ದಾವಣಗೆರೆ

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ರಾಮಪ್ಪನವರು ಹಿಂದುಳಿದ ಮತ್ತು ಮುಂದುವರೆದ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿರುವುದು ಸರಿಯಲ್ಲ. ಪೂಜ್ಯರ ಬಳಿ ಕ್ಷಮೆ ಕೇಳಿ, ಜಾತಿ ನಿಂದನೆ ಪ್ರಕರಣ ವಾಪಾಸ್ ಪಡೆದು, ಈ ಪ್ರಕರಣವನ್ನು ಮುಂದುರೆಸದೇ, ಇತಿಶ್ರೀ ಹಾಡಲಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಸಲಹೆ ನೀಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬ್ಬಲ್ ಡಿಗ್ರಿ ಗ್ರ್ಯಾಜ್ಯುವೆಟ್ ಆಗಿರುವ, ಜಿಲ್ಲಾ ಪಂಚಾಯತ್‍ನ ಮಾಜಿ ಅಧ್ಯಕ್ಷರಾಗಿರುವ ವೈ.ರಾಮಪ್ಪನವರಿಗೆ ಯಾವ ರೀತಿಯ ಪದ ಬಳಸಬೇಕೆಂಬುದ್ದರ ಬಗ್ಗೆ ವಿವೇಚನೆ ಇಲ್ಲವಾಗಿದೆ. ಬಿಜೆಪಿಯನ್ನು ನೀವೇ ಹುಟ್ಟಿಸಿದ್ದೀರಾ ಎಂಬ ಅರ್ಥದಲ್ಲಿ ಮೇಲ್ಜಾತಿಯವರನ್ನು ಕುರಿತು ಮಾತನಾಡಿರುವುದು ಅವರಿಗೆ ಶೊಭೆ ತರುವುದಿಲ್ಲ ಎಂದರು.
ಡಬ್ಬಲ್ ಡಿಗ್ರಿ ಗ್ರ್ಯಾಜ್ಯುವೆಟ್ ಆಗಿರುವ ವೈ.ರಾಮಪ್ಪನವರು ಮತ್ತೊಬ್ಬರಿಗೆ ಮಾದರಿಯಾಗಿ ನಡೆದುಕೊಳ್ಳಬೇಕು. ಆದರೆ, ನಾನು ಕ್ಷಮಾಪಣೆ ಕೇಳುವುದಿಲ್ಲ ಎಂಬುದಾಗಿ ಹೇಳುವ ಮೂಲಕ ಉದ್ಧಟತನ ಪ್ರದರ್ಶಿಸುತ್ತಿರುವುದು ಸರಿಯಲ್ಲ. ಮಾಡಿದ ತಪ್ಪು ಒಪ್ಪಿಕೊಳ್ಳುವುದು ದೊಡ್ಡ ಗುಣವಾಗಲಿದೆ. ಆದರೆ, ಮತ್ತೆ, ಮತ್ತೆ ತಪ್ಪು ಮಾಡಲು ಹೊರಟಿರುವ ರಾಮಪ್ಪನವರ ನಡೆ ಸರಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವೀರಶೈವ-ಲಿಂಗಾಯತರ ಬಗ್ಗೆ ಮಾತನಾಡಿಯೇ ಇಲ್ಲ ಎಂಬುದಾಗಿ ವೈ.ರಾಮಪ್ಪ ಹೇಳುತ್ತಿದ್ದಾರೆ. ಹಾಗಾದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಲಿಂಗದ ವಿಚಾರ ಹೇಗೆ ಬಂತು? ಎಂದು ಪ್ರಶ್ನಿಸಿದ ಜಾಧವ್, ಹೀಗೆ ಹಿಂದುಳಿದ ಮತ್ತು ಮುಂದುವರೆದ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿರುವ ರಾಮಪ್ಪನವರ ಕ್ರಮ ಸರಿಯಲ್ಲ ಎಂದರು.
ಇದನ್ನೂ ಹೀಗೆಯೇ ಮುಂದು ವರೆಸುತ್ತಾ ಹೋಗುವ ಮೂಲಕ ಜಾತಿ, ಜಾತಿಗಳ ಮಧ್ಯೆ ಕಲಹ ಶುರು ಮಾಡಲು ಹೋಗಬೇಡಿ, ಬದಲಿಗೆ ಜಿಲ್ಲೆಯ ಯಾವುದಾದರು ಮಠಕ್ಕೆ ತೆರಳಿ, ಪೂಜ್ಯರನ್ನು ಭೇಟಿ ಮಾಡಿ ಕ್ಷಮೆ ಕೇಳಿ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿದವರ ವಿರುದ್ಧ ದಾಖಲಿಸಿರುವ ಜಾತಿ ನಿಂದನೆ ಪ್ರಕರಣವನ್ನು ವಾಪಾಸ್ ಪಡೆಯುವ ಮೂಲಕ ಈ ಪ್ರಕರಣಕ್ಕೆ ಅಂತ್ಯ ಹಾಡಬೇಕೆಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಎನ್.ಶಿವಕುಮಾರ್, ಧನಂಜಯ ಕಡ್ಲೇಬಾಳು, ಎನ್.ರಾಜಶೇಖರ್, ದಕ್ಷಿಣ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಖಜಾಂಚಿ ಕೆ.ಹೇಮಂತಕುಮಾರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್, ಪ್ರವೀಣ್ ಜಾಧವ್, ಕರಿಯಪ್ಪ, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
