ಕೆಎಸ್‍ಆರ್‍ಟಿಸಿ ದಬ್ಬಾಳಿಕೆಗೆ ಕಾರ್ಮಿಕರ ವಿರೋಧ

ದಾವಣಗೆರೆ:

       ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ)ದ ಅಧಿಕಾರಿಗಳು, ಅನಗತ್ಯವಾಗಿ ಕೆಳ ಹಂತದ ಸಿಬ್ಬಂದಿಗಳ ಹಾಗೂ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ, ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‍ನ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

       ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರು ಜಮಾಯಿಸಿದ ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕೆಎಸ್‍ಆರ್‍ಟಿಸಿಯು ಅವೈಜ್ಞಾನಿಕವಾಗಿ ಅನುಷ್ಠಾನ ಗೊಳಿಸಿರುವ ನಮೂನೆ -4ರಿಂದ ಚಾಲಕ ನಿರ್ವಾಹಕರ ಕಾರ್ಯಭಾರ ಹೆಚ್ಚಾಗಿದ್ದು, ನಿಗದಿತ ಅವಧಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದರು ಸಗ ಕಾನೂನು ರೀತಿಯಲ್ಲಿ ಓವರ್ ಟೈಮ್ ಭತ್ಯೆ ಕೊಡುತ್ತಿಲ್ಲ ಎಂದು ಆರೋಪಿಸಿದರು.

       ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸುಮಾರು 1.15 ಲಕ್ಷಕ್ಕೂ ಹೆಚ್ಚು ಕಾರ್ಮಿಕರು, ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಮೇಲಾಧಿಕಾರಿಗಳಿಂದ ಹಿಡುದು ಕೆಳ ಹಂತದ ಅಧಿಕಾರಿ, ಸಿಬ್ಬಂದಿಗಳ ವರೆಗೂ ಒಂದಿಲ್ಲೊಂದು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಸಹಜವಾಗಿಯೇ ಕೆಲವು ವರ್ಷಗಳ ಸೇವೆಯ ನಂತರ ಒಂದಿಲ್ಲೊಂದು ಕಾಯಿಲೆಗೆ ಸಿಬ್ಬಂದಿಗಳು ತುತ್ತಾಗುತ್ತಿದ್ದಾರೆಂದು ಆಪಾದಿಸಿದರು.

       ಕೆಎಸ್‍ಆರ್‍ಟಿಸಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಂಪೂರ್ಣವಾಗಿ ವೈದ್ಯಕೀಯ ವೆಚ್ಚ ಭರಿಸಬೇಕೆಂಬ ನಿಯಮವಿದ್ದರೂ ಸಹ ಪಾಲನೆಯಾಗುತ್ತಿಲ್ಲ. ಪ್ರತಿ ತಿಂಗಳು 200 ರೂ.ಗಳಂತೆ ಮನೆಯಲ್ಲಿಯೇ ತೆಗೆದುಕೊಳ್ಳುವ ಚಿಕಿತ್ಸೆಗೂ ವೈದ್ಯಕೀಯ ನೆರವು ನೀಡದೇ, ಸಿಬ್ಬಂದಿಗಳನ್ನು ಸತಾಯಿಸುತ್ತಿದ್ದಾರೆಂದು ದೂರಿದರು.

      ನಾಲ್ಕೂ ಸಾರಿಗೆ ನಿಗಮಗಳಲ್ಲೂ ಕೈಗಾರಿಕಾ ಬಾಂಧವ್ಯ ಸಂಪೂರ್ಣ ಹದಗೆಟ್ಟಿದೆ. ಕೈಗಾರಿಕಾ ಬಾಂಧವ್ಯವನ್ನು ಸರಿಪಡಿಸುವ ದಿಕ್ಕಿನಲ್ಲಿ ಆಡಳಿತ ವರ್ಗ ಯಾವುದೇ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ ಅವರು, ಎಲ್ಲ ನಿಗಮಗಳಲ್ಲೂ ಕೈಗಾರಿಕಾ ಬಾಂಧವ್ಯ ಬೆಸೆಯಲು ಸೂಕ್ತ ಕ್ರಮ ವಹಿಸಬೇಕು. ಅಧಿಕಾರಿಗಳು ಕಾರ್ಮಿಕರು ಹಾಗೂ ಸಿಬ್ಬಂದಿಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗೆ ತಕ್ಷಣವೇ ಕಡಿವಾಣ ಹಾಕಬೇಕು. ನಿಯಮದಂತೆ ಒವರ್ ಟೈಮ್ ಭತ್ಯೆ ನೀಡಬೇಕು. ಸಂಪೂರ್ಣ ವೈದ್ಯಕೀಯ ವೆಚ್ಚ ಭರಸಿಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

     ಸುಪ್ರೀಂ ಕೋರ್ಟ ತೀರ್ಪಿನಂತೆ ಸ್ಟಾಫ್ ಅಂಡ್ ವರ್ಕರ್ಸ ಫೆಡರೇಷನ್‍ಗೆ ಮಾನ್ಯತೆಯಿಂದ ಬರುವ ಎಲ್ಲ ಸೌಲಭ್ಯ ಕಲ್ಪಿಸಬೇಕು. 1991ರ ನಿಯಮಾವಳಿ ಪ್ರಕಾರ ಕೂಡಲೇ ಮಾನ್ಯತೆಗಾಗಿ ಚುನಾವಣೆ ನಡೆಸಬೇಕು ಆತ್ಮಹತ್ಯೆಗೆ ಬಲಿಯಾದ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಬದುಕುಳಿದ ನೌಕರನ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳಬಾರದು. ಮೋಟಾರ್ ವೆಹಿಕಲ್ ತೆರಿಗೆ ರಿಯಾಯಿತಿ ನೀಡಬೇಕು. ಡಿಸೇಲ್ ಸುಂಕ ಕಡಿಮೆ ಮಾಡಬೇಕು. ಹೆದ್ದಾರಿಯ ಟೋಲ್ ಶುಲ್ಕ ರದ್ದು ಮಾಡಬೇಕು. ಕೆಎಸ್‍ಆರ್‍ಟಿಯನ್ನು ಸಶಕ್ತಗೊಳಿಸಲು ಪ್ರತಿ ವರ್ಷ ಒಂದು ಸಾವಿರ ಕೋಟಿ ರೂ ಅನುದಾನ ನೀಡಬೇಕು. ಖಾಸಗಿ ಬಸ್ ಮಾಲೀಕರ ಕಾನೂನು ಬಹಿರ ಚಟುವಟಿಕೆಗೆ ತಕ್ಷಣವೇ ಕಡಿವಾಣ ಹಾಕಬೇಂದು ಪ್ರತಿಭಟನಾನಿರತರು ಆಗ್ರಹಿಸಿದರು.

     ಪ್ರತಿಭಟನೆಯಲ್ಲಿ ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‍ನ ಹನುಮಂತಪ್ಪ, ರಾಮಪ್ಪ, ಪ್ರಕಾಶ್, ಕರಿಗೌಡ, ಮಿರ್ಜಾ ರಹಮತ್‍ವುಲ್ಲಾ, ಕೋಟ್ರೇಶ್, ಉಬೇದುಲ್ಲಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap