ಕೆ ಆರ್ ಮಾರ್ಕೆಟ್ ಬಂದ್ ಮಾಡಲಾಗುವುದು: ಆರ್ ಅಶೋಕ್

ಬೆಂಗಳೂರು

     ಕೆ ಆರ್ ಮಾರುಕಟ್ಟೆಯನ್ನು ಬಂದ್ ಮಾಡುವುದು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಗಳಲ್ಲಿ 10 ದಿನ ಸೀಲ್ ಡೌನ್ ಜಾರಿಗೊಳಿಸುವ ಜೊತೆಗೆ ನಾಳೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ದರ ನಿಗದಿ ಸೇರಿ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

     ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕರೆದಿದ್ದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಂ ಕ್ವಾರಂಟೈನ್ ವ್ಯಕ್ತಿಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಮೊಬೈಲ್ ಗಳನ್ನು ಮನೆಯಲ್ಲಿಟ್ಟು ಹೊರಗೆ ಅಡ್ಡಾಡುತ್ತಿದ್ದಾರೆ ಇಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಸೂಚನೆ ನೀಡಲಾಗಿದೆ ಎಂದರು.

     ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಎದುರಾಗಬಾರದು ಎನ್ನುವ ಕಾರಣಕ್ಕೆ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳ ಜೊತೆ ಸಭೆ ಕರೆದು ಚರ್ಚೆ ನಡೆಸಲಾಗುವುದು. ನಾಳೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಘಟಕ ಆರಂಭಿಸಲು ಮುಖ್ಯಮಂತ್ರಿ ಸೂಚಿಸಿದ್ದು, ಇಂದು ಸಂಜೆ ಚಿಕಿತ್ಸೆಗೆ ದರ ನಿಗದಿ ಮಾಡಿದ್ದಾರೆ ಎಂದರು.

    ಸಾಂಸ್ಥಿಕ ಕ್ವಾರಂಟೈನ್ ಗಳಲ್ಲಿ ಮೂಲಸೌಕರ್ಯ ಕೊರತೆ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಅಲ್ಲಿ ನೀರು, ಶೌಚಾಲಯ ಸೇರಿ ಇತರ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಹೆಚ್ಚಿನ ಕ್ರಮಕ್ಕೆ ಬಿಬಿಎಂಪಿಗೆ ಸೂಚನೆ ನೀಡಿದ್ದೇವೆ. ವಾರ್ಡ್ ಮಟ್ಟದಲ್ಲಿ ಕೋವಿಡ್ ಹರಡುತ್ತಿದೆ. ಹೀಗಾಗಿ ವಾರ್ಡ್ ಮಟ್ಟದಲ್ಲಿ ಅಧಿಕಾರಿಗಳ ತಂಡ ರಚನೆ ಮಾಡಲಾಗುತ್ತಿದೆ ಎಂದು ಅಶೋಕ್ ಹೇಳಿದ್ದಾರೆ.

     ವಾರ್ ರೂಂ ನಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಇದೆ ಎನ್ನುವ ಮಾಹಿತಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲಾ ಅಧಿಕಾರಿಗಳಿಗೆ ಈ ಮಾಹಿತಿ ಸಿಗಲಿದೆ. ದೃಢಪಟ್ಟ ಪ್ರಕರಣಗಳ ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಕೆ.ಆರ್ ಮಾರ್ಕೆಟ್ ಬಂದ್ ಮಾಡಲಾಗುತ್ತಿದೆ. ಬೆಂಗಳೂರಿನ ಐದು ವಾರ್ಡ್ ಗಳ ಕೆಲ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗುತ್ತದೆ. ಚಿಕ್ಕಪೇಟೆ, ಚಾಮರಾಜನಗರ ವ್ಯಾಪ್ತಿಯ ಸಿದ್ದಾಪುರ, ವಿವಿ ಪುರ, ಕಲಾಸಿಪಾಳ್ಯ ಧರ್ಮರಾಯ ದೇವಸ್ಥಾನ ರಸ್ತೆ, ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಲಾಕ್ ಡೌನ್ ಜಾರಿಗೆ ತರಲಾಗುತ್ತಿದೆ. ಅಲ್ಲಿನ ಮಾರುಕಟ್ಟೆಗಳನ್ನು ಬಂದ್ ಮಾಡಲಾಗುವುದು. ರಾಜ್ಯದ ಯಾದಗಿರಿ, ಬಳ್ಳಾರಿ, ಕಲಬುರಗಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಅಲ್ಲಿಯೂ ಕೆಲ ಪ್ರದೇಶಗಳಲ್ಲಿ ಲಾಕ್ ಡೌನ್ ಮಾಡಲಾಗುವುದು. ಇಷ್ಟು ದಿನ ಕೊರೊನಾ ಪಾಸಿಟಿವ್ ಬಂದಲ್ಲಿ ಆ ನಿವಾಸದ ಅಕ್ಕಪಕ್ಕ ಮನೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿತ್ತು. ಆದರೆ ಈಗ ಆ ಮನೆಯ ಹಿಂದೆ- ಮುಂದಿನ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

     ಪ್ರತಿ ವಾರ್ಡ್ ಗಳಲ್ಲಿ ಜ್ವರ ಚಿಕಿತ್ಸಾಲಯ ತೆಗೆಯಲಾಗುವುದು ಮತ್ತು ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದರೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತೊಂದರೆ ಇಲ್ಲ. ಶಿಕ್ಷಣ ಇಲಾಖೆ ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದು ಆರ್ ಅಶೋಕ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap