ಬೆಂಗಳೂರು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,ಹಿಂದೆ ಒಕ್ಕಲಿಗರನ್ನು ತೆಗೆಳಿದವರೀಗ ಒಕ್ಕಲಿಗರನ್ನು ಗೆಲ್ಲಿಸಲು ಹೊರಟಿದ್ದಾರೆ. ಯಾರಿಗೆ ಬೇಕಾದರೂ ಟೋಪಿ ಹಾಕುವ ಇವರು ತಮ್ಮ ಅನುಕೂಲಕ್ಕೆ ಜಾತಿ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹಿಂದಿನ ಮೈತ್ರಿ ಸರ್ಕಾರ ಉಳಿಸಲು ಯಾರು ‘ಬಂಡೆ’ಯಂತೆ ನಿಂತಿದ್ದರೋ ಅವರೀಗ ಜಾತಿರಾಜಕಾರಣ ಆರಂಭಿಸಿದ್ದಾರೆ. ರಾಜಕಾರಣ ಮಾಡಲು ಇನ್ನೂ ಸಮಯವಿದೆ ಎಂದು ಮಹಾಭಾರತದ ಕರ್ಣನ ಕಥಾ ಪ್ರಸಂಗ ಪ್ರಸ್ತಾಪಿಸಿದರು.
ಉಪ ಚುನಾವಣೆ ನಡೆಯುತ್ತಿರುವ ಶಿರಾ, ರಾಜರಾಜೇಶ್ವರಿ ನಗರ ಎರಡನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ. ಆರ್ ಆರ್ ನಗರದಲ್ಲಿ ಜೆಡಿಎಸ್ ಪಕ್ಷದ ನೆಲೆ ಇದ್ದು, ಪಕ್ಷದ ಗೌರವ ಉಳಿಸುವ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದಂತೆ 50-60ಜನ ಉಸ್ತುವಾರಿ ನೇಮಕ ಮಾಡುವುದಿಲ್ಲ. ಮುನಿರತ್ನ ಜೆಡಿಎಸ್ ಸೇರ್ಪಡೆಯಾಗುವ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದರು.
ಮಂಡ್ಯದ ಕಾಂಗ್ರೆಸ್ ರೈತ ಧ್ವನಿ ಸಮಾವೇಶವನ್ನು ಟೀಕಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಹಸಿರು ಹಾಲು ಹಾಕಿಸಿ ಮಂಡ್ಯ ದಲ್ಲಿ ರೈತ ಸಮಾವೇಶ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ದಾಗ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯಾವ ಕಾಂಗ್ರೆಸ್ ನಾಯಕರೂ ರೈತರ ಕುಟುಂಬಗಳ ಬಳಿ ಹೋಗಲಿಲ್ಲ. ಜೆಡಿಎಸ್ ಪಕ್ಷ ಪರಿಹಾರ ನೀಡಿತ್ತು. ನಮ್ಮದು ರೈತರ ಪರ ಕಾಳಜಿ ಇರುವ ಪಕ್ಷ. ಕಾಂಗ್ರೆಸಿಗರು ಮಂಡ್ಯದಿಂದ ಇಂಡಿಯಾ ಹಿಡಿಯಲು ಹೊರಟಿದ್ದಾರೆ. ಆದರೆ ರೈತರು ದಡ್ಡರಲ್ಲ ಎಂದರು.
ರೈತರ ಪರವಾಗಿ ಸಿದ್ದರಾಮಯ್ಯ ಹಲವು ಘೋಷಣೆ ಮಾಡಿದ್ದರಾದರೂ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಲಿಲ್ಲ. ತಮ್ಮ ಕಾಲದಲ್ಲಿ ರೈತರ ಸಾಲ ಮನ್ನಾ ಕಾರ್ಯಕ್ರಮ ದುರುಪಯೋಗವಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಕುಮಾರಸ್ವಾಮಿ ಸವಾಲು ಹಾಕಿದರು.
ಕಾಂಗ್ರೆಸ್ ನಾಯಕರು ಈಗ ರೈತರನ್ನು ಹುಡಿಕೊಂಡು ಹೊರಟಿದ್ದಾರೆ.ಏನು ಮಾಡುತ್ತಾರೋ ನೋಡೋಣ. ಕೋರೋನ ಮುಗಿದ ಬಳಿಕ ಜೆಡಿಎಸ್ ವತಿಯಿಂದಲೂ ಹೋರಾಟ ಮಾಡಲಾಗುವುದು.ನಮ್ಮ ಜವಾಬ್ದಾರಿ ನಿರ್ವಹಣೆ ಮಾಡûಬೇಕು. ಕಾಂಗ್ರೆಸ್‍ನಂತೆ ಕೇವಲ ಪ್ರಚಾರಕ್ಕೆ ಮಾಡುವುದಿಲ್ಲ. ಸಂತೆಯಲ್ಲಿ ನಿಂತು ಮಾತಾಡುವುದಲ್ಲ. ವಿರೋಧ ಪಕ್ಷ ಜವಾಬ್ದಾರಿಯಿಂದ ವರ್ತಿಸಬೇಕು ಪ್ರತಿ ದಿನ ರಾಜಕೀಯ ಬೇಡ. ರಾಜಕೀಯ ಮಾಡುವಾಗ ಮಾಡೋಣ ಎಂದು ಮಾರ್ಮಿಕವಾಗಿ ಹೇಳಿದರು.
ಎರಡು ಮೂರು ಬಾರಿ ಶಾಸಕರಾದವರಿಗೆ ಕಾಂಗ್ರೆಸ್ ನವರು ಬಲೆ ಬೀಸಿದ್ದಾರೆ ಎಂಬುದು ಗೊತ್ತಿದೆ. ಮೂರು ಜನ ಪಕ್ಷ ಬಿಟ್ಟು ಹೋಗಿದ್ದಾರೆ, ಪಕ್ಷ ತೊರೆಯುವವರು ಈಗಲೇ ಬಿಟ್ಟು ಹೋಗಲಿ.
ನಾನೇ ಸನ್ಮಾನ ಮಾಡಿ, ಮೈಸೂರು ಪೇಟ ತೊಡಿಸಿ ಕಳಿಸಿ ಕೊಡುವೆ ಎಂದರು.
ರಾಜಕೀಯ ದಲ್ಲಿ ಗೂಟ ಹೊಡೆದು ಕೊಂಡು ಇರಲು ಸಾಧ್ಯವಿಲ್ಲ.ಪ್ರತಿದಿನ ಮಹಾಭಾರತ ನೋಡುತ್ತಿದ್ದೇನೆ. ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾರೆ.ಪಕ್ಷ ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಶಾಸಕ ಜಿ.ಟಿ.ದೇವೇಗೌಡರನ್ನು ಕುಟುಕಿದರು.
ಶಿಕ್ಷಣ ಸಚಿವರು ಮಾಧ್ಯಮ ಗಳಿಗೆ ಮನವಿ ಮಾಡಿ, ವಿದ್ಯಾ ವಿಚಾರದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಹೇಳಿದ್ದರು. ಅನಾಹುತಗಳ ಮೇಲೆ ಅನಾಹುತ ನಡೆದರೂ ಶಾಲೆ ಆರಂಭಿಸಲು ಸರ್ಕಾರ ಬಿಗಿ ನಿಲುವು ತಳೆದಿತ್ತು .ಶಾಲೆಗಳ ಆರಂಭದಿಂದಾಗುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ. ಮಾಧ್ಯಮಗಳು ಸಹ ವಿದ್ಯಾಗಮನ ವಿರೋಧಿಸಿ ಅಭಿಯಾನ ನಡೆಸಿದವು. ಸರ್ಕಾರ ವಿದ್ಯಾಗಮನ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಿರುವುದಾಗಿ ಘೋಷಣೆ ಮಾಡಿದೆ.ಇದಕ್ಕಾಗಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಕುಮಾರ ಸ್ವಾಮಿ, ಶಿಕ್ಷಕರು, ಪೋಷಕರ ಬಗ್ಗೆ ಸಿಎಂ ಬದ್ದತೆ ತೋರಿದ್ದಕ್ಕೆ ಕುಮಾರಸ್ವಾಮಿ ಧನ್ಯವಾದಗಳನ್ನು ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ