಿ ಪಾಲಿಕೆಯು ಕಾನೂನು ಕ್ರಮ ಜರುಗಿಸಲಿದೆ. ಕೋಲ್ಡ್‍ಸೋರೇಜ್ ಇಲ್ಲದಿದ್ದರೆ ಅಂತಹ ಮಳಿಗೆಗಳ ಟ್ರೇಡ್ ಲೈಸೆನ್ಸ್ ಅನ್ನು ರದ್ದು ಮಾಡಬಹುದು. ಆದ್ದರಿಂದ ಕೋಳಿ ಮತ್ತು ಮಾಂಸದ ಅಂಗಡಿಗಳವರು ಈಗಿನಿಂದಲೇ ಬದಲಾವಣೆಗೆ ಸಜ್ಜಾಗಬೇಕು” ಎಂದು ಸ್ಪಷ್ಟ ಸೂಚನೆ ನೀಡಿದರು.
ಇಂದು ಬಿಹಾರದಲ್ಲಿ ನೂರಾರು ಮಕ್ಕಳು ಅನಾರೋಗ್ಯದಿಂದ ಸಾವಿಗೀಡಾಗಲು ಅನೈರ್ಮಲ್ಯ ಹಾಗೂ ಬೀದಿನಾಯಿಗಳು-ಹಂದಿಗಳ ಹಾವಳಿ ಕಾರಣ. ನೈರ್ಮಲ್ಯದ ವಿಷಯದಲ್ಲಿ ನಾವು ನಿರ್ಲಕ್ಷೃ ತಾಳಿದರೆ ಇಲ್ಲೂ ಸಹ ಅಪಾಯದ ವಾತಾವರಣ ತಲೆಯೆತ್ತಬಹುದು ಎಂದು ಆತಂಕದಿಂದ ಹೇಳಿದ ಅವರು, “ಕೋಳಿ ಮತ್ತು ಮಾಂಸದ ಅಂಗಡಿಗಳವರು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಸೂಕ್ತ ವಿಲೇವಾರಿಗೆ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಕಳೆದ ಎರಡು ತಿಂಗಳುಗಳ ಮೊದಲು ಇದೇ ರೀತಿ ಸಭೆಯೊಂದನ್ನು ನಡೆಸಿ ಚರ್ಚಿಸಲಾಗಿತ್ತು. ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಉಪಲೋಕಾಯುಕ್ತರು ಭೇಟಿ ನೀಡಿದ್ದಾಗ ಈ ಸಮಸ್ಯೆ ನಿವಾರಣೆಗೆ ಮೊಕದ್ದಮೆ ಹಾಕಬೇಕೆಂದು ಸೂಚಿಸಿದ್ದರು. ಆದರ ಏಕಾಏಕಿ ಮೊಕದ್ದಮೆ ಹಾಕುವುದಕ್ಕಿಂತ, ಮೊದಲು ಜಾಗೃತಿ ಮೂಡಿಸಬೇಕೆಂದು ಈ ಸಭೆಯನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಕೋಳಿ ಅಂಗಡಿ, ಮಾಂಸದ ಅಂಗಡಿ ಇರುವೆಡೆ ಅಳಿದುಳಿದ ಮಾಂಸದ ಚೂರುಗಳು ದೊರೆಯುತ್ತದೆಂದು ಬೀದಿ ನಾಯಿಗಳು ಅಂತಹ ಸ್ಥಳಗಳಲ್ಲಿ ಅತಿ ಹೆಚ್ಚಾಗುತ್ತಿವೆ. ಇದರೊಂದಿಗೆ ಅನೈರ್ಮಲ್ಯದ ವಾತಾವರಣದಿಂದ ಹಂದಿಗಳ ಹಾವಳಿಯೂ ಅಧಿಕವಾಗುತ್ತಿದೆ. ಈವರೆಗೆ ತುಮಕೂರಿನಲ್ಲಿ 13 ಬಾರಿ ಹಂದಿಗಳನ್ನು ಹಿಡಿಸುವ ಕಾರ್ಯಾಚರಣೆ ನಡೆಸಲಾಗಿದ್ದು, ದಾವಣಗೆರೆಯ ಹಂದಿ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿರುವ ಪರಿಣಾಮ ಹಾಗೂ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆಯನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ಪ್ರಾಣಿದಯಾ ಸಂಘದ ಮಧ್ಯಪ್ರವೇಶದಿಂದಾಗಿ ಬೀದಿನಾಯಿಗಳನ್ನು ಹಿಡಿಯುವವರು ಈಗ ಮುಂದೆ ಬರುತ್ತಿಲ್ಲ. ಆದರೂ ಸಹ ಬೀದಿನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ.ನಾಗೇಶ್ ಕುಮಾರ್ ಹೇಳಿದರು.
ಹೊರಗಿನವರ ಕೈವಾಡ
ಕೋಳಿ ಅಂಗಡಿಗಳವರ ಸಂಘದ ಗೌರವಾಧ್ಯಕ್ಷ ಮಹಮದ್ ಹಫೀಜ್ ಅವರು ಚರ್ಚೆಯ ಮಧ್ಯಪ್ರವೇಶಿಸಿ, ಗೂಳೂರು, ಗುಬ್ಬಿ ಮೊದಲಾದ ಪರಸ್ಥಳದವರು ವಾಹನಗಳಲ್ಲಿ ಕೋಳಿ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ಇಲ್ಲಿ ಎಸೆದು ಹೋಗುತ್ತಿದ್ದು, ಇದಕ್ಕೆ ತುಮಕೂರಿನ ಕೋಳಿ ಅಂಗಡಿಗಳವರು ಕಾರಣರಲ್ಲ ಎಂದು ವಾದಿಸಿದರು. ಸಭೆಯಲ್ಲಿದ್ದ ಇತರರು ಸಹ ಇದಕ್ಕೆ ದನಿಗೂಡಿಸಿದರು.
ದಿನದ ಒಂದು ಹೊತ್ತು ಅಂದರೆ ಸಂಜೆ ಹೊತ್ತಿನವರೆಗಿನ ತ್ಯಾಜ್ಯವನ್ನು ಕೋಳಿ ಅಂಗಡಿಗಳಿಂದ ಸಂಗ್ರಹಿಸಿದರೆ ಸಾಲದು.
ಸಂಜೆ ಬಳಿಕ ರಾತ್ರಿಯವರೆಗೂ ಸಂಗ್ರಹಗೊಳ್ಳುವ ತ್ಯಾಜ್ಯವನ್ನು ರಾತ್ರಿಯೇ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಬೇಕು. ಯಾವುದಾರರೂ ಒಂದು ಸ್ಥಳ ಗುರುತಿಸಿಕೊಟ್ಟರೆ, ಅಂಗಡಿಗಳವರೇ ಅಲ್ಲಿಗೆ ಹೋಗಿ ಹಾಕಬಹುದು. ಒಂದು ಹೊತ್ತಿನ ವಿಲೇವಾರಿಗೆ ಸಂಘದಿಂದಲೇ ವ್ಯವಸ್ಥೆ ಮಾಡಿಕೊಳ್ಳುವುದಾಗಿಯೂ, ಇನ್ನೊಂದು ಹೊತ್ತಿನ ವಿಲೇವಾರಿಗೆ ಪಾಲಿಕೆಯು ವ್ಯವಸ್ಥೆ ಮಾಡುವಂತೆಯೂ ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾದವು.
ಮಾತಿನ ಚಕಮಕಿ
ಒಂದು ಹಂತದಲ್ಲಂತೂ ಮಾಜಿ ಕಾಪೆರ್Çರೇಟರ್ ಮಹಮದ್ ಹಫೀಜ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರ ನಡುವೆ ಬಿರುಸಿನ ಮಾತಿನ ಚಕಮಕಿ ಉಂಟಾಯಿತು. ಈರ್ವರೂ ಏರಿದ ದನಿಯಲ್ಲಿ ವಾಗ್ವಾದ ನಡೆಸಿದರು. “ಕೇವಲ ಕೋಳಿ ಅಂಗಡಿಯವರನ್ನು ಟಾರ್ಗೆಟ್ ಮಾಡುತ್ತೀರಿ. ಆದರೆ ಮಾಂಸದ ಅಂಗಡಿಯವರನ್ನು ಏಕೆ ಮಾತನಾಡಿಸುವುದಿಲ್ಲ?” ಎಂದು ಹಫೀಜ್ ಕುಟುಕಿದರು.
ಇಲ್ಲ ನೀವು ತ್ಯಾಜ್ಯ ವಿಲೇವಾರಿ ಮಾಡಿ. ಇಲ್ಲವೇ ನಾವು ಮಾಡುತ್ತೇವೆ” ಎಂದು ನಯಾಜ್ ಅವರು ಚರ್ಚೆಯ ನಡುವೆ ಹೇಳಿದಾಗ, ಹಫೀಜ್ ಸೇರಿದಂತೆ ಸಂಘದ ಇತರರು ತೀವ್ರವಾಗಿ ಆಕ್ಷೇಪಿಸಿದರು. “ನೀವು ನಮ್ಮನ್ನು ಹೆದರಿಸುತ್ತೀದ್ದೀರಾ?” ಎಂದು ಅವರುಗಳು ಕೋಪದಿಂದ ಪ್ರಶ್ನಿಸಿದರು.
2016 ರ ನಿರ್ಣಯ
ಈ ಮಧ್ಯ ಪರಿಸರ ಇಂಜಿನಿಯರ್ ಮೋಹನ್ ಕುಮಾರ್ ಅವರು ಮಾತನಾಡಿ, 2016 ರಲ್ಲಿ ನಡೆದಿದ್ದ ಕೋಳಿ ಅಂಗಡಿಗಳವರ ಸಭೆಯಲ್ಲಿ ಸದರಿ ಅಂಗಡಿಗಳವರೇ ಕಸ ಸಂಗ್ರಹಿಸಿ ಅಜ್ಜಗೊಂಡನಹಳ್ಳಿಗೆ ವಿಲೇವಾರಿ ಮಾಡಿಕೊಳ್ಳುವುದಾಗಿ ಹಾಗೂ ಆಯಾ ಅಂಗಡಿಗೆ ಶುಲ್ಕ ನಿಗದಿಪಡಿಸಿದ್ದ ಬಗ್ಗೆ ಕೈಗೊಂಡಿದ್ದ ನಿರ್ಣಯಗಳ ಬಗ್ಗೆ ಗಮನ ಸೆಳೆದರು. ಈ ವಿಷಯವೂ ಸಭೆಯಲ್ಲಿ ಕೆಲಹೊತ್ತು ಬಿಸಿಬಿಸಿ ಚರ್ಚೆಗೆ ಎಡೆಮಾಡಿತು. ಸಭೆಗೆ ಹಾಜರಾಗಿದ್ದ ಸ್ಥಾಯಿ ಸಮಿತಿ ಸದಸ್ಯೆ ಫರೀದಾ ಬೇಗಂ (13 ನೇ ವಾರ್ಡ್- ಕಾಂಗ್ರೆಸ್) ಅವರು ಮಾತನಾಡುತ್ತ, ಈ ಬಗ್ಗೆ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಕೇಳಿದರಲ್ಲದೆ, 2016 ರ ಸಭೆಯ ಬಳಿಕ ಪಾಲಿಕೆ ಮತ್ತು ಕೋಳಿ ಅಂಗಡಿಗಳವರ ನಡುವೆ ಅಂತರ ಹೆಚ್ಚಾಗಿರುವುದಕ್ಕೆ ಆಕ್ಷೇಪಿಸಿದರು.
ಪ್ಲಾಸ್ಟಿಕ್ ಬಳಸದಿರಿ
ಕೋಳಿ ಮತ್ತು ಮಾಂಸದ ಅಂಗಡಿಗಳವರು ಯಾವುದೇ ಕಾರಣಕ್ಕೂ ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಸಬಾರದೆಂದು ತಾಕೀತು ಮಾಡಿದ ಪರಿಸರ ಇಂಜಿನಿಯರ್ ಮೋಹನ್ ಕುಮಾರ್, ಇನ್ನು ಮುಂದೆ ಪಾಲಿಕೆ ವತಿಯಿಂದ ದಾಳಿ ನಡೆದಾಗ ಪ್ಲಾಸ್ಟಿಕ್ ಕವರ್ ಬಳಸುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರೂ ಈ ಮಾತಿಗೆ ದನಿಗೂಡಿಸುತ್ತ, ಪ್ಲಾಸ್ಟಿಕ್ ಕವರ್ ಬಳಸದಂತೆ ಮನವಿ ಮಾಡಿಕೊಂಡರು. ಸ್ಥಾಯಿ ಸಮಿತಿ ಸದಸ್ಯೆ ಮುಜೀದಾ ಖಾನಂ (18 ನೇ ವಾರ್ಡ್- ಕಾಂಗ್ರೆಸ್), ಪರಿಸರ ಇಂಜಿನಿಯರ್‍ಗಳಾದ ಮೃತ್ಯುಂಜಯ ಮತ್ತು ನಿಖಿತಾ ಸಭೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








