ಬೆಂಗಳೂರು
ಮಧ್ಯ ಪ್ರದೇಶದ ಭೂಪಾಲ್‍ನಲ್ಲಿ ಕಾಂಗ್ರೆಸ್‍ನ ಕಮಲ್ ನಾಥ್ ಮುಖ್ಯಮಂತ್ರಿಯಾಗಿ ಪ್ರದಗ್ರಹಣ ಮಾಡುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಪಾಲ್ಗೊಳ್ಳುತ್ತಿದ್ದು, ಈ ಮೂಲಕ ದೇಶದಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಸಾಲಿನಲ್ಲಿ ತಮ್ಮ ಅಸ್ಥಿತ್ವ ಸಾಬೀತುಪಡಿಸಲಿದ್ದಾರೆ.
ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೂ ರಾಜಸ್ಥಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಮುಂಬರುವ 2019ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸುತ್ತಿದ್ದು, ರಾಷ್ಟ್ರಮಟ್ಟದಲ್ಲಿ ರಾಜಕೀಯ ಧ್ರುವೀಕರಣಕ್ಕೆ ಚಾಲನೆ ದೊರೆತಿದೆ. ಇದರಲ್ಲಿ ಕರ್ನಾಟಕ ಕೂಡ ಮಹತ್ವದ ಪಾತ್ರ ವಹಿಸುವ ಸುಳಿವು ದೊರೆತಿದೆ.
ಕಾಂಗ್ರೆಸ್ ತನ್ನ ಮಿತ್ರ ಪಕ್ಷಗಳನ್ನು ಒಗ್ಗೂಡಿಸಿ ಶಕ್ತಿ ಪ್ರದರ್ಶಿಸಲು ಮುಂದಾಗಿದೆ. ಇದೇ ಕಾಲಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್‍ಗೆ ತಿರುಗೇಟು ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಎನ್‍ಡಿಎ ವಿರುದ್ಧ ಮಹಾಘಟ ಬಂಧನ್ ಬಲಗೊಳ್ಳುತ್ತಿದ್ದು, ಇದಕ್ಕೆ ಬಿಜೆಪಿ ಸಹ ಪ್ರತಿತಂತ್ರ ರೂಪಿಸುತ್ತಿದೆ.
ಈ ಮಧ್ಯೆ ಭೂಪಾಲ್‍ನ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಮಾರ ಸ್ವಾಮಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದ್ದು, ಕುಮಾರ ಸ್ವಾಮಿ ಪಾಲ್ಗೊಳ್ಳುವ ಮೂಲಕ ಬಿಜೆಪಿಯ ವಿರುದ್ಧ ಸಂದೇಶ ರವಾನಿಸಲಿದ್ದಾರೆ.
ದೇಶದಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಎಲ್ಲಾ ಹಂತದಲ್ಲೂ ಪ್ರಯತ್ನಗಳು ನಡೆಯುತ್ತಿವೆÉ. ಚತ್ತೀಸ್‍ಗಢ, ರಾಜಸ್ಥಾನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕುಮಾರ ಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದೆ. ಈ ರಾಜ್ಯಗಳಲ್ಲೂ ಶಕ್ತಿ ಪ್ರದರ್ಶನ ನಡೆಯುವುದು ಖಚಿತಪಟ್ಟಿದೆ.
ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಹಿಂದುಳಿದ ವರ್ಗಗಳ ನಾಯಕ ಭೂಪೇಶ್ ಬಘೇಲ್ ಚತ್ತೀಸ್‍ಘಡ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 15 ವರ್ಷಗಳ ಬಳಿಕ ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದ್ದು, ಭಾನುವಾರ ಮುಖ್ಯಮಂತ್ರಿ ಆಯ್ಕೆ ಸಂಬಂಧ ಕಾಂಗ್ರೆಸ್ ವೀಕ್ಷಕ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಉಸ್ತುವಾರಿ ಪಿ.ಎಲ್.ಪುನಿಯಾ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ಜರುಗಿತು. ಬಘೇಲ್ ಅವರ ಹೆಸರನ್ನು ಸಭೆಯಲ್ಲಿ ಅಂತಿಮಗೊಳಿಸಲಾಯಿತು. ಸೋಮವಾರ ಸಂಜೆ ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಸಮಾರಂಭ ನಡೆದರೂ ಸಹ ಅಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡುತ್ತಿದ್ದು, ಅದಕ್ಕೆ ಭಾನುವಾರದ ಚೆನ್ನೈನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಕರುಣಾನಿಧಿ ಅವರ ಪ್ರತಿಮೆ ಅನಾವರಣ ಸಮಾರಂಭ ಸಾಕ್ಷಿಯಾಗಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಮೆ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪುದುಚೆರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಹಾಗೂ ಟಿಎಂಸಿ, ಸಿಪಿಐ, ಸಿಪಿಎಂ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಜತೆಗೆ ತಮಿಳುಚಿತ್ರರಂಗದ ಸೂಪರ್‍ಸ್ಟಾರ್ ರಜನಿಕಾಂತ್, ಶತ್ರುಘ್ನ ಸಿನ್ಹಾ ಮತ್ತಿತರ ನಾಯಕರ ಉಪಸ್ಥಿತಿ ತಮಿಳುನಾಡು ಅಷ್ಟೆ ಅಲ್ಲದೆ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದಂತಾಯಿತು.
ಇದೇ ಸಂದರ್ಭಕ್ಕಾಗಿ ಕಾದು ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯಬರೇಲಿಯಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮೇಲೆ ವಾಗ್ದಾಳಿ ನಡೆಸಿದರು. ರಾಜ್ಯದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರ್ಣಗೊಂಡಿದ್ದು, ರೈತರ ಸಾಲ ಮನ್ನಾ ಮಾಡದೆ ರೈತರನ್ನು ವಂಚಿಸಿದೆ. ಒಂದು ಸಾವಿರ ರೈತರ ಸಾಲ ಕೂಡ ಮನ್ನಾ ಮಾಡಿಲ್ಲ ಎಂದು ಆಪಾದಿಸಿದರು.
ಹೀಗೆ ಪ್ರತಿಯೊಂದು ರಾಜ್ಯವೂ ಸಹ ಕಾಂಗ್ರೆಸ್ ಮತ್ತು ಬಿಜೆಪಿಗೆ ಮಹತ್ವದ್ದಾಗಿದೆ. ಎಲ್ಲಾ ಮುಖ್ಯಮಂತ್ರಿಗಳು, ನಾಯಕರು, ಪ್ರಮುಖರಿಗೆ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ರಾಜಮರ್ಯಾದೆ ದೊರೆಯುತ್ತಿದೆ. ಬಿಜೆಪಿಯಲ್ಲೂ ಪರಸ್ಪರ ಮರ್ಯಾದೆ, ರಾಜಮರ್ಯಾದೆ ನೀಡುವ ಪರಿಪಾಠ ಬೆಳೆಯುತ್ತಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಮತ್ತು ಪ್ರಾದೇಶಿಕ ನಾಯಕರ ಮಹತ್ವ ಅರಿತಿರುವುದು ಈ ಬೆಳವಣಿಗೆಯಮ್ಮು ಪುಷ್ಟೀಕರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ