ಕುರ್ಚಿಗಾಗಿ ಹಗ್ಗ ಜಗ್ಗಾಟ ಖಂಡಿಸಿ ಪ್ರತಿಭಟನೆ

ದಾವಣಗೆರೆ:

    ಅಧಿಕಾರಕ್ಕಾಗಿ ಹಗ್ಗ ಜಗ್ಗಾಟ ನಡೆಸುತ್ತಿರುವ ಮೂರು ಪಕ್ಷಗಳ ಶಾಸಕರುಗಳ ರಾಜಕೀಯ ದೊಂಬರಾಟ ಖಂಡಿಸಿ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

    ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ವೇದಿಕೆ ಕಾರ್ಯಕರ್ತರು, ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ನಮಿಸಿದ ನಂತರ, ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮುಖವಾಡ ಧರಸಿದ್ದ ಕಾರ್ಯಕರ್ತನನ್ನು ಕೂರಿಸಿ, ಮೂರು ಪಕ್ಷಗಳ ಶಾಸಕರುಗಳ ಮುಖವಾಡವನ್ನು ಮುಖಕ್ಕೆ ಧರಿಸಿಕೊಂಡು ‘ಸಿಎಂ ಕುರ್ಚಿಯನ್ನು ಅತ್ತಿಂದಿತ್ತ, ಇತ್ತಿಂದತ್ತ’ ಎಳೆದಾಡುವ ಮೂಲಕ ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗ ಜಗ್ಗಾಟದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಮಲ್ಲೇಶ್, ನಮ್ಮ ರಾಜ್ಯದ ಚುನಾಯಿತ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ, ಅಧಿಕಾರದ ಲಾಲಸೆಗಾಗಿ ನಾಡಿನ ಮಾನ ಮರ್ಯಾದೆಯನ್ನು ರಾಷ್ಟ್ರ ಮಟ್ಟದಲ್ಲಿ ಮೂರು ಕಾಸಿಗೆ ಹರಾಜು ಹಾಕುತ್ತಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

       ಮಳೆಯ ಅಭಾವದಿಂದ ರಾಜ್ಯದ ರೈತರು, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಷ್ಟೋ ಕಡೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ಸಹ ಹನಿ ನೀರು ಇಲ್ಲದೇ, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಚುನಾವಣೆಯ ಸಂದರ್ಭದಲ್ಲಿ ಮತದಾರರ ಮನೆ ಬಾಗಿಲಿಗೆ ಹೋಗಿ, ಅವರ ಕಾಲಿಗೆ ಬಿದ್ದು ಮತ ಕೇಳಿ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಶಾಸಕರುಗಳು ಈಗ ಜನರ ಸಮಸ್ಯೆಯನ್ನು ಸಹ ಆಲಿಸದೇ, ಸಾರ್ವಜನಿಕರು ಪಾವತಿಸುವ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡು ಮೋಜು-ಮಸ್ತಿ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ರಾಜ್ಯಪಾಲರು ತಕ್ಷಣವೇ ಮಧ್ಯ ಪ್ರವೇಶಿಸುವ ಮೂಲಕ ಶಾಸಕರುಗಳು ಸಾರ್ವಜನಿಕರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವುದಕ್ಕೆ ಕಡಿವಾಣ ಹಾಕಲು, ಎಲ್ಲ ಶಾಸಕರುಗಳನ್ನು ಅಮಾನತು ಗೊಳಿಸಿ, ಮನೆಗೆ ಕಳುಹಿಸಿ, ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆ ನಂತರದಲ್ಲಿ ಯುವಶಕ್ತಿ ವೇದಿಕೆ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

      ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಎಸ್.ರಾಜು, ಪರಮೇಶಪ್ಪ, ಹನುಮಂತಪ್ಪ, ಅಣ್ಣಪ್ಪ, ರೇಷ್ಮಾ, ಈರಮ್ಮ, ಶೈನಾ, ದುರ್ಗಮ್ಮ, ಪರಮೇಶ್ ನಾಯ್ಕ, ಗೌಸ್‍ಪೀರ್, ಪುನೀತ್, ಗಣೇಶ್, ಮಂಜು, ಕಿರಣ್, ಸಚಿನ್, ಕೇಶವ, ಅವಿನಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap