ಮೈತ್ರಿ ಸರ್ಕಾರದಲ್ಲಿ ಗುಮಾಸ್ತನಂತೆ ಇದ್ದರೂ ರೈತರ ಸಾಲ ಮನ್ನಾ ಮಾಡಿದ್ದೇನೆ

ಶಿರಾ:

      ಈ ಹಿಂದೆ ಅನಿವಾರ್ಯವಾದಂತಹ ಸಂದರ್ಬದಲ್ಲಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದರೂ ಒಬ್ಬ ಗುಮಾಸ್ತನಂತೆ ಕೆಲಸ ಮಾಡಿ ಕಠಿಣ ಸಂದರ್ಬದಲ್ಲೂ ರೈತರ ಸಾಲ ಮನ್ನಾ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆ.ಡಿ.ಎಸ್. ಪಕ್ಷದ ಕಾರ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

      ಶಿರಾ ನಗರದ ಜೆ.ಡಿ.ಎಸ್. ಕಛೇರಿಯಲ್ಲಿ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇವೇಗೌಡರ ಕುಟುಂಬ ಈ ರಾಜ್ಯದ ರೈತರನ್ನು ಎಂದೂ ಕೂಡಾ ಕೈಬಿಟ್ಟಿಲ್ಲ. ರೈತರ ಋಣ ತೀರಿಸುವುದು ನಮ್ಮ ಮೂಲ ಧ್ಯೇಯೋದ್ದೇಶ ಎಂಬುದನ್ನು ಯಾರೂ ಮರೆಯಬಾರದು. 2006ರಲ್ಲಿ ರಾಜ್ಯದಲ್ಲಿ ನಡೆದ ಅಧಿಕಾರದ ದ್ರುವೀಕರಣದಲ್ಲಿ ನಾನು ಅನಿವಾರ್ಯ ಪರಿಸ್ಥಿತಿಯಲ್ಲಿ ಸಿ.ಎಂ. ಆಗಿದ್ದು ನಿಜ. ಈ 20 ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಬೇಕೆಂಬ ಕನಸು ನನ್ನದಾಗಿರಲಿಲ್ಲ. ಆಗ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಲು ನಾನು ಸಿದ್ಧನಿದ್ದೆ.ಕೇಂದ್ರ ಬಿ.ಜೆ.ಪಿ. ನಾಯಕರ ಸೂಚನೆಯಂತೆ ಮೌನಗೊಳ್ಳು ಅನಿವಾರ್ಯತೆಯೂ ಇತ್ತು. ಈ ನಡುವೆ ಯಡಿಯೂರಪ್ಪ 9 ದಿನ ಮಾತ್ರಾ ಮುಖ್ಯಮಂತ್ರಿಯಾಗಲು ಸಾದ್ಯವಾಯ್ತು. ಆಗ ನಮ್ಮ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಚು ಕೂಡಾ ನಡೆಯಿತು ಎಂದರು.

        ಕಳೆದ ಚುನಾವಣೆಯಲ್ಲಿ ರಾಜ್ಯದ ಜನ ನಮ್ಮ ಪಕ್ಷಕ್ಕೆ ಬಹುಮತ ನೀಡದ ಪರಿಣಾಮ ಕೇವಲ 38 ಸ್ಥಾನ ಲಭಿಸಲು ಸಾದ್ಯವಾದಾಗ ನಾನು ಆಗಲೇ ರಾಜಕಾರಣದಿಂದ ಹಿಂದೆ ಸರಿಯಲು ಸಿದ್ಧನಿದ್ದೆ. ರಾಷ್ಟ್ರೀಯ ಪಕ್ಷಗಳ ಅಬ್ಬರದಲ್ಲಿ ಜೆ.ಡಿ.ಎಸ್. ಹಿನ್ನಡೆಯಾಗಲು ಬಿ.ಜೆ.ಪಿ. ಪಕ್ಷದ ಅಪಪ್ರಚಾರವೂ ಕಾರಣವಾಗಿತ್ತು. ರಾಜ್ಯದ ಅಲ್ಪಸಂಖ್ಯಾತ ಬಂಧುಗಳಿಗೆ ಜೆ.ಡಿ.ಎಸ್. ಪಕ್ಷ ಬಿ.ಜೆ.ಪಿ. ಪಕ್ಷದ ಬಿ ಟೀಂ ಎಂದು ಕಾಂಗ್ರೆಸ್ ದುರೀಣರು ತಪ್ಪು ಸಂದೇಶ ರಾವಾನಿಸಿದರು. ಎಂದೂ ಕೂಡಾ ಜೆ.ಡಿ.ಎಸ್. ಪಕ್ಷ ಬಿ.ಜೆ.ಪಿ.ಯ ಬಿ ಟೀಂ ಆಗಲಾರದು ಎಂದರು.
ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರವಿದ್ದಾಗ ಕಾಂಗ್ರೆಸ್ ಜನತೆಗೆ ನೀಡಿದ ಭರವಸೆಯಂತೆ 7 ಕೆ.ಜಿ. ಪರಿತರ ಧಾನ್ಯ ನೀಡಬಕಿತ್ತು ಆದರೆ ಬಜೆಟ್‍ನಲ್ಲಿ ಮೀಸಲಿರಿದ್ದು 5 ಕೆ.ಜಿ.ಗೆ ಮಾತ್ರಾ. ಒಂದು ಕೆ.ಜಿ. ಅಕ್ಕಿಯನ್ನೂ ಕಡಿಮೆ ಮಾಡದಂತೆ ವಿತರಣೆ ಮಾಡಿಸಲು ಕಾಂಗ್ರೆಸ್ ವರಿಷ್ಠರು ಆಗ ಒತ್ತಡವಿಟ್ಟಾಗ ನಾನು ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ.

       ಕಳೆದ ಚುನಾವಣೆಯಲ್ಲಿ ನಾನು ಮೂಕ್ಯಮಂತ್ರಿಯಾದ 24 ಗಂಟೆಯೊಳಗೆ ರೈತರ ಎಲ್ಲಾ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಎಲ್ಲಿ ಮಾಡಿದ್ದಾರೆಂಬುದನ್ನು ಈಗಲೂ ಹುಡುಕುವಂತಾಗಿದೆ. ಈ ಹಿಂದೆ ನಾನು ಸಿ.ಎಂ.ಆದ 14 ತಿಂಗಳ ಅವಧಿಯಲ್ಲಿಯೇ ರೈತರ ಸಾಲ ಮನ್ನಾ ಮಾಡಿದ್ದನ್ನು ರಾಜ್ಯದ ರೈತರು ಮರೆಯಬಾರದು ಎಂದರು.

     ಮಳೆ ಹಾನಿಯಿಂದ ಬಿದ್ದು ಹೋದ ರೈತನ ಮನೆಗಳಿಗೆ ನಾನು ಮೀಸಲಿಟ್ಟಿದ್ದ ಅನುಧಾನವನ್ನು ಈವರೆಗೂ ಸಮರ್ಪಕವಾಗಿ ಬಿಡುಗಡೆ ಮಡಲು ಬಿ.ಜೆ.ಪಿ. ಸರ್ಕಾರಕ್ಕೆ ಸಾದ್ಯವೇ ಆಗಿಲ್ಲ. 2018-19 ಹಾಗೂ 2019-20ನೇ ಸಾಲಿನಲ್ಲಿ ಸರ್ಕಾರಕ್ಕೆ ಹಣದ ಕೊರತೆಯೇನೂ ಇರಲಿಲ್ಲ ಆದರೆ ಬಿದ್ದು ಹೋದ ಮನೆಗಳಿಗೂ ತಲುಪಬೇಕಾದ ಅನುದಾನ ಈವರೆಗೂ ತಲುಪಿಸಿಲ್ಲ. ನಾನು 25 ಕೋಟಿ ರೂ ರೈತರ ಸಾಲ ಮನ್ನಾ ಮಾಡಿದ್ದನ್ನು ಮಾಧ್ಯಮಗಳು ಬರೆಯಲೇ ಇಲ್ಲ. ಆದರೆ ಮೋದಿ ಕೆಲವರ ಬ್ಯಾಂಕಿನ ಖಾತೆಗಳಿಗೆ ಹಾಕಿದ 2,000 ರೂಪಾಯಿಯ ಬಗ್ಗೆ ಮಾಧ್ಯಮಗಳು ಬಿಂಬಿಸಿ ಬರೆದದ್ದು ನಿಜಕ್ಕೂ ವಿಷಾಧವೇ ಸರಿ ಎಂದು ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮೇಲೂ ಹರಿಹಾಯ್ದರು.

     ಪ್ರಸ್ತುತ ಬಿ,ಜೆ.ಪಿ. ಸರ್ಕಾರ ಭ್ರಷ್ಠಾಚಾರಿಗಳಿಗೆ ಕುಮ್ಮಕ್ಕು ಕೊಡುತ್ತಿದ್ದು ನಾನು ಭ್ರಷ್ಠಾಚಾರದ ಬಗ್ಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದೇನೆ. ಸರ್ಕಾರದ ದಾಖಲೆಗಳನ್ನು ತಿರುಚಿ ನಕಲಿ ದಾಖಲೆ ಸೃಷ್ಠಿ ಮಾಡಿದಂತಹ ರಘುಮೂರ್ತಿ ತಹಶೀಲ್ದಾರರಂತಹ ಅನೇಕ ಮಂದಿ ನಮಗೂ ಭ್ರಷ್ಠಾಚಾರದ ಪಾಪದ ಹಣ ಒದಗಿಸಲು ಈ ಹಿಂದೆ ಬಂದಿದ್ದರು. ಅಂತಹ ಪಾಪದ ಹಣ ನಮಗೆ ಬೇಕಿಲ್ಲ. ಕೋರೋನಾ ಸಂಕಷ್ಟದಲ್ಲೂ ಒಂದು ಗಂಟೆಗೆ 90 ಕೋಟಿ ರೂ ಸಂಪಾದನೆ ಮಾಡುವಂತಹ ಮುಖೇಶ್ ಅಂಬಾನಿಯಂತಹ ಆರ್ಥಿಕ ತಜ್ಞರನ್ನು ಕೇಂದ್ರ ಬಿ.ಜೆ.ಪಿ. ಸರ್ಕಾರ ತಮ್ಮ ಜೊತೆಯಲ್ಲಿ ಇಟ್ಟುಕೊಳ್ಳಲಿ ನಮ್ಮ ಅಭ್ಯಂತರವೇನೂ ಇಲ್ಲಾ ಆದರೆ ನಮ್ಮ ರೈತರಿಗೆ ಗಂಟೆಗೆ 90 ಕೋಟಿ ಬೇಡಾ ಕನಿಷ್ಟ ದಿನಕ್ಕೆ ತೊಂಬತ್ತು ರೂಪಾಯಿ ಕೊಡಿಸಿದರೆ ಸಾಕು ಎಂದು ಕೇಂದ್ರ ಸರ್ಕಾರವನ್ನು ಕುಮಾರಸ್ವಾಮಿ ಛೇಡಿಸಿದರು.

     ಶಿರಾ ಶಾಸಕ ಸತ್ಯಣ್ಣ ನಿಧನದಿಂದ ಇದೀಗ ಉಪ ಚುನಾವಣೆ ಅನಿವಾರ್ಯವಾಗಿದ್ದು ಸತ್ಯಣ್ಣನ ಪ್ರಾಮಾಣಿಕತೆ, ಪಕ್ಷನಿಷ್ಠೆಯ ಬಗ್ಗೆ ನಮಗೆ ಗೌರವವಿದೆ. ಈ ಹಿಂದೆ ಸತ್ಯಣ್ಣ ಸಚಿವರಾಗಿದ್ದಾಗ ಶಿರಾ ಕ್ಷೇತ್ರದ 17,000 ರೈತ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಿದ ಕೀರ್ತಿ ಅವರಿಗಿದ್ದು ಈವರೆಗೆ ರಾಜ್ಯದ ಯಾವ ಶಾಸಕರೂ ಮಾಡದಂತಹ ಸಾಧನೆಯನ್ನು ಅವರು ಮಾಡಿದ್ದರು. ಅವರ ಋಣವನ್ನು ತೀರಿಸುವ ಕೆಲಸವನ್ನು ನಾವೆಲ್ಲಾ ಮಾಡಬೇಕಿದೆ. ಶಿರಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುವ ಶಕ್ತಿ ಈಆಭಾಗದ ಅನೇಕ ಮುಖಂಡರಿಗಿದ್ದು ಎಲ್ಲರ ತೀರ್ಮಾನವನ್ನು ಪಡೆದು ಎರಡು ದಿನಗಳಲ್ಲಿ ಹೆಸರನ್ನು ಘೋಷಣೆ ಮಾಡಲಾಗುವುದು ಎಂದರು.

       ಶಿರಾ ಕ್ಷೇತ್ರ ಜೆ.ಡಿ.ಎಸ್. ಪಕ್ಷದ ಭದ್ರಕೋಟೆಯಾಗಿದೆ. ಸತ್ಯಣ್ಣ ಚುನಾವಣೆಗೆ ನಿಂತಾಗಲೆಲ್ಲಾ ಕಾರ್ಯಕರ್ತರೇ ಹಣ ಖರ್ಚು ಮಾಡಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಚುನಾವಣೆ ಸಮಯದಲ್ಲಿ ಪಕ್ಷದ ಕಟ್ಟಾಳುಗಳಂತೆ ಇಲ್ಲಿನ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ವರಿಷ್ಠರು ಯಾವ ಅಭ್ಯರ್ಥಿಯ ಹೆಸರನ್ನೇ ಘೋಷಿಸಿದರೂ ಎಲ್ಲರೂ ಒಟ್ಟಾಗಿ ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಿ ಎಂದು ಕಾರ್ಯಕರ್ತರನ್ನು ಕುಮಾರಸ್ವಾಮಿ ಮನವಿ ಮಾಡಿದರು.

       ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಸತ್ಯನಾರಾಯಣ್ ನನ್ನೊಡನೆ ವಿಧಾನಸಭೆಯಲ್ಲಿ ಕೂತಿದ್ದವರು. ಅವರ ಬಗ್ಗೆ ನನಗೆ ಗೌರವವಿದೆ. ಬರುವ ಉಪ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಗಳಾದರೂ ಕೂಡಾ ಸತ್ಯಣ್ಣನೇ ಅಭ್ಯರ್ಥಿ ಎಂದು ಗೆಲ್ಲಿಸಿಕೊಳ್ಳುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.

      ದೇವಗೌಡರು ಪ್ರಧಾನಿಯಾಗಿದ್ದ ಸಂದರ್ಬದಲ್ಲಿ ಸಣ್ಣ ಸರ್ಣನ ಜಾತಿಗಳು ಕೂಡಾ ಮೀಸಲಾತಿ ಸೌಲಭ್ಯ ಪಡೆದಿದ್ದನ್ನು ಯಾರೂ ಮರೆಯಬಾರದು. ಚಂದ್ರಶೇಖರ್ ಪ್ರಧಾನ ಮಂತ್ರಿಯಾಗಿದ್ದಾಗ ದೇವೇಗೌಡರಿಗೆ ಮಂತ್ರಿಯಾಗುವ ಆಫರ್ ನೀಡಲಾಗಿತ್ತು ಆಗ ದೇವೇಗೌಡರು ಮಂತ್ರಿ ಸ್ಥಾನ ತಿರಸ್ಕರಿಸಿನಾಯಕ ಸಮುದಾಯವನ್ನು ಪ.ಪಂಗಡಕ್ಕೆ ಸೇರಿಸಲು ಮನವಿ ಮಾಡಿದ್ದು ಸಫಲತೆ ಕಂಡಿತು. ತುಮಕೂರಿಗೆ ಹೇಮಾವತಿ ನೀರು ಹರಿಯಲು ನಮ್ಮ ಕುಟುಂಬ ಎಂದೂ ಕೂಡಾ ವಿರೋಧ ಮಾಡಿಲ್ಲ ಆದರೂ ಅಪಪ್ರಚಾರಕ್ಕೆ ಎಡೆಯಾಯ್ತು. ಹೇಮಾವತಿ ನಾಲೆಯ ಅಗಲೀಕರಣಕ್ಕೆ ಕೋಟಿಗಟ್ಟಲೆ ಹಣ ನೀಡಿದ್ದು ಕುಮಾರಣ್ಣ ಎಂಬುದನ್ನು ಯಾರೂ ಮರೆಯಬಾರದು ಎಂದರು.

      ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಶಿರಾ ಕ್ಷೇತ್ರವೊಂದಕ್ಕೆ ರಸ್ತೆ ಅಭಿವೃದ್ಧಿಗೆ 187 ಕೋಟಿ ರೂಗಳ ಅನುಧಾನ ನಿಡಿದ್ದೇನೆ. ಕುಮಾರಸ್ವಾಮಿ ಸಿ.ಎಂ. ಆಗಿದ್ದಾಗ ಶಿರಾ ಕ್ಷೇತ್ರದ 17,500 ಮಂದಿ ರೈತರ ಸಾಲ ಮನ್ನಾ ಆಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು ಇಲ್ಲಿನ ಮತದಾರ ನಮ್ಮದೇ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾನೆಂಬ ನಂಬಿಕೆ ನಮಗಿದೆ ಎಂದರು.

     ನಮ್ಮ ಕುಟುಂಬ ಜಾತ್ಯಾತೀತವಾಗಿದೆ ಅದಕ್ಕೆ ಬಿ.ಎ.ತಿಪ್ಪೇಸ್ವಾಮಿ ಅವರೇ ಜ್ವಲಂತ ನಿದರ್ಶನ. ಕುರುಬ ಸಮುದಾಯದ ತಿಪ್ಪೇಸ್ವಾಮಿ ಅವರು ಎಂದೂ ಕೂಡಾ ಎಂ.ಎಲ್.ಸಿ. ಅಧಿಕಾರ ಬಯಸಿದವರಲ್ಲ. ಅವರು ನಾನು ಎಂ.ಎಲ್.ಸಿ. ಆಗುತ್ತೇನೆಂದು ಅಂದುಕೊಂಡಿರಲಿಲ್ಲ. ಅವರನ್ನು ನಮ್ಮ ಕುಟುಂಬದ ದೇವೇಗೌಡರ ಮೂರು ಮಕ್ಕಳಲ್ಲಿ ಇನ್ನೂ ಒಬ್ಬರೆಂದು ಭಾವಿಸಿದ್ದೇವೆ. ನಮ್ಮ ಕುಟುಂಬಕ್ಕೆ ತಿಪ್ಪೇಸ್ವಾಮಿ ಅವರ ಬಗ್ಗೆ ಗೌರವದ ಭಾವೆನಗಳಿವೆ. ನಮ್ಮ ಕುಟುಂಬವನ್ನು ರಾಜಕಾರಣದಲ್ಲಿ ನೆಚ್ಚಿಕೊಂಡವರನ್ನು ಕೈಬಿಟ್ಟಿಲ್ಲ. ಶಿರಾ ಕ್ಷೇತ್ರವೊಂದರಲ್ಲಿಯೇ ಈವರೆಗೆ 6 ಮಂದಿ ಗೊಲ್ಲ ಸಮುದಾಯವನ್ನು ಮುಖಂಡರನ್ನು ಜಿ.ಪಂ. ಸದಸ್ಯರನ್ನಾಗಿಸಿದ ಕೀರ್ತಿ ಸತ್ಯನಾರಾಯಣ್ ಅವರದ್ದು ಎಂದು ಹೆಚ್.ಡಿ.ರೇವಣ್ಣ ತಿಳಿಸಿದರು.

    ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ ಮದಲೂರು ಕೆರೆಗೆ ಹೇಮಾವತಿ ಹರಿಸಲು ಮೊದಲ ಅನುಮತಿ ನೀಡಿದ್ದು ಕುಮಾರಣ್ಣ. ಅದಕ್ಕೆ ಸಾಕಷ್ಟು ದಾಖಲೆಗಳೇ ಇವೆ. ಗ್ರಾಮ ವಾಸ್ತವ್ಯಕ್ಕೆ ಬಂದಿದ್ದಾಗ ಮದಲೂರು ಕೆರೆಗೆ ಭೇಟಿ ನೀಡಿ ಸತ್ಯಣ್ಣನ ಮನವಿಯಂತೆ ಹೇಮಾವತಿ ನೀರು ಹರಿಸಲು ಆದೇಶ ನೀಡಿದ್ದರು. ಈಗ ಬಿ.ಜೆ.ಪಿ. ಮುಖಂಡರು ಉಪ ಚುನಾವಣೆ ನೆಪದಲ್ಲಿ ಪರ್ಯಾಯ ಆದೇಶಗಳನ್ನಿಡಿದು ಬರುತ್ತಿದ್ದಾರೆ. ಇಂತಹವರಿಗೆ ಮತದಾರ ತಕ್ಕ ಪಾಠ ಕಲಿಸುತ್ತಾನೆ ಎಂದರು.

     ಶಾಸಕ ಗೌರಿ ಶಂಕರ್ ಮಾತನಾಡಿ ಶಿರಾ ಕ್ಷೇತ್ರದ ತುಮಕೂರು ಗ್ರಾಮಾಂತರ ಕ್ಷೇತ್ರದ ರೀತಿಯಲ್ಲ. ಇಲ್ಲಿ ನಿಮ್ಮ ಬೇಳೆ ಬೇಯೋದೇ ಇಲ್ಲ. ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆ.ಡಿ.ಎಸ್.ಗೆ ಪೈಪೋಟಿಯೇ ಹೊರತು ಎಂದೂ ಕೂಡಾ ಬಿ.ಜೆ.ಪಿ. ಪೈಪೋಟಿಯಾಗಲಾರದು ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‍ಗೌಡ ಅವರನ್ನು ಛೇಡಿಸಿದರು.

     ಬೆಂಗಳೂರಲ್ಲಿ ಶಿರಾ ಕಾಂಗೈ ಮುಖಂಡರು ಹಾಗೂ ಬಿ.ಜೆ.ಪಿ. ವರಿಷ್ಠರಿಬ್ಬರೂ ವಾಕಿಂಗ್ ಪ್ರೆಂಡ್ ಆಗಿದ್ದು ಬಿ.ಜೆ.ಪಿ. ಪಕ್ಷದಿಂದ ಡಮ್ಮಿ ಅಭ್ಯರ್ಥಿ ಹಾಕಿದರೂ ಆಶ್ಚರ್ಯವಿಲ್ಲ ಎಂದು ಲೇವಡಿ ಮಾಡಿದ ಗೌರಿಶಂಕರ್ ಬರುವ ಚುನಾವಣೆಯಲ್ಲಿ ನಾನು ಇಲ್ಲಿಯೇ 10 ದಿನ ವಾಸ್ತವ್ಯ ಮಾಡುತ್ತೇನೆ. ಯಾರೇ ಅಭ್ಯರ್ಥಿಯಾದರೂ ನಾವೆಲ್ಲಾ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ತಾ.ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ ಸತ್ಯಣ್ಣನ ನಿಧನದ ನಂತರ ಕಾಂಗ್ರೆಸ್, ಬಿ.ಜೆ.ಪಿ. ಮುಖಂಡರು ನಮ್ಮ ಪಕ್ಷದ ಕಾರ್ಯಕರ್ತರನ್ನು ತುಳಿಯುವ ಹಂತಕ್ಕೆ ತಲುಪಿದ್ದಾರೆ. ಅಧಿಕಾರಿಗಳಾರೂ ನಮ್ಮ ಮಾತಿಗೆ ಎಳ್ಳಷ್ಟೂ ಬೆಲೆ ನೀಡುತ್ತಿಲ್ಲ. ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಪಡೆದು ಅರ್ಹ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.

    ರಾಜ್ಯ ಜೆ.ಡಿ.ಎಸ್. ಪ್ರ.ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್ ಮಾತನಾಡಿ ಶಿರಾ ಕ್ಷೇತ್ರವು ಜೆ.ಡಿ.ಎಸ್. ಭದ್ರಕೋಟೆಯಾಗಿದ್ದು ಕಾರ್ಯಕರ್ತರಲ್ಲಿ ಪಕ್ಷನಿಷ್ಠೆ ಇದೆ. ಅರ್ಹ ಅಭ್ಯರ್ಥಿಗೆ ಟಿಕೇಟ್ ನೀಡಿ ಗೆಲ್ಲಿಸಕೊಂಡು ಬರುವ ಕೆಲಸ ಎಲ್ಲರೂ ಮಾಡಬೇಕಿದೆ ಎಂದರು.
ಕಾಡುಗೊಲ್ಲರನ್ನು ಪ.ಪಂಗಡಕ್ಕೆ ಸೇರ್ಪಡೆ ಮಾಡಿಸುವಂತೆ ಗೊಲ್ಲ ಸಮುದಾಯದ ಮುಖಂಡ ಚಂಗಾವರ ಮಾರಣ್ಣ ಹಾಗೂ ಕುಂಚಿಟಿಗರನ್ನು ಓ.ಬಿ.ಸಿ.ಗೆ ಸೇರಿಸುಂತೆ ಎಸ್.ಎಲ್.ಗೋವಿಂದರಾಜು, ಕುಮಾರಸ್ವಾಮಿ ಹಾಗೂ ಸಂಸದ ರೇವಣ್ಣ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಜೆ.ಡಿ.ಎಸ್. ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಬಿ.ಎ.ತಿಪ್ಪೇಸ್ವಾಮಿ, ಬಿ.ಸತ್ಯಪ್ರಕಾಶ್, ಎಸ್.ಪುಟ್ಟೀರಪ್ಪ, ಸುಧಾಕರಲಾಲ್, ತಿಮ್ಮರಾಯಪ್ಪ, ಹೆಚ್.ನಿಂಗಪ್ಪ, ಎಂ.ಟಿ.ಕೃಷ್ಣಪ್ಪ, ಸುರೇಶ್‍ಬಾಬು, ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಆಂಜಿನಪ್ಪ, ಶಾಸಕ ವೀರಭದ್ರಯ್ಯ, ಸಿ.ಆರ್.ಉಮೇಶ್, ಎಸ್.ರಾಮಕೃಷ್ಣ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap