ಸರ್ಕಾರ ಪತನಗೊಂಡರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅತೀವ ಸಂತಸ: ಬಿ.ಜೆ. ಪುಟ್ಟಸ್ವಾಮಿ

ಬೆಂಗಳೂರು

         ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪತನಗೊಂಡರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅತೀವ ಸಂತಸಗೊಳ್ಳುತ್ತಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ವ್ಯಂಗ್ಯವಾಡಿದ್ದಾರೆ.

         ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಮುಖ್ಯಮಂತ್ರಿಯವರಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಒಂದು ವೇಳೆ ಸರ್ಕಾರ ಪತನಗೊಂಡದೆ ಅವರು “ಮೋಸ್ಟ್ ಹ್ಯಾಪಿಯಸ್ಟ್ ಪರ್ಸನ್” ಆಗಿರುತ್ತಾರೆ ಎಂದರು.

       ಹಿಂದುಳಿದ ವರ್ಗಗಳಿಗೆ ಬಜೆಟ್‍ನಲ್ಲಿ ನೀಡಲಾಗುತ್ತಿದ್ದ ಅನುದಾನದಲ್ಲಿ ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದೆ ಎಂದು ಅವರು ಇದೇ ವೇಳೆ ಆರೋಪಿಸಿದರು.

       ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಸಮುದಾಯಗಳಿಗೆ, ಮಠಗಳಿಗೆ 200 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಆದರೆ, ಈ ಸಮ್ಮಿಶ್ರ ಸರ್ಕಾರ ಹತ್ತು ಕೋಟಿ ರೂ. ಕೂಡ ನೀಡಿಲ್ಲ ಎಂದು ಆರೋಪಿಸಿದ ಅವರು, ರೈತರ ಸಾಲ ಮನ್ನಾ ಎಂಬುದು ಒಂದು ಗಿಮಿಕ್. ಸಾಲ ಮನ್ನಾ ಯೋಜನೆಯಡಿ ಒಟ್ಟು 44 ಲಕ್ಷ ಫಲಾನುಭವಿ ರೈತರು ಇದ್ದಾರೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ.

           ಆದರೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ 50 ಸಾವಿರ ರೈತರ ಸಾಲ ಮನ್ನಾ ಆಗಿದೆ ಎಂದು ಹೇಳುತ್ತಾರೆ. 2.18 ಲಕ್ಷ ಕೋಟಿ ರೂ. ಬಜೆಟ್‍ನಲ್ಲಿ 2.92 ಲಕ್ಷ ಕೋಟಿ ಸಾಲ ಇದೆ ಎಂದು ಹೇಳಿದ್ದಾರೆ. ಇವೆಲ್ಲವೂ ದ್ವಂದ್ವ ವಿಷಯಗಳಾಗಿವೆ ಎಂದು ಹೇಳಿದರು.

         ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದುವರೆಗೆ ಐದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಲ್ಲ. ಕುಮಾರಸ್ವಾಮಿ “ಆಯಕ್ಸಿಡೆಂಟಲ್ ಸಿಎಂ” ಆಗಿದ್ದಾರೆ ಎಂದು ಪುಟ್ಟಸ್ವಾಮಿ ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ