ಹರಪನಹಳ್ಳಿ
ತಾಲ್ಲೂಕಿನ ಸಾಸ್ವೀಹಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಓ ಅಧಿಕಾರಿ ಕೂಲಿ ಕಾರ್ಮಿಕರಿಗೆ ನಿರಂತರ ಕೆಲಸ ನೀಡದೇ ಸತಾಯಿಸುತ್ತಿದ್ದಾರೆ ಹಾಗೂ ಈ ಹಿಂದೆ ಮಾಡಿದ ಕೆಲಸಕ್ಕೂ ಕೂಲಿ ಹಣ ಪಾವತಿಸಿಲ್ಲ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯ್ತಿ ಮುಂದೆ ಗ್ರಾ.ಕೋ.ಸ. ಪದಾಧಿಕಾರಿಗಳು ಹಾಗೂ ಕೂಲಿ ಕಾರ್ಮಿಕರು ಅಧಿಕಾರಿಗಳನ್ನು ಪ್ರಶ್ನಿಸಿ ತಾಲ್ಲೂಕು ಬರಗಾಲದಿಂದ ತತ್ತರಿಸುತ್ತಿದ್ದು ಕಾರ್ಮಿಕರಿಗೆ ನಿರಂತರ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಈ ಹಿಂದೆ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿದ್ದ ತಾಲ್ಲೂಕು ಬಳ್ಳಾರಿಗೆ ಸೇರಿರುವುದರಿಂದ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾಯೋಜನೆಗಳನ್ನು ರದ್ದುಗೊಳಿಸಲಾಗಿದೆ. ಈಗ ಹೊಸದಾಗಿ ಸಿದ್ದಪಡಿಸಿ ಅನುಮೋದನೆಗೆ ಬಳ್ಳಾರಿ ಜಿಲ್ಲಾ ಪಂಚಾಯ್ತಿಗೆ ನೀಡಲಾಗಿದೆ. ಆದ್ದರಿಂದ ಕೆಲಸ ನೀಡಲು ವಿಳಂಬವಾಗಿದೆ ಎಂದು ತಿಳಿಸುತ್ತಾರೆ.
ಆದರೆ ಬರಗಾಲದಲ್ಲಿ ಕೆಲಸವಿಲ್ಲದ ಕೂಲಿ ಕಾರ್ಮಿಕರು ಹೊಟ್ಟೆಪಾಡಿಗೆ ಎಲ್ಲಿಗೆ ಹೋಗಬೇಕು. ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದಾರೆ. ತಮ್ಮ ಜವಾಬ್ದಾರಿಗಳಿಂದ ನುನಚಿಕೊಳ್ಳುತ್ತಿದ್ದಾರೆ. ಕ್ರಿಯಾಯೋಜನೆಗಳ ನೆಪಮಾಡುತ್ತಿದ್ದಾರೆ. ಕಾರ್ಮಿಕರಿಗೆ ಕೆಲಸ ನೀಡದೇ ತೊಂದರೆ ಮಾಡುತ್ತಿದ್ದಾರೆ ಎಂದು ದೂರಿದರು.
ಒಂದು ವಾರದೊಳಗೆ ಎಲ್ಲಾ ಕುಟುಂಬಗಳಿಗೆ ಕೆಲಸ ನೀಡುತ್ತೇವೆ ಎಂದು ಪಿಡಿಓ ಭರವಸೆ ನೀಡಿದ ಪರಿಣಾಮ ಪ್ರತಿಭಟನೆಯನ್ನು ಹಿಂಪಡೆಯಲಾಯಿತು ಎಂದು ಮುಖಂಡರಾದ ಬಿ.ಭಾಗ್ಯ ತಿಳಿಸಿದ್ದಾರೆ.ಪ್ರತಿಭಟನೆಯಲ್ಲಿ ಬಿ.ರತ್ನಮ್ಮ, ಗಂಗಮ್ಮ, ಲಕ್ಷ್ಮಿಮ್ಮ, ಟಿ.ಹೊನ್ನಮ್ಮ, ಸುವರ್ಣಮ್ಮ, ಶಾರದಮ್ಮ, ಫಕೀರಮ್ಮ, ಹಾಲಮ್ಮ, ರೇಣುಕಮ್ಮ, ತಿಮ್ಮಕ್ಕ ಹಾಗೂ ಇತರರು ಭಾಗವಹಿಸಿದ್ದರು.