ಶಿರಾ:
ತಾಲ್ಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಕೃಷಿಕನ ಬದುಕು ಸಂಕಷ್ಟದಲ್ಲಿದ್ದು ಬರದ ನಾಡಿನ ಈ ಭಾಗದ ರೈತರ ಬದುಕು ಹಸನಾಗಬೇಕಾದಲ್ಲಿ ವರುಣನ ಕೃಪೆ ಅನಿವಾರ್ಯ ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ತಿಳಿಸಿದರು.
ಕೃಷಿ ಇಲಾಖೆಯ ವತಿಯಿಂದ ಮಂಗಳವಾರ ನಡೆದ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಸಾವಿರ ಅಡಿ ಭೂಮಿ ಕೊರೆದರೂ ಅಂತರ್ಜಲ ಸಿಗದಂತಾಗಿದೆ. ಪ್ರಸಕ್ತ ವರ್ಷವಾದರೂ ಮುಂಗಾರು ಚುರುಕಿನಿಂದ ನಡೆಯುತ್ತದೆ ಅಂದುಕೊಂಡ ರೈತರಿಗೆ ನಿರಾಸೆಯಾಗಿದ್ದು ಇನ್ನೂ ಬಿತ್ತನೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಉತ್ತಮ ಮಳೆಯಾಗುತ್ತದೆ ಎಂಬ ಆಶಾಭಾವನೆ ಇದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ಕೈಗೊಂಡ ಕೃಷಿ ಅಭಿಯಾನ ಕಾರ್ಯಕ್ರಮದಿಂದ ರೈತರು ಕೃಷಿಯ ಬಗ್ಗೆ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಜಿ.ಪಂ. ಅಧ್ಯಕ್ಷೆ ಶ್ರೀಮತಿ ಲತಾ ರವಿಕುಮಾರ್ ಮಾತನಾಡಿ ಕೃಷಿ ಇಲಾಖೆಯು ವಿವಿಧ ಯೋಜನೆಯಡಿಯಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು ರೈತರು ಸದರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ಕೃಷಿ ಪದ್ಧತಿಯಲ್ಲಿನ ನೂತನ ತಂತ್ರಜ್ಞಾನಗಳ ಬಗ್ಗೆಯೂ ಕೃಷಿ ಅಭಿಯಾನದಲ್ಲಿ ಅರಿವು ಮೂಡಿಸಲಿದ್ದು ಇದರ ಪ್ರಯೋಜನ ಪಡೆದುಕೊಳ್ಳುವುದು ಅಗತ್ಯ ಎಂದರು.
ತಾ.ಪಂ. ಅಧ್ಯಕ್ಷೆ ಶ್ರೀಮತಿ ಹಂಸವೇಣಿ ಶ್ರೀನಿವಬಾಸ್, ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್, ತಿಮ್ಮಯ್ಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗನಾಥ್, ಎ.ಪಿ.ಎಂ.ಸಿ. ಅಧ್ಯಕ್ಷ ನರಸಿಂಹೇಗೌಡ, ಎಸ್.ಎಲ್.ಗೋವಿಂದರಾಜು, ಶ್ರೀನಿವಾಸ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ