ಬೆಂಗಳೂರು
ಜನರ ಬಳಿ ಹೋಗಿ ಬೆವರು ಸುರಿಸಿ ಮತ ಪಡೆದ ನಮಗೆ ಮೋದಿ ಹೆಸರಿನಲ್ಲಿ ಗೆದ್ದ ನಕಲಿ ಶಾಮ ಸದಾನಂದಗೌಡ ಪಾಠ ಕಲಿಸಬೇಕಿಲ್ಲ ಎಂದು ಜೆಡಿಎಸ್ ನಾಯಕ,ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೆಂಡ ಕಾರಿದ್ದಾರೆ.ಉಪಚುನಾವಣೆಯ ಹಿನ್ನೆಲೆಯಲ್ಲಿ ಮತ ಸಮರಕ್ಕೆ ಮುಂದಾಗಿರುವ ಹೆಚ್.ಡಿ.ಕುಮಾರಸ್ವಾಮಿ ಇಂದು ಮಹಾಲಕ್ಷ್ಮೀ ಲೇಔಟ್‍ನಲ್ಲಿ ಪ್ರಚಾರ ಕಾರ್ಯ ನಡೆಸಿ ಬಿಜೆಪಿ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರ ಬಳಿ ಹೋಗಿ ಒಂದೊಂದು ಮತವನ್ನು ಬೇಡಿ ಪಡೆದಿದ್ದೇವೆ.ಅದಕ್ಕಾಗಿ ಬೆವರು ಹರಿಸಿದ್ದೇವೆ.ಮೂವತ್ತೇಳು ಕ್ಷೇತ್ರಗಳಲ್ಲಿ ಜನರ ಆಶೀರ್ವಾದ ಪಡೆದಿದ್ದೇವೆ.ಮೂರು ಜನ ಆಪರೇಷನ್ ಕಮಲಕ್ಕೆ ಬಲಿಯಾಗಿ ಹೊರಗೆ ಹೋಗಿರಬಹುದು.
ಮೂರು ಜನ ಪಕ್ಷ ಬಿಟ್ಟು ಹೋಗಿದ್ದಾರೆ ಎಂದ ಮಾತ್ರಕ್ಕೆ ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದೆ ಎಂದಲ್ಲ.ಹಾಗೆ ಅಸ್ತಿತ್ವ ಕಳೆದುಕೊಂಡಿದ್ದರೆ ಈಗಿರುವ ಶಾಸಕರು ಯಾರು?ಎಂದು ಅವರು ಡಿ.ವಿ.ಸದಾನಂದಗೌಡ ಅವರನ್ನು ಪ್ರಶ್ನಿಸಿದರು.ನಮ್ಮ ಹಾಗೆ ಸದಾನಂದಗೌಡರು ಜನರ ಬಳಿ ಹೋಗಿ ನನಗೆ ಮತ ಕೊಡಿ ಎಂದು ಕೇಳಿದ್ದಾರಾ?ನರೇಂದ್ರಮೋದಿ ಅವರ ಮುಖ ನೋಡಿ ಮತ ಹಾಕಿ ಎಂದಿದ್ದಾರೆ.ಜನರೂ ನರೇಂದ್ರಮೋದಿ ಅವರ ಮುಖ ನೋಡಿ ಮತ ಹಾಕಿದ್ದಾರೆ.
ಯಾರು ತಮಗಾಗಿ ಮತ ಕೇಳುತ್ತಾರೋ?ಮತ್ತು ಅವರಿಗಾಗಿ ಜನ ಮತ ಹಾಕುತ್ತಾರೋ?ಆಗ ಅವರು ಕ್ಷೇತ್ರದ ನಿಜವಾದ ಪ್ರತಿನಿಧಿ.ಆದರೆ ಸದಾನಂದಗೌಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನಿಜವಾದ ಪ್ರತಿನಿಧಿ ಅಲ್ಲ.ಬದಲಿಗೆ ನರೇಂದ್ರಮೋದಿ ಅಲ್ಲಿನ ಜನಪ್ರತಿನಿಧಿ.
ಹೀಗೆ ಜನಪ್ರತಿನಿಧಿಯೇ ಅಲ್ಲದವರು ಜೆಡಿಎಸ್ ಅಸ್ತಿತ್ವದಲ್ಲಿಲ್ಲ ಎಂದ ಕೂಡಲೇ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ?ಅಥವಾ ಯಾರಾದರೂ ಅದನ್ನು ನಂಬಲು ಸಾಧ್ಯವೇ?ಒಬ್ಬ ನಕಲಿ ಶಾಮ ಆಡುವ ಮಾತುಗಳನ್ನು ಯಾರು ಕೇಳುತ್ತಾರೆ?ಎಂದು ಅವರು ವ್ಯಂಗ್ಯವಾಡಿದರು.
ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ.ಜನರ ಆಶೀರ್ವಾದ ಇರುವವರೆಗೆ ಅದು ಬೆಳೆಯುತ್ತಲೇ ಇರುತ್ತದೆ.ಈಗಲೂ ಅಷ್ಟೇ.ಯಾರೇನೇ ಟೀಕಿಸಿದರೂ ಜೆಡಿಎಸ್ ಬೆಳೆಯುತ್ತದೆ.ಬೆಳೆಯುತ್ತಲೇ ಇರುತ್ತದೆ.ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.ಚುನಾವಣೆ ಮುಗಿಯಲಿ.ಜನ ಸದಾನಂದಗೌಡರಿಗೂ ಉತ್ತರ ಕೊಡುತ್ತಾರೆ.ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವವರಿಗೂ ಉತ್ತರ ಕೊಡುತ್ತಾರೆ.ಅದಕ್ಕಾಗಿ ತುಂಬ ದಿನ ಕಾಯಬೇಕಾಗಿಲ್ಲ ಎಂದು ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
