ಬೆಂಗಳೂರು:
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದ್ದಾರೆ.
ರೈತ ಮಹಿಳೆ ವಿಚಾರವಾಗಿ ಸಿಎಂ ನೀಡಿರುವ ಪ್ರತಿಕ್ರಿಯೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆಯ ತೀವ್ರತೆಯ ಹಿನ್ನೆಲೆಯಲ್ಲಿ ಸಿಎಂ ಮಹಿಳೆಯ ಬಗ್ಗೆ ಈ ರೀತಿ ಮಾತನಾಡಿರಬಹುದು. ನಿಜವಾಗಿಯೂ ಅವರಿಗೆ ಮಹಿಳೆಯರ ಮೇಲೆ ಅಪಾರ ಗೌರವವಿದೆ. ನಮ್ಮನ್ನು ಕೂಡ ಅಕ್ಕ ಹೋಗಿ ಬನ್ನಿ ಅಂತಲೇ ಮಾತನಾಡಿಸುತ್ತಾರೆ. ಮಹಿಳೆಯರಿಗೆ ಅಗೌರವ ತೋರಿಸಬೇಕು, ಆ ಗೌರವದಿಂದ ಕಾಣಬೇಕು ಎಂಬ ಭಾವನೆ ಸಿಎಂಗೆ ಇಲ್ಲ. ಮಹಿಳೆಗೆ ಆ ಗೌರವ ತೋರಿಸುವ ಯಾವ ಕಾರ್ಯವನ್ನು ಸಿಎಂ ಇದುವರೆಗೂ ಮಾಡಿಲ್ಲ. ಇದು ಕೂಡ ಬಾಯಿ ತಪ್ಪಿ ಆಡಿರುವ ಮಾತು ಇರಬಹುದು ಎಂದು ಸಮಜಾಯಿಷಿ ನೀಡಿದರು.
ನಾನು ಸಿಎಂ ಕುಮಾರಸ್ವಾಮಿ ಅವರ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ಕೆಲಬಾರಿ ಪ್ರತಿಕ್ರಿಯೆಗಳು ಬರುತ್ತವೆಯೇ ವಿನಃ ಅದನ್ನು ವೈಯಕ್ತಿಕ ಅಭಿಪ್ರಾಯ, ಅಥವಾ ಉದ್ದೇಶಪೂರ್ವಕವಾಗಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳುವುದು ಸಮಂಜಸವಲ್ಲ. ನನ್ನ ಅನಿಸಿಕೆಯನ್ನು ನಾನು ಹೇಳಿದ್ದೇನೆ ಅಷ್ಟೇ. ಯಾರದ್ದೋ ಪ್ರಚೋದನೆಯ ಮೇಲೆ ಮಹಿಳೆ ಆ ರೀತಿ ಮಾತನಾಡಿರಬಹುದು ಎಂಬ ಉದ್ದೇಶಕ್ಕೆ ಕುಮಾರಸ್ವಾಮಿ ಈ ರೀತಿ ಹೇಳಿರಬಹುದು. ಅವರ ಪತ್ನಿಯೇ ಇಂದ್ರ ಶಾಸಕರಾಗಿದ್ದಾರೆ, ಮಹಿಳೆಯರ ಬಗ್ಗೆ ಅಂತಹ ಭಾವನೆ ಇದ್ದರೆ ಇದು ಹೇಗೆ ಸಾಧ್ಯವಾಗುತ್ತಿತ್ತು. ಎದುರಾಗುವ ಸನ್ನಿವೇಶದ ಮೇಲೆ ಆ ರೀತಿಯ ಮಾತುಗಳು ಬರುತ್ತವೆಯೇ ವಿನಃ ಸಿಎಂ ಉದ್ದೇಶಪೂರ್ವಕವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








