ಕೊಟ್ಟ ಭರವಸೆಗಳನ್ನು ಈಡೇರಿಸದ ಮೋದಿ

ತುಮಕೂರು

         ಕಳೆದ ಲೋಕಸಭಾ ಚುನಾವಣೆಗೆ ಕಾರ್ಮಿಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಠ ವೇತನ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದ ಮೋದಿಯವರು ಗೆದ್ದನಂತರ ಯಾವುದೇ ಆಶ್ವಾಸನೆಗಳನ್ನು ಈಡೇರಿಸದೆ ಕೇವಲ ಸಮಸ್ಯೆಗಳ ಕೂಪಕ್ಕೆ ತಳ್ಳಿದ್ದಾರೆ ಎಂದು ಎಐಟಿಯುಸಿ ರಾಜ್ಯ ಕಾರ್ಯಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಆರೋಪಿಸಿದರು.

         ನಗರದ ಎಚ್.ಆರ್.ರೇವಣ್ಣ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ , ಸಹಾಯಕಿಯರಿಗೆ ಕನಿಷ್ಠ ವೇತನ ನೀಡುವಂತೆ ಅನೇಕ ಬಾರಿ ಒತ್ತಾಯ ಮಾಡಲಾಗಿದ್ದು, ಈ ವಿಚಾರವಾಗಿ ಮೋದಿಯವರೇ ಕನಿಷ್ಠ ವೇತನ ನೀಡಬೇಕು ಎಂದು ಘೋಷಣೆ ಮಾಡಿದರೇ ಹೊರತು ಕನಿಷ್ಠ ವೇತನ ನೀಡಿಲ್ಲ. ಈ ಬಗ್ಗೆ ಹೋರಾಟ ಮಾಡಿದಾಗ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸಿ ಕೇವಲ 1500 ರೂಗಳನ್ನು ಮಾತ್ರ ಹೆಚ್ಚಿಗೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಎಂದರು.

        ಅಂಗನವಾಡಿ ನೌಕರರಿಗೆ ಯಾವುದೇ ಪಿಂಚಣಿ ಸೌಲಭ್ಯ ಇಲ್ಲ. ಭವಿಷ್ಯನಿಧಿ ಸೌಲಭ್ಯ ಇಲ್ಲ. ಕಾಯಿಲೆ ಪೀಡಿತರಾಗಿ ನೌಕರಿಯಿಂದ ನಿವೃತ್ತಿ ಪಡೆದರೆ ಅವರಿಗೆ ಚಿಕಿತ್ಸಾ ಸೌಲಭ್ಯ ಇಲ್ಲ. ಇವುಗಳು ಸೇರಿದಂತೆ ಇನ್ನು ಅನೇಕ ಸಮಸ್ಯೆಗಳಿದ್ದರೂ ಕೇಂದ್ರ ಸರ್ಕಾರದ ಪ್ರಧಾನಿ ಮೋದಿಯವರು ಸ್ವಲ್ಪನೂ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದರು.

       ಮೋದಿಯವರಿಗೆ ರೈತರ ಸಾಲ ಮನ್ನಾ ಬಗ್ಗೆ ಕೇಳಿದರೆ ಅವರ ಬಳಿ ಹಣವಿಲ್ಲ ಎಂದು ಹೇಳುತ್ತಾರೆ. ಆದರೆ ಬೆರಳೆಣಿಕೆಯಷ್ಟು ಶ್ರೀಮಂತರ ಸಾಲ ಮಾಫಿ ಮಾಡುತ್ತಾರೆ. ಬ್ಯಾಂಕುಗಳಲ್ಲಿ ಕೋಟ್ಯಂತರ ರೂಗಳನ್ನು ಸಾಲ ಪಡೆದು ಪರಾರಿಯಾದವರ ಬಗ್ಗೆ ಸೂಕ್ತ ಕ್ರಮ ಜರುಗಿಸಿಲ್ಲ. ಅವರು ಕಳೆದ ಐದು ವರ್ಷಗಳಲ್ಲಿ ಒಂದು ದಿನವಾದರೂ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಹಸ ಮಾಡಿಲ್ಲ. ಕೇವಲ ಮನ್‍ಕಿ ಬಾತ್ ಎಂದು ರೇಡಿಯೋ ಮುಖಾಂತರ ಮಾತನಾಡಿದರೆ ಅದನ್ನು ಕೇಳಬಹುದೇ ಹೊರತು ಅದರ ಬಗ್ಗೆ ಪ್ರಶ್ನೆ ಮಾಡಲಾಗುವುದಿಲ್ಲ ಎಂದರು.

       ಈ ನಿಟ್ಟಿನಲ್ಲಿ ದೇಶದಾದ್ಯಂತ ಎಡಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ತುಮಕೂರಿನಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷದ ವಿರುದ್ಧ ಎನ್.ಶಿವಣ್ಣ, ಚಿಕ್ಕಬಳ್ಳಾಪುರದಲ್ಲಿ ವರಲಕ್ಷ್ಮೀ, ಉತ್ತರ ಭಾಗದಲ್ಲಿ ಕನ್ನಯ್ಯಕುಮಾರ್ ಸೇರಿದಂತೆ ಹಲವರನ್ನು ಸ್ಪರ್ಧೆಗೆ ನಿಲ್ಲಿಸಿದ್ದೇವೆ. ಅವರು ಜಯಶೀಲರಾಗಿ ಲೋಕಸಭೆಯಲ್ಲಿ ಜನರ ಸಮಸ್ಯೆಗಳ ಚರ್ಚಿಸಿ ಪರಿಹಾರ ಕಂಡುಕೊಡಲಿದ್ದಾರೆ. ಉಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ನಮ್ಮ ಬೆಂಬಲ ನೀಡಲಾಗುತ್ತದೆ ಎಂದು ತಿಳಿಸಿದರು.

        ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಮಾತನಾಡಿ, ದೇಶದ 50ರಷ್ಟು ಬಡಜನರು ಫುಟ್ ಪಾತ್‍ಗಳ ಮೇಲೆ ವಾಸ ಮಾಡುತ್ತಾ ಜೀವನ ಮಾಡುತ್ತಿದ್ದಾರೆ. ಅವರಿಗೆ ನಿರ್ದಿಷ್ಠ ಸೂರು ಇಲ್ಲ. ಅನೇಕ ವಿದ್ಯಾವಂತ ಯುವಕರು ಉದ್ಯೋಗ ಇಲ್ಲದೆ ಪರದಾಡುತ್ತಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದಿದ್ದ ಮೋದಿಯರವು ಕನಿಷ್ಠ ಪಕ್ಷ 2 ಲಕ್ಷ ಉದ್ಯೋಗಗಳನ್ನು ಕೂಡ ದೊರಕಿಸಿಕೊಟ್ಟಿಲ್ಲ ಎಂದು ಆರೋಪಿಸಿದರು.

        ಕೆಎಸ್‍ಆರ್‍ಟಿಸಿ ಸಂಘಟನೆಯ ಮುಖಂಡರಾದ ರಾಜಗೋಪಾಲ್ ಮಾತನಾಡಿ, ಮೋದಿಯವರು ಸ್ವಯಂ ಪ್ರೇರಿತರಾಗಿ ಗೆದ್ದಿಲ್ಲ. ಅವರು ಮಾಧ್ಯಮದ ಪ್ರಚಾರದ ಮೂಲಕ ಗೆದ್ದಿದ್ದಾರೆ. ದೇಶದ ಶೇ.63% ರಷ್ಟು ಮಂದಿ ಮೋದಿಯವರ ವಿರೋಧಿಗಳಾಗಿದ್ದಾರೆ. ಅವರ ನಡುವೆಯೂ ರಾಜಕೀಯ ತೀರ್ಮಾನಗಳಲ್ಲಿ ಪ್ರಧಾನಿಯಾಗಿದ್ದಾರೆ. ಪ್ರಾರಂಭದಲ್ಲಿ ಚಾಯ್‍ವಾಲಾ ಎಂದು ಹೇಳುತ್ತಿದ್ದವರೂ ಇದೀಗ ಚೌಕಿದಾರ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇವರ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳಿಂದ ಜನರು ಬೇಸತ್ತಿದ್ದಾರೆ ಎಂದರು.

         ಎಸ್‍ಯುಸಿಐನ ಅಶ್ವಿನಿ ಮಾತನಾಡಿ, ಸಿಪಿಐ ಹಾಗೂ ಸಿಪಿಐಎಂ ಪಕ್ಷದ ಅಭ್ಯರ್ಥಿಗೆ ಎಸ್‍ಯುಸಿಐ ಸಂಘಟನೆಯಿಂದ ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದರಲ್ಲದೆ, ದೇಶದ ಅಭಿವೃದ್ಧಿಯಲ್ಲಿ ಎಡಪಕ್ಷಗಳ ಪ್ರಾಮುಖ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಎಡಪಕ್ಷದ ಅಭ್ಯರ್ಥಿಗೆ ಮತ ನೀಡಿ ಜಯಶಾಲಿಯನ್ನಾಗಿಸಲು ಮನವಿ ಮಾಡಿದರು.

         ಜಿಲ್ಲಾಕಾರ್ಯದರ್ಶಿ ಗಿರೀಶ್, ಸಿಪಿಐ ಜಿಲ್ಲಾ ಖಜಾಂಚಿ ಕಂಬೇಗೌಡರು, ಸಿಪಿಐ ಸಹ ಕಾರ್ಯದರ್ಶಿ ಅಶ್ವಥ್‍ನಾರಾಯಣ್, ಅಂಗನವಾಡಿ ಮುಖಂಡರಾದ ಫಾತೀಮಾ, ದಾವಣೆಗೆರ ಮುಖಂಡರಾದ ಎನ್.ಎಚ್.ರಾಮಪ್ಪ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap