ಶಿವಮೊಗ್ಗ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ , ಬಿಜೆಪಿ ಸಿಂಗಲ್ ಡಿಜಿಟ್ ಗೆ ತೃಪ್ತಿ ಪಟ್ಟುಕೊಳ್ಳಲಿದೆ ಎಂಬ ಸಚಿವ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ ದೇಶದಲ್ಲಿ ಡಬ್ಬಲ್ ಡಿಜಿಟ್ ಆಗಿಯೇ ಇರುತ್ತೆ. ಬಿಜೆಪಿ ದೇಶದಲ್ಲಿ ಸಿಂಗಲ್ ಪಾರ್ಟಿಯಾಗಿಯೇ ಆಗಿ ಗೆದ್ದುಬರುತ್ತೆ ಎಂದರು
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮೈತ್ರಿ ಪಕ್ಷ ಎಲ್ಲಿ ಕೆಲಸವಾಗಬೇಕೋ ಅಲ್ಲಿ ಕೆಲಸ ಮಾಡಿಲ್ಲ. ಅತಿವೃಷ್ಠಿ, ಅನಾವೃಷ್ಠಿಯಾದಾಗ ಸೊರಬಕ್ಕೆ ಬನ್ನಿ ಎಂದರು ಮುಖ್ಯಮಂತ್ರಿ ಬರಲಿಲ್ಲ. ಆದರೆ ಇದೀಗ ಚುನಾವಣೆ ಸಂದರ್ಭದಲ್ಲಿ ಫಾರಿನ್ ಅಭ್ಯರ್ಥಿ ಪರ ಪ್ರಚಾರಕ್ಕೆ ವಾರಾನುಗಟ್ಟಲೆ ಕ್ಷೇತ್ರದಲ್ಲಿ ಟಿಕಾಣಿ ಹೂಡುತ್ತಾರೆ. ಇವರಿಗೆ ಅಧಿಕಾರ ಮುಖ್ಯ. ಜನರ ಸಂಕಷ್ಟ ಪರಿಹರಿಸುವುದು ಮುಖ್ಯವಲ್ಲ ಎಂದು ದೂರಿದರು.
ಇಂದು ಮೈತ್ರಿ ಪಕ್ಷದ ಅಭ್ಯರ್ಥಿ ಕರಪತ್ರ ಸಿದ್ದಪಡಿಸಿಕೊಂಡಿದ್ದಾರೆ. ಅದರಲ್ಲಿ ರಸ್ತೆ, ನೀರಾವರಿ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ, ಬಗುರ್ ಹುಕುಂ ನಲ್ಲಿ ಏಳುಸಾವಿರ ಹಕ್ಕು ಪತ್ರ ನೀಡಲಾಗಿದೆ ಎಂದು ಕರಪತ್ರ ಹಂಚಿದ್ದಾರೆ. ಆದರೆ ತಹಶೀಲ್ದಾರ್ ಮೂರುವರೆ ಸಾವಿರ ಹಕ್ಕು ಪತ್ರ ಹಂಚಲಾಗಿದೆ ಎಂದಿದ್ದಾರೆ. ಏಳು ಸಾವಿರ ಹೇಗೆ ಸಿಕ್ಕಿತು. ಇದರಲ್ಲಿ ಶೇ.90 ರಷ್ಟು ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದರು.
ಜಿಲ್ಲೆಯಲ್ಲಿ ನೀರಾವರಿ ಯೋಜನೆ ತರಲು ಕಳೆದ 7 ತಿಂಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಡಿಕೊಂಡು ಬಂದಿರುವುದಕ್ಕೆ ನಮ್ಮ ಬಳಿ ದಾಖಲಾತಿ ಇದೆ.ಆದರೆ ಮುಖ್ಯಮಂತ್ರಿಗಳು ಪುಂಖಾನುಪುಂಕವಾಗಿ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಇದಕ್ಕೆ ಮೈತ್ರಿ ಪಕ್ಷದ ಅಭ್ಯರ್ಥಿಯೂ ಸಹ ಧ್ವನಿ ಗೂಡಿಸಿರುವುದು ಖಂಡನೀಯವೆಂದರು.
“ಭೇಟೆಯಾಡಲು ಎಲ್ಲಾ ಪ್ರಾಣಿಗಳು ಒಟ್ಟೊಟ್ಟಿಗೆ ಬರುತ್ತವೆ. ಆದರೆ ಸಿಂಹ ಮಾತ್ರ ಒಂದೇ ಬರುತ್ತೆ” ಇಲ್ಲಿ ಎಲ್ಲಾ ಪ್ರಾಣಿ ಎಂದರೆ ಮೈತ್ರಿ ಪಕ್ಷ. ಸಿಂಹ ಎಂದರೆ ಬಿಜೆಪಿ ಅದು ಮೋದಿ ಎಂದರು.ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಪರ ಮತದಾರರಿಂದ ಒಲವು ವ್ಯಕ್ತವಾಗಿದೆ. ಸಂಸದರಾಗಿ ಬಿ ವೈ ರಾಘವೇಂದ್ರ ಜನಪರ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳು ಜನತೆಗೆ ತಿಳಿದಿದೆ. ಈ ಬಾರಿ ಅಧಿಕ ಮತಗಳ ಅಂತರದಿಂದ ಗೆದ್ದು ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
