ಬೆಂಗಳೂರು
ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬಿಹಾರ ಮೂಲದ ಕೂಲಿಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಣ್ಣೂರು ಬಂಡೆ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ . ಹೊರಮಾವು ಅಗರದ ವಿಕಾಸ್ ಕುಮಾರ್‍ಸಾಹು (30)ಎಂದು ಮೃತಪಟ್ಟ ದುರ್ದೈವಿಯನ್ನು ಗುರುತಿಸಲಾಗಿದೆ . ಬಿಹಾರದಿಂದ ಕೂಲಿ ಅರಸಿ ಬಂದಿದ್ದ ವಿಕಾಸ್ ಕುಮಾರ್, ಅಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.
ಮನೆಯಿಂದ ಹೆಣ್ಣೂರು ಬಂಡೆ ಮಾರ್ಗವಾಗಿ ಹೋಂಡಾ ಆಕ್ಟಿವಾ ಸ್ಕೂಟರ್‍ನಲ್ಲಿ ಕೆಲಸಕ್ಕೆ ಬೆಳಿಗ್ಗೆ 7.30ರ ವೇಳೆ ಹೋಗುತ್ತಿದ್ದ ವಿಕಾಸ್ ಕುಮಾರ್‍ಗೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ವಿಕಾಸ್ ಕುಮಾರ್‍ಗೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಟಿಪ್ಪರ್ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಬಾಣಸವಾಡಿ ಸಂಚಾರ ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
