ಕೋಟೆನಾಡಿನಲ್ಲಿ ಆತಂಕ ಸೃಷ್ಠಿಸಿದ ನೀರಿನ ಸಮಸ್ಯೆ ಬತ್ತಿದ ಬೋರ್‍ವೆಲ್‍ಗಳು

ಚಿತ್ರದುರ್ಗ;

     ಕೋಟೆನಾಡು ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಜನರಲ್ಲಿ ಆತಂಕ ಮೂಡಿದೆ. ಈಗ ಬೇಸಿಗೆಯ ಕಾಲವಾಗಿರುವ ಕಾರಣ ಬಿಸಿಲಿನ ಝಳ ಹೆಚ್ಚಾದಂತೆ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆಯೂ ಅಧಿಕವಾಗತೊಡಗಿದೆ.

      ನಗರ, ಪಟ್ಟಣ ಪ್ರದೇಶ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೆಲವು ಗ್ರಾಮಗಳಲ್ಲಿ ಸಮಸ್ಯೆ ಬೀಕರವಾಗಿದ್ದು, ಸಂಜೆ ಮುಂಜಾನೆ ಜನರು ದೂರದ ಪ್ರದೇಶಗಳಿಂದ ನೀರು ತರಲು ಪರಾಡುವಂತಾಗಿದೆ. ಜಿಲ್ಲೆಯ ಬಹುತೇಕ ಕಡೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.

      ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದೆ, ಅಂತರ್ಜಲ ಬತ್ತಿ ಹೋಗಿವೆ. ಪರಿಣಾಮ ಜನರಿಗೆ ಕುಡಿಯುವ ನೀರಿನದೇ ದೊಡ್ಡ ಚಿಂತೆಯಾಗಿದ್ದು, ಪರಿಸ್ಯಿತಿ ಹೀಗೆ ಮುಂದುವರೆದರೆ ಭವಿಷ್ಯದ ದಿನಗಳ ಬಗ್ಗೆ ಆತಂಕ ಮೂಡಿಸುತ್ತಿದೆ.

      ಜಿಲ್ಲಾ ಕೇಂದ್ರದಲ್ಲಿಯೂ ಈ ಸಮಸ್ಯೆ ಇದೆ. ಶಾಂತಿಸಾಗರ ಮತ್ತು ವಾಣಿ ವಿಲಾಸ ಸಾಗರದಿಂದ ನಗರಕ್ಕೆ ನೀರು ಪೂರೈಕೆಯಾಗುತ್ತಿದ್ದು , ಜನರು ಈ ನೀರನ್ನೇ ಆಶ್ರಯಿಸಬೇಕಾಗಿದೆ. ಬಹುತೇಕ ಕೊಳವೆ ಭಾವಿಗಗಳು ಬತ್ತಿಹೋಗಿದ್ದು, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಉಳಿದವರು ಮುನಿಸಿಪಾಲಿಟಿಯವರು ಬಿಡುವ ನೀರು ನಂಬಿಕೊಂಡು ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

      ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ನಾಗರೀಕರು ಸೈಕಲ್, ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ತಳ್ಳುವ ಗಾಡಿ, ಕಾಲ್ನಡಿಗೆ ಮೂಲಕ ಕಿಲೋ ಮೀಟರ್‍ಗಟ್ಟಲೇ ತೋಟ, ಹೊಲಗಳಿಗೆ ಅಲೆದಾಡಿ ನೀರು ತುಂಬಿಸಿಕೊಂಡು ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

     ಜನ ದೈನಂದಿನ ಕೆಲಸ ಕಾರ್ಯ ಬದಿಗಿಟ್ಟು ಬಿಸಿಲನ್ನು ಲೆಕ್ಕಿಸದೆ ಗ್ರಾಮದ ಸಮೀಪ ನಿತ್ಯವೂ ನೀರು ಸಿಗುವ ಸ್ಥಳಗಳಿಗೆ ಹೋಗಿ ನೀರು ತರುವಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಚಿತ್ರದುರ್ಗ ತಾಲ್ಲೂಕಿನ ತುರುವನೂರು, ಹೀರೇಗುಂಟನೂರು ಹೋಬಳಿ ವ್ಯಾಪ್ತಿಯಲ್ಲಿಯೂ ಸಮಸ್ಯೆ ಹೆಚ್ಚುತ್ತಿದ್ದು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

      ತುರುವನೂರು ಹೋಬಳಿ ವ್ಯಾಪ್ತಿಯ ಚಿಕ್ಕಗೊಂಡನಹಳ್ಳಿ, ಕೂನಬೇವು, ಮಾಡನಾಯಕನಹಳ್ಳಿ, ಮುದ್ದಾಪುರ, ತುರುವನೂರು, ಬೆಳಗಟ್ಟ ಸೇರಿ ಆರು ಗ್ರಾಮ ಪಂಚಾಯಿತಿಗಳ ಬಹುತೇಕ ಗ್ರಾಮಗಳಲ್ಲಿ ನೀರಿನ ಬರ ತಾಂಡವವಾಡುತ್ತಿದೆ.

ಬೆಳಗಟ್ಟ ಗ್ರಾಮ ಪಂಚಾಯಿತಿ

        ವ್ಯಾಪ್ತಿಯ ಹಾಯ್ಕಲ್, ಕೋಟೆಹಟ್ಟಿ, ಹಾಯ್ಕಲ್ ಗೊಲ್ಲರಹಟ್ಟಿ, ಹಳೆಚೂರಿ ಪಾಪಯ್ಯನಹಟ್ಟಿ, ಹೊಸಚೂರಿ ಪಾಪಯ್ಯನಹಟ್ಟಿ ಗ್ರಾಮಗಳಲ್ಲಿ ಮಿತಿಮೀರಿದ ನೀರಿನ ಸಮಸ್ಯೆ ತೀವ್ರವಾಗಿದೆ.ಬೆಳಗಟ್ಟ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಪ್ರತಿದಿನವೂ ನೀರಿಗಾಗಿ ಪರದಾಡುತ್ತಿದ್ದೇವೆ. ಒಂದು ಗಂಟೆ ನೀರು ಬಂದ ನಂತರ ಸ್ಥಗಿತಗೊಳ್ಳುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಗ್ರಾಮಸ್ಥರು.

         ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಇದುವರೆಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಶಾಶ್ವತ ಯೋಜನೆ ರೂಪಿಸಿ:

       ಗ್ರಾಮದಲ್ಲಿ ಹೆಚ್ಚಿನ ಜನಸಂಖ್ಯೆ ಯಿರುವ ಕಾರಣ ಗ್ರಾಮದ ಕೊಳವೆಬಾವಿಗಳಲ್ಲಿ ಬರುತ್ತಿರುವ ನೀರು ಸಾಕಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

      ದಿನಕ್ಕೆ 10 ಬಿಂದಿಗೆ ನೀರು: ನೀರು ಸಂಗ್ರಹಿಸಲು ಉಂಟಾಗುತ್ತಿದ್ದ ಜಗಳ ತಪ್ಪಿಸಲು ಗ್ರಾಮಸ್ಥರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.ಪ್ರತಿ ಕುಟುಂಬಕ್ಕೆ ಸರದಿಯಲ್ಲಿ ದಿನವೊಂದಕ್ಕೆ ಹತ್ತು ಬಿಂದಿಗೆ ನೀರು ಸಂಗ್ರಹಿಸಬಹುದು. ಹತ್ತು ಬಿಂದಿಗೆ ನಂತರ ಮತ್ತೊಮ್ಮೆ ಸರದಿ ಸಾಲು ಪುನರಾವರ್ತನೆಯಾಗುತ್ತದೆ’ ಎನ್ನುತ್ತಾರೆ ಬೆಳಗಟ್ಟ ಗ್ರಾಮದ ಕೃಷ್ಣಾರೆಡ್ಡಿ.

 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap