ಸಾಂಕ್ರಾಮಿಕ ರೋಗಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು: ಶೈಲಜಾ ಬಸವರಾಜ್

ದಾವಣಗೆರೆ

      ಕ್ಷಯ ರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಕ್ಷಯ ರೋಗ ನಿರ್ಮೂಲನೆ ಮಾಡಲು ಸಾಂಕ್ರಾಮಿಕ ರೋಗಗಳು ಹಾಗೂ ಅವುಗಳ ಲಕ್ಷಣಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಪಂ ಅಧ್ಯಕ್ಷೆ ಜಿ.ಎನ್ ಶೈಲಜಾ ಬಸವರಾಜ್ ತಿಳಿಸಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಜು.15 ರಂದು ನಗರದ ಕುಟುಂಬ ಕಲ್ಯಾಣ ಕೇಂದ್ರ-2ರಲ್ಲಿ ಆಯೋಜಿಸಲಾಗಿದ್ದ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಂಕ್ರಾಮಿಕವಲ್ಲದ ರೋಗಗಳಿಂದ ರೋಗಿಗಳಷ್ಟೇ ಬಳಲುತ್ತಾರೆ. ಆದರೆ ಸಾಂಕ್ರಮಿಕ ರೋಗಗಳು ಇತರರಿಗೆ ಹರಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.

      ಕ್ಷಯ ರೋಗ ನಿರ್ಮೂಲನೆ ಮಾಡುವಲ್ಲಿ ಆರೋಗ್ಯ ಇಲಾಖೆಯ ಯಾವ ಸಿಬ್ಬಂದಿಯೂ ನಿರ್ಲಕ್ಷ್ಯ ತೋರದೆ ಜವಾಬ್ದಾರಿಯಿಂದ ಪ್ರ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಆಶಾ ಕಾರ್ಯಕರ್ತೆಯರು ತಮ್ಮ ಕಾರ್ಯಕ್ಷೇತ್ರದಲ್ಲಿರುವ ಕ್ಷಯ ರೋಗಿಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್ ರಾಘವೇಂದ್ರಸ್ವಾಮಿ ಮಾತನಾಡಿ, ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಕಂಡು ಬರುತ್ತವೆ. ಕ್ಷಯ ರೋಗಿಗಳನ್ನು ಮನೆಗಳಲ್ಲಿ ಕಡೆಗಣಿಸಲಾಗುತ್ತದೆ. ಆದ್ದರಿಂದ ಕ್ಷಯ ರೋಗಿಗಳಿಗೆ ನಿಕ್ಷಯ ಪೋಷಣಾ ಯೋಜನೆಯಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ಸೇವನೆಗೆ ಮಾಸಿಕವಾಗಿ ರೂ. 500 ಗಳನ್ನು ನೀಡಲಾಗುತ್ತಿದೆ ಎಂದರು.

       ಕ್ಷಯ ರೋಗವನ್ನು ದೂರವಿಡಿ, ಕ್ಷಯ ರೋಗಿಗಳನ್ನಲ್ಲ. ಕ್ಷಯ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ, ಕ್ಷಯ ರೋಗ ಮುಕ್ತ ಕರ್ನಾಟಕವನ್ನಾಗಿಸುವತ್ತ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕರೆ ನೀಡಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ರಾಘವನ್ ಪ್ರಾಸ್ತಾವಿಕವಾಗಿ ಮಾತನಾಡಿ, 2025ರ ವೇಳೆಗೆ ದೇಶದಲ್ಲಿ ಕ್ಷಯರೋಗವನ್ನು ಕೊನೆಗಾಣಿಸಿ ‘ಕ್ಷಯಮುಕ್ತ ಭಾರತ’ ಎಂದು ಘೋಷಿಸುವ ಗುರಿಯನ್ನು ಹೊಂದಲಾಗಿದೆ.

      ಪ್ರಸ್ತುತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಒಂದು ವರ್ಷಕ್ಕೆ ಅಂದಾಜು 194 ಕ್ಷಯ ರೋಗಿಗಳು ಚಿಕಿತ್ಸೆಗಾಗಿ ದಾಖಲಾಗುತ್ತಿದ್ದು, ಈ ಸಂಖ್ಯೆಯನ್ನು 44 ಕ್ಕಿಂತ ಕಡಿಮೆಗೆ ಇಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಸಂಭಾವ್ಯ ಕ್ಷಯ ರೋಗ ಇರಬಹುದಾದ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಅಪಾಯದ ಅಂಚಿನಲ್ಲಿರುವವರನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸಿ ಗುಣಪಡಿಸಲಾಗುವುದು. ಆದ್ದರಿಂದ ಜುಲೈ 15 ರಿಂದ 27 ರವರೆಗೆ ದಾವಣಗೆರೆ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

       ಜಿಲ್ಲೆಯಾದ್ಯಂತ ನಗರದಲ್ಲಿರುವ ಕೊಳಚೆ ಪ್ರದೇಶಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ಉಪಹಾರಗೃಹ, ನಿರಾಶ್ರಿತ ಶಿಬಿರಗಳು, ವಸತಿ ಇಲ್ಲದವರು, ಬೀದಿ ಮಕ್ಕಳು ಮತ್ತು ಅನಾಥಾಶ್ರಮಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ತಲುಪಲಾರದ ಕಷ್ಟಕರ ಪ್ರದೇಶಗಳು, ಗಣಿ ಪ್ರದೇಶಗಳು, ಕಲ್ಲು ಕ್ವಾರಿಗಳು, ಮಿಲ್ ಕೆಲಸಗಾರರು, ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಗುಡ್ಡಗಾಡು ಪ್ರದೇಶದ ಜನರನ್ನು ಕ್ಷಯ ರೋಗ ಪತ್ತೆ ಸಮೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

     ಇದೇ ವೇಳೆ ಐ.ಇ.ಸಿ ಸಾಮಗ್ರಿಗಳ ಬಿಡುಗಡೆ ಮಾಡಲಾಯಿತು. ಹಾಗೂ ಕ್ಷಯ ರೋಗಿಗಳಿಗೆ ಪ್ರೋಟಿನ್ ಪೌಡರ್‍ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎ.ಎಂ ರೇಣುಕಾರಾಧ್ಯ, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಪಿ.ಡಿ ಮುರುಳಿಧರ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ರಾಚಪ್ಪ ಕುಪ್ಪಸ್ತ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ ವೆಂಕಟೇಶ್, ನಗರ ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಕೆ. ವೆಂಕಟೇಶ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಕ್ಷಯ ರೋಗಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link