ಕೃಷಿ ಬೆಳವಣಿಗೆಗೆ ಕೈಗಾರಿಕೆ ನೆರವಾಗಲಿ

ತುಮಕೂರು

   ಕೃಷಿಗೆ ಪೂರಕವಾದ ಕೈಗಾರಿಕೆ ಉತ್ಪನ್ನಗಳನ್ನು ರೈತರಿಗೆ ಪರಿಚಯಿಸುವ ಹಾಗೂ ಆ ಮೂಲಕ ಕೃಷಿ ಬೆಳವಣಿಗೆಗೆ ನೆರವಾಗುವ ಆಶಯದ 3 ದಿನಗಳ ಸೌತ್ ಇಂಡಿಯಾ ಆಗ್ರೋ ಎಕ್ಸ್‍ಪೋ ಕೃಷಿ ಮತ್ತು ಪೂರಕ ವಸ್ತು ಪ್ರದರ್ಶನ ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಆರಂಭವಾಯಿತು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಈ ವಸ್ತು ಪ್ರದರ್ಶನ ಆಯೋಜಿಸಿದೆ.

    ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ, ಆಧುನಿಕ ಕೃಷಿ ಪದ್ದತಿ ಕುರಿತು ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ.
ನಗರ ಪಾಲಿಕೆ ಮೇಯರ್ ಲಲಿತಾ ರವೀಶ್ ವಸ್ತು ಪ್ರದರ್ಶನ ಉದ್ಘಾಟಿಸಿ, ಕೃಷಿ ಚಟುವಟಿಕೆಗೆ ರೈತರಿಗೆ ಬೇಕಾದ ಯಂತ್ರೋಪಕರಣಗಳು ಸುಲಭ ದರದಲ್ಲಿ ರೈತರಿಗೆ ಸಿಗುವಂತಾಗಬೇಕು, ಇಲಾಖೆಗಳು, ಕೈಗಾರಿಕೆಗಳು ರೈತರಿಗೆ ಉತ್ತೇಜನ ನೀಡಿ ಕೃಷಿಯನ್ನು ಲಾಭದಾಯಕವಾಗಿ ಮಾಡಿ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

   ರೈತರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕು. ಕೃಷಿ ಕೆಲಸಕ್ಕೆ ಕೂಲಿ ಆಳುಗಳು ದೊರೆಯುತ್ತಿಲ್ಲ ಎಂಬ ಸಮಸ್ಯೆ ಬಗೆಹರಿಯಬೇಕು. ಕೈಯಿಂದ ಮಾಡುವ ಕೃಷಿ ಕೆಲಸವನ್ನು ಯಂತ್ರಗಳಿಂದ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ. ಆಧುನಿಕ ಕೃಷಿ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

   ಕೆಎಸ್‍ಎಸ್‍ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಹೆಚ್. ಪಿ. ಪ್ರಕಾಶ್, ಎನ್‍ಎಸ್‍ಐಸಿ ವಲಯ ಪ್ರಧಾನ ವ್ಯವಸ್ಥಾಪಕ ಪಿ. ರವಿಕುಮಾರ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಕೆ. ದೇವರಾಜು ಮಾತನಾಡಿ, ಇಲಾಖೆಗಳಿಂದ ಕೈಗಾರಿಕೆಗಳ ಬೆಳವಣಿಗೆಗೆ ಹಲವಾರು ಉತ್ತೇಜನಾಕಾರಿ ಯೋಜನೆ, ಸಲತ್ತುಗಳಿವೆ. ಕೈಗಾರಿಕೆಗಳು ಕೃಷಿಗೆ ನೆರವಾಗಲಿ, ತಮ್ಮ ಹೊಸ ಆವಿಷ್ಕಾರಗಳು ಕೃಷಿ ಬೆಳವಣಿಗೆಗೆ ಆದ್ಯತೆಯಾಗಲಿ ಎಂದು ಸಲಹೆ ಮಾಡಿದರು.

  ಎಪಿಎಂಸಿ ಅಧ್ಯಕ್ಷ ವೈ.ಟಿ. ನಾಗರಾಜ್ ಮಾತನಾಡಿ, ಈ ಆಗ್ರೋ ಎಕ್ಸ್‍ಪೋ ಪ್ರದರ್ಶನದಲ್ಲಿ ಕೃಷಿ ಹಾಗೂ ಸಣ್ಣ ಕೈಗಾರಿಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರಕಲಿದೆ ಹಾಗೂ ರೈತರಷ್ಟೇ ಅಲ್ಲದೆ ನಿರುದ್ಯೋಗಿ ಯುವಕ-ಯುವತಿಯರಿಗೆ ಕೃಷಿ ಹಾಗೂ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮನವರಿಕೆ ಮಾಡಿಕೊಡಲಾಗುವುದು. ತುಮಕೂರಿನಲ್ಲಿ ಸರ್ಕಾರದಿಂದ ಕೈಗಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಿ ನಿರುದ್ಯೋಗಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

   ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್. ರಾಜು ಮಾತನಾಡಿ, ಕೃಷಿ ಹಾಗೂ ಕೈಗಾರಿಕೆ ದೇಶದ ಬೆನ್ನೆಲುಬು. ಈ ಎರಡೂ ಕ್ಷೇತ್ರಗಳ ಬೆಳವಣಿಗೆಯಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ. ಎರಡೂ ಒಂದಕ್ಕೊಂದು ಪೂರಕವಾಗಿ ಬೆಳೆಯಲಿ ಎಂದು ಆಶಿಸಿದರು.
ಸರ್ಕಾರ ಸಣ್ಣ ಕೈಗಾರಿಕೆಗಳಿಗೆ ಒತ್ತು ನೀಡುವ ಮೂಲಕ ಉದ್ಯೋಗ ಸೃಷ್ಠಿಗೆ ಮುಂದಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸುತ್ತಿದೆ. ತುಮಕೂರಿನಲ್ಲಿ ಫಿಟ್‍ನೆಸ್ ಹಾಗೂ ಕ್ರೀಡಾ ಉಪಕರಣಗಳ ತಯಾರಿಕಾ ಕ್ಲಸ್ಟರ್ ಸ್ಥಾಪಿಸುವ ಯೋಜನೆ ಜಾರಿಯಲ್ಲಿದೆ ಎಂದು ಹೇಳಿದರು.

    ಉಪಾಧ್ಯಕ್ಷ ಕೆ. ಬಿ. ಅರಸಪ್ಪ ಮಾತನಾಡಿ, ರೈತರು ಕಷ್ಟಪಟ್ಟು ದುಡಿಯುತ್ತಾರೆ. ಅವರಿಗೆ ಆಧುನಿಕ ಕೃಷಿ ಪದ್ದತಿ ಬಗ್ಗೆ ತಿಳುವಳಿಕೆ ನೀಡಿ, ಕಡಿಮೆ ಶ್ರಮದಲ್ಲಿ, ಸುಲಭದಲ್ಲಿ ಕೃಷಿ ಮಾಡುವ ತಂತ್ರಜ್ಞಾನಗಳನ್ನು ಪರಿಚಯಿಸಬೇಕಾಗಿದೆ. ಇಂತಹ ವಸ್ತು ಪ್ರದರ್ಶನಗಳು ರೈತರಿಗೆ ನೆರವಾಗಲಿವೆ ಎಂದರು.

    ಪೈರು ನಾಟಿ ಮಾಡಲು, ಬೆಳೆ ಕಟಾವಿಗೆ, ಕಳೆ ತೆಗೆಯಲು ಯಂತ್ರಗಳಿವೆ. ರೈತರು ಇವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ರೈತರೇ ಕಾಣಲಿಲ್ಲ

     ರೈತರಿಗಾಗಿಯೇ ಏರ್ಪಡಿಸಿದ್ದ, ಕೃಷಿ ಪೂರಕ ವಸ್ತು ಪ್ರದರ್ಶನವಾದರೂ ಇಲ್ಲಿ ರೈತರೇ ಕಾಣಲಿಲ್ಲ. ಉದ್ಘಾಟನಾ ಸಮಾರಂಭದಲ್ಲಿ ಬೆರಳೆಣಿಕೆಯಷ್ಟು ಕೃಷಿಕರಿದ್ದರು. ಕೈಗಾರಿಕೋದ್ಯಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಾರ್ಯಕ್ರಮದ ಬಗ್ಗೆ ಹಳ್ಳಿಗಳಲ್ಲಿ ಪ್ರಚಾರ ಮಾಡಿದಂತಿಲ್ಲ. ರೈತ ಸಮುದಾಯವನ್ನು ಒಳಗು ಮಾಡಿಕೊಂಡಂತೆ ಕಂಡುಬರಲಿಲ್ಲ. ಎಪಿಎಂಸಿ ಹೊರತುಪಡಿಸಿ ಇತರೆ ಕೃಷಿ ಸಂಬಂಧಿತ ಇಲಾಖೆಗಳ ಸಹಭಾಗಿತ್ವವೂ ಕಾಣಲಿಲ್ಲ.

    ಕಾರ್ಯಕ್ರಮದಲ್ಲಿ ಕಾಸಿಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಜಗೋಪಾಲ, ಜಂಟಿ ಕಾರ್ಯದರ್ಶಿ ಟಿ.ಎಂ. ವಿಶ್ವನಾಥ್ ರೆಡ್ಡಿ, ಖಜಾಂಚಿ ಎಸ್.ಎಂ. ಹುಸೇನ್, ಸೌತ್ ಆಗ್ರೋ ಎಕ್ಸ್‍ಪೋ ವೈಸ್ ಛೇರ್ಮನ್ ಬೋರೆಗೌಡ, ಪ್ಯಾನೆಲ್ ಛೇರ್ಮನ್ ಸದಾಶಿವ ಆರ್. ಅಮಿನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್. ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರದರ್ಶನ

     ಈ ಕೃಷಿ ಪೂರಕ ವಸ್ತುಪ್ರದರ್ಶನದಲ್ಲಿ ಕೃಷಿ ಇಲಾಖೆಯಿಂದ ಹಸಿರೆಲೆ ಗೊಬ್ಬರ ತಯಾರಿಕೆ, ಭೂಮಿಯ ಫಲವತ್ತತೆ ಹೆಚ್ಚಿಸುವ, ಘನ ಹಾಗೂ ದ್ರವ ಜೀವಾಮೃತ ತಯಾರಿಕೆ ಕುರಿತು ಏರ್ಪಡಿಸಿದ್ದ ಪ್ರದರ್ಶನ ವಿಶೇಷವಾಗಿತ್ತು. ಅಲ್ಲದೆ ಸಿರಿಧಾನ್ಯ, ರೈತರ ಜಮೀನಿನ ಸುತ್ತ ಅಳವಡಿಸಲಾಗುವ ಹೈ ಕೋಟೆಡ್ ಮುಳ್ಳು ಬೇಲಿ ತಂತಿ, ನೆರಳು ಪರದೆ, ಪವರ್ ಟಿಲ್ಲರ್, ಪವರ್ ಸೇವರ್, ಸಹಾಯಧನದಡಿ ದೊರೆಯುವ ಟ್ರಾಕ್ಟರ್, ಸಬ್‍ಮರ್ಸಿಬಲ್ ಪಂಪ್, ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸಲಕರಣೆಗಳು, ತರಕಾರಿ, ಹೂವು, ಹಣ್ಣಿನ ಗಿಡಗಳ ಬೀಜ, ಔಷಧಿ ಸಿಂಪಡಿಸುವ ಯಂತ್ರ, ಮತ್ತಿತರ ಕೃಷಿ ಸ್ನೇಹಿ ಯಂತ್ರ, ಕೃಷಿ ಸಂಬಂಧಿತ ಮಾಹಿತಿಯನ್ನೊಳಗೊಂಡ ನಿಯತಕಾಲಿಕೆಗಳು ರೈತರ ಕೈಗೆಟುಕುವ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap