ಹುಳಿಯಾರು:
ಹುಳಿಯಾರು ಸಮೀಪದ ಕುರಿಹಟ್ಟಿಯ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳಾದರೂ ದುರಸ್ತಿ ಮಾಡದೆ ನಿರ್ಲಕ್ಷ್ಯಿಸಿರುವುದರಿಂದ ಗ್ರಾಮದಲ್ಲಿ ಜೀವಜಲಕ್ಕೆ ತತ್ವಾರ ಎದುರಾಗಿದೆ ಎಂದು ಗ್ರಾಮಸ್ಥ ಚಂದ್ರು ಆರೋಪಿಸಿದ್ದಾರೆ.
ಕಳೆದ ಎರಡ್ಮೂರು ತಿಂಗಳಿಂದ ಈ ಘಟಕದಲ್ಲಿ ನೀರು ಸರಿಯಾಗಿ ಶುದ್ಧಿಯಾಗದೆ ಬರುತ್ತಿದ್ದು ಒಂದೇ ದಿನಕ್ಕೆ ನೀರು ವಾಸನೆ ಬರುತ್ತಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಫಿಲ್ಟರ್ ಸರಿಮಾಡದೆ ನಿರ್ಲಕ್ಷ್ಯಿಸಿದ್ದರು. ಆದರೂ ಹಳ್ಳಿಯ ಜನ ವಿಧಿಯಿಲ್ಲದೆ ಇದೇ ನೀರು ಕುಡಿಯುತ್ತಿದ್ದರು.
ಆದರೆ ಇತ್ತಿಚೆಗೆ ಬಂದ ಮಳೆಗಾಳಿಗೆ ಶುದ್ಧ ನೀರಿನ ಘಟಕದ ನೀರಿನ ಪೈಪ್ ಸೇರಿದಂತೆ ಅನೇಕ ಸಮಾಗ್ರಿಗಳು ಕಿತ್ತುಹೋಗಿತ್ತು. ಇದನ್ನು ರೆಡಿ ಮಾಡಲು ಬಂದಾಗ ನೀರಿನ ಟ್ಯಾಂಕ್ ತೂತ ಬಿದ್ದು ನೀರು ಸೋರುತ್ತಿರುವುದು ಹಾಗೂ ನೀರು ಸರಿಯಾಗಿ ಫಿಲ್ಟರ್ ಆಗದಿರುವುದು ಗಮನಕ್ಕೆ ಬಂತು.
ಹಾಗಾಗಿ ಫಿಲ್ಟರ್ ದುರಸ್ಥಿಗೆ ಟೆಕ್ನಿಷಿಯನ್ ಬಂದಾಗ ಎಲ್ಲವೂ ರೆಡಿ ಮಾಡುವುದಾಗಿ ಹೇಳಿ ಹೋದವರು ಇಲ್ಲಿಯವರೆವಿಗೂ ಇತ್ತ ತಿರುಗಿ ನೋಡಿಲ್ಲ. ಪರಿಣಾಮ ಬರುತ್ತಿದ್ದ ನೀರೂ ಸಹ ಬರದಾಗಿ ಕುಡಿಯುವ ನೀರಿಗಾಗಿ ಮೂರ್ನಲ್ಕು ಕಿ.ಮೀ.ದೂರದ ಕೆಂಕೆರೆ, ಕಂಪನಹಳ್ಳಿ, ಹುಳಿಯಾರಿಗೆ ಹೋಗಿ ತರುವ ಅನಿವಾರ್ಯತೆ ಸೃಷ್ಠಿಯಾಗಿದೆ.ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತಕ್ಷಣ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿ ನೀರಿಗಾಗಿ ಜನ ಅಲೆಯುವುದನ್ನು ತಪ್ಪಿಸುವಂತೆ ಅವರು ಮನವಿ ಮಾಡಿದ್ದಾರೆ.