ದಾವಣಗೆರೆ:
ಇದೇ ಫೆ.28ರಂದು ಕೊಟ್ಟೂರಿನಲ್ಲಿ ನಡೆಯಲಿರುವ ಶ್ರೀಗುರುಬಸರಾಜೇಂದ್ರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ತೆರಳುವ ಪಾದಯಾತ್ರಿಗಳಿಗೆ ಫೆ.25ರಂದು ಸಂಜೆ 5 ಗಂಟೆಗೆ ನಗರದ ಚೌಕಿಪೇಟೆಯ ಶ್ರೀಗುರುಬಕ್ಕೇಶ್ವರ ದೇವಸ್ಥಾನದಿಂದ ಬೀಳ್ಕೊಡಲಾಗುವುದು ಎಂದು ಪಾದಯಾತ್ರೆ ಟ್ರಸ್ಟ್‍ನ ಅಧ್ಯಕ್ಷ ಕಣ್ವಕುಪ್ಪಿ ಮುರುಗೇಶಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಟೂರು ಪಾದಯಾತ್ರಿಗಳ ಬೀಳ್ಕೊಡುಗೆ ಸಮಾರಂಭದ ಸಾನಿಧ್ಯವನ್ನು ಹೆಬ್ಬಾಳು ವಿರಕ್ತಮಠದ ಶ್ರೀಮಹಾಂತರುದ್ರೇಶ್ವ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಶ್ರಿ ಬಸವಪ್ರಭು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ವಹಿಸಿಕೊಳ್ಳಲಿದ್ದಾರೆಂದು ಹೇಳಿದರು.
ಫೆ.26ರಂದು ಸಂಜೆ 4 ಗಂಟೆಗೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಶ್ರೀಕೋಲಶಾಂತೇಶ್ವರ ವಿರಕ್ತಮಠದ ಆವರಣದಲ್ಲಿ ನಡೆಯುವ ಔಷಧೋಪಚಾರ ಸೇವೆಯ ಸಮರೋಪ ಸಮಾರಂಭದಲ್ಲಿ ಅರಸೀಕರೆಯ ಶ್ರೀಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವನ್ನು ವಹಿಸಲಿದ್ದಾರೆ ಎಂದರು.
ಶ್ರೀಕೊಟ್ಟೂರು ಕ್ಷೇತ್ರಕ್ಕೆ ಈ ವರ್ಷ ಸುಮಾರು 30ರಿಂದ 35 ಸಾವಿರ ಪಾದಯಾತ್ರಿಗಳು ತೆರಳುವ ನಿರೀಕ್ಷೆ ಇದೆ. ಮಾರ್ಗದುದ್ದಕ್ಕೂ ಎಲ್ಲಾ ಪಾದಯಾತ್ರಿಗಳಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ವೈದ್ಯರಿಂದ ಆರೋಗ್ಯ ಚಿಕಿತ್ಸೆ, ಅಗತ್ಯ ಔಷಧಿ ವಿತರೆಣೆಗೆ ವ್ಯವಸೃಎ ಮಾಡಲಾಗಿದೆ ಎಂದರು.
ಆರಂಭದಲ್ಲಿ ಕೇವಲ 10ರಿಂದ 15 ಜನರಿಂದ ಆರಂಭವಾದ ಪಾದಯಾತ್ರೆಯಲ್ಲಿ ಈಗ 30-35 ಸಾವಿರ ಜನರು ಪಾಲ್ಗೊಳ್ಳುತ್ತಿರುವುದು ನೋಡಿದರೆ ಶ್ರೀಕೊಟ್ಟೂರು ಬಸವರಾಜೇಂದ್ರ ಸ್ವಾಮೀಯ ಶಕ್ತಿ ಅಪಾರವಾಗಿದೆ ಎಂಬುದು ತಿಳಿದು ಬರಲಿದೆ ಎಂದು ಹೇಳಿದರು.
ಮಾಗನಹಳ್ಳಿ ರಸ್ತೆಯಲ್ಲಿರುವ ಒಂದು ಎಕರೆ ಜಮೀನನ್ನು ಶ್ರೀಮತಿ ಶೈಲಜಾರಾಣಿ ಮತ್ತು ಆರ್.ಜಿ.ದತ್ತರಾಜ್ ಅವರು ಕೊಟ್ಟೂರು ಶ್ರೀಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‍ಗೆ ನೀಡಿದ್ದು, ಅದನ್ನು ಟ್ರಸ್ಟ್ ಅಧೀನಕ್ಕೆ ಪಡೆದು, ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆ ಮಾಡಿಸಲಾಗಿದೆ.
ದಾಖಲೆಗಳು ಟ್ರಸ್ಟ್‍ನ ಅಧೀನದಲ್ಲಿವೆ. ಈ ಜಾಗದಲ್ಲಿ ಶ್ರೀಗುರುಬಸವರಾಜೇಂದ್ರ ಸ್ವಾಮಿಯ ಮಂದಿರಕ್ಕೆ ಗರ್ಭಗುಡಿಯನ್ನು ಪೂರ್ಣ ಕಲ್ಲಿನಿಂದ ನಿರ್ಮಿಸಲಾಗಿದೆ. ಪ್ರಾಂಗಣ, ದಾಸೋಹ ಭವನ, ಸಮುದಾಯ ಭವನ, ಗ್ರಂಥಾಲಯ, ಉದ್ಯಾನವನ ಸೇರಿದಂತೆ ಪಾದಯಾತ್ರಿಗಳಿಗೆ ಸ್ನಾನದ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ದಾನಿಗಳು ತನು, ಮನ, ಧನ ಸಹಕರಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಉಪಾಧ್ಯಕ್ಷ ಆರ್.ಜಿ.ದತ್ತರಾಜ್, ಮಲ್ಲಾಬಾದಿ ಗುರುಬಸವರಾಜ್, ಟಿ.ಜೆ.ಬಕ್ಕೇಶ್, ಬಿ.ಚಿದಾನಂದ, ಎ.ಎಸ್.ಮೃತ್ಯುಂಜಯ, ಸಿ.ಆರ್.ಜಯರಾಜ್, ಮತ್ತಿಹಳ್ಳಿ ಕೊಟ್ರೇಶ್, ಬೂಸ್ನೂರು ಸುಜಾತಮ್ಮ ಮತ್ತಿತರರು ಹಾಜರಿದ್ದರು.