ಬೆಂಗಳೂರು
ಈ ಸಂಕಷ್ಟದ ಕಾಲದಲ್ಲಿಯೂ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಬಹುಮಾನ ಘೋಷಣೆ ಮಾಡಿದೆ . ಲಾಕ್ ಡೌನ್ ಬಳಿಕ ಬಸ್‌ಗಳ ಸಂಚಾರ ರದ್ದುಗೊಂಡಿದ್ದು, ನಾಲ್ಕು ಸಾರಿಗೆ ನಿಗಮಗಳಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.ಶುಕ್ರವಾರ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಉಪ ಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ ಸವದಿ ಸಭೆ ನಡೆಸಿದರು. 41 ವಿಭಾಗೀಯ ನಿಯಂತ್ರಾಧಿಕಾರಿಗಳು ಸಹ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
“4 ಸಾರಿಗೆ ನಿಗಮಗಳಲ್ಲಿ ಪ್ರತಿ ತಿಂಗಳು ಅತಿ ಹೆಚ್ಚು ಇಂಧನ ಕ್ಷಮತೆ ತೋರುವ ಒಬ್ಬ ಚಾಲಕನಿಗೆ 10 ಗ್ರಾಂ ಚಿನ್ನದ ಪದಕ ನೀಡುವುದಾಗಿ” ಸಭೆಯಲ್ಲಿ ಸಚಿವರು ಘೋಷಣೆ ಮಾಡಿದರು.
“ಲಾಕ್ ಡೌನ್‌ನಿಂದಾಗಿ ಸಾರಿಗೆ ಸಂಸ್ಥೆಗಳು ಇಂದು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ನಾವೆಲ್ಲರೂ ಒಂದು ತಂಡವಾಗಿ ಮುಂದಿನ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕು” ಎಂದು ಸಚಿವರು ಕರೆ ನೀಡಿದರು.
“ಮೇ 3ರಂದು ಲಾಕ್ ಡೌನ್ ಅಂತ್ಯಗೊಳ್ಳಲಿದೆ. ಮುಂದೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಗಮದ ಬಸ್‌ಗಳನ್ನು ಗುತ್ತಿಗೆ ನೀಡಲು ಇಂದು ನಡೆದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ” ಎಂದು ಲಕ್ಷ್ಮಣ ಸವದಿ ಹೇಳಿದರು.
ಪ್ರತಿಯೊಬ್ಬ ವಿಭಾಗೀಯ ನಿಯಂತ್ರಾಣಾಧಿಕಾರಿಗಳನ್ನು ಸಂಪರ್ಕಿಸಿ ಹಸಿರು, ಕೆಂಪು ವಲಯಗಳಲ್ಲಿ ಯಾವ ರೀತಿ ಬಸ್ ಕಾರ್ಯಾಚರಣೆ ಮಾಡಬೇಕು ಎಂಬುದರ ಬಗ್ಗೆ ಲಕ್ಷ್ಮಣ ಸವದಿ ಚರ್ಚೆ ನಡೆಸಿದರು.ಕಾರ್ಮಿಕರ ಸ್ಥಳಾಂತರದ ವೇಳೆ ಸುರಕ್ಷತೆ ಬಗ್ಗೆ ಗಮನ ಹರಿಸುವುದು. ಬಸ್ ನಿಲ್ದಾಣಗಳನ್ನು ಸ್ವಚ್ಛ ಮಾಡುವುದು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ವಿವಿಧ ಸೂಚನೆಗಳನ್ನು ಸಚಿವರು ನೀಡಿದರು.
ಲಾಕ್ ಡೌನ್ ಘೋಷಣೆ ಬಳಿಕ ಬಸ್‌ಗಳ ಸಂಚಾರ ಸಂಪೂರ್ಣವಾಗಿ ರದ್ದಾಗಿದೆ. ಏಪ್ರಿಲ್ 20ರ ತನಕ ನಾಲ್ಕು ನಿಗಮಗಳಿಗೆ 816.23 ಕೋಟಿ ನಷ್ಟವಾಗಿದೆ. ಲಾಕ್ ಡೌನ್ ಇನ್ನೂ 2 ವಾರಗಳ ಕಾಲ ವಿಸ್ತರಣೆಯಾಗಿದ್ದು, ಇನ್ನಷ್ಟು ನಷ್ಟವಾಗಲಿದೆ.
