ಬೆಂಗಳೂರು
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ.
ಸರ್ಕಾರದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಧರ್ಮಸ್ಥಳದಲ್ಲಿ ಮಂಜುಶ್ರೀ ವಸ್ತು ಸಂಗ್ರಹಾಲಯ ಉದ್ಘಾಟನೆಯಿಂದಲೂ ಸಹ ಅವರು ದೂರ ಉಳಿದರು.
ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಮುಖ್ಯಮಂತ್ರಿ ಅವರಿಗೆ ವೈದ್ಯರು ಹೃದಯ ಸಮಸ್ಯೆಯನ್ನು ಪರಿಶೀಲಿಸಿದರು. ನಂತರ ಎಂಆರ್‍ಐ ಸ್ಕಾನ್ ಮಾಡಿದರು. ಬಳಿಕ ಒಂದು ದಿನ ವಿಶ್ರಾಂತಿ ಪಡೆಯುವಂತೆ ಸಿಎಂಗೆ ವೈದ್ಯರು ಸಲಹೆ ನೀಡಿದರು. ನಂತರ ಕುಮಾರ ಸ್ವಾಮಿ ವಿಶ್ರಾಂತಿಗಾಗಿ ಪದ್ಮನಾಭನಗರದಲ್ಲಿರುವ ತಮ್ಮ ತಂದೆ ದೇವೇಗೌಡರ ಮನೆಗೆ ತೆರಳಿದರು.
ಜಯದೇವ ಆಸ್ಪತ್ರೆ ನಿರ್ದೇಶಕ ಮಂಜುನಾಥ್ ಮಾತನಾಡಿ, ಕುಮಾರಸ್ವಾಮಿ ಅವರಿಗೆ ತೊಂದರೆ ಏನೂ ಆಗಿಲ್ಲ. ಒತ್ತಡ ಹೆಚ್ಚಾಗಿದ್ದು, ಈಸಿಜಿ, ಎಂಆರ್‍ಐ ಸ್ಕ್ಯಾನ್ ಮಾಡಿದ್ದೇವೆ. ಎಲ್ಲವೂ ನಾರ್ಮಲ್ ಇದೆ. ಪ್ರತಿನಿತ್ಯ ಮಾಧ್ಯಮಗಳಲ್ಲಿ ಬರುವ ವಿಚಾರಗಳನ್ನು ನೋಡಬೇಡಿ ಎಂದು ಸಲಹೆ ಮಾಡಿದ್ದೇವೆ. ಎಲ್ಲಾ ವಿಚಾರಗಳಿಗೂ ರಿಯಾಕ್ಟ್ ಮಾಡುವುದರಿಂದ ಅವರಿಗೆ ಕೊಂಚ ಒತ್ತಡ ಹೆಚ್ಚಾಗಿದೆ. ಅದಕ್ಕಾಗಿ ಬೇರೆ ಯಾರನ್ನಾದರೂ ನೇಮಿಸಲು ಸಲಹೆ ನೀಡಿದ್ದೇವೆ ಎಂದರು.
ಕುಮಾರ ಸ್ವಾಮಿ ಬೆಳಗ್ಗೆ ಶಾಸಕರ ಭವನದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಪುತ್ಥಳಿಗೆ ಸಿಎಂ ಮಾಲಾರ್ಪಣೆ ಮಾಡಬೇಕಾಗಿತ್ತು. ಬಳಿಕ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಾಲ್ಮೀಕಿ ಜಯಂತಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಬಳಿಕ, ಮಧ್ಯಾಹ್ನ ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು.
ಧರ್ಮಸ್ಥಳದಲ್ಲಿರುವ ಮಂಜೂಷಾ ವಸ್ತುಸಂಗ್ರಹಾಲಯದ ನವೀಕೃತ ಕಟ್ಟಡವನ್ನು ಕುಮಾರಸ್ವಾಮಿ ಅವರು ಉದ್ಘಾಟಿಸಬೇಕಾಗಿತ್ತು. ಐದನೇ ಶತಮಾನದ ಹಸ್ತಪ್ರತಿಗಳು, ಪ್ರಾಚೀನ ಶಿಲಾಯುಗದ ಮತ್ತು ನವಶಿಲಾಯುಗದ ಬಂಡೆಗಳು, 1500ರ ದಶಕದ ಧಾರ್ಮಿಕ ಕಲಾಕೃತಿಗಳು, ಕಳೆದ ಶತಮಾನದ ಕ್ಯಾಮೆರಾಗಳು ಸೇರಿದಂತೆ ಕರಾವಳಿ ಭಾಗದ ಇತ್ತೀಚಿನ ಐತಿಹಾಸಿಕ ಕಲಾಕೃತಿಗಳು ಕೂಡ ಈ ವಸ್ತುಸಂಗ್ರಹಾಲಯದಲ್ಲಿದೆ. ಇದರ ಉದ್ಘಾಟನೆಯನ್ನು ಮುಖ್ಯಮಂತ್ರಿಗಳೇ ನೆರವೇರಿಸಬೇಕೆಂದು ಡಾ. ವೀರೇಂದ್ರ ಹೆಗ್ಗಡೆ ಖುದ್ದು ಆಮಂತ್ರಣ ನೀಡಿದ್ದರು. ಆದರೆ, ಅನಾರೋಗ್ಯದಿಂದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ