ಶಿವಮೊಗ್ಗ
ಕುರುಬ ಸಮುದಾಯದ ರಾಜಕೀಯ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ಬಧು ಬಂಗಾರಪ್ಪ ಅವರ ಗೆಲುವು ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶನ ಎಸ್ ಪಿ ಶೇಷಾದ್ರಿ ಹೇಳಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕುರುಬ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದ್ದು, ಹಿಂದಿನ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಹಾಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮುಂದುವರೆಸಿದ್ದಾರೆ. ಈ ಕಾರ್ಯಕ್ರಮಗಳನ್ನು ಮುಂದುವರೆಸಲು ಮತ್ತು ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬಲು ಮಧು ಬಂಗಾರಪ್ಪ ಗೆಲುವು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದರೆ ಮೈತ್ರಿ ಸರ್ಕಾರದ ಅಸ್ಥಿತ್ವಕ್ಕೆ ಅಪಾಯ ಎದುರಾಗಲಿದೆ. ಬಿಜೆಪಿ ನಾಯಕರು ಸರ್ಕಾರವನ್ನು ಪತನಗೊಳಿಸುವ ಸಂಚು ರೂಪಿಸಲಿದ್ದಾರೆ. ಇದು ಕಾರ್ಯಗತವಾಗಬಾರದು. ಸರ್ಕಾರ ಐದು ವರ್ಷಗಳ ಕಾಲ ಆಡಳಿತದಲ್ಲಿದ್ದರೆ ಕುರುಬ ಸಮುದಾಯ ಸೇರಿದಂತೆ ಒಟ್ಟಾರೆ ಹಿಂದುಳಿದ ವರ್ಗ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿಯಾಗಲಿದೆ. ಹೀಗಾಗಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಒತ್ತು ನೀಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕಾಗಿನೆಲ ಅಭಿವೃದ್ಧಿ ಪ್ರಾಧಿಕಾರ ಬಲಿಷ್ಠಗೊಳಿಸಲಾಯಿತು. ಬಹುದಿನಗಳ ಬೇಡಿಕೆಯಾದ ಸಂಗೊಳ್ಳಿ ರಾಯಣ್ಣ ಮತ್ತು ಮೈಲಾರ ಲಿಂಗ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲಾಯಿತು. ಅಂಬೇಡ್ಕರ್, ಜಗಜೀವನ ರಾಮ್ ಭವನಗಳ ಮಾದರಿಯಲ್ಲಿ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕನಕ ಸಮುದಾಯ ಭವನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಿದ ಶ್ರೇಯಸ್ಸು ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಇಡೀ ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ಸಿದ್ದರಾಮಯ್ಯ ಸರ್ಕಾರ ಚಾಲನೆ ನೀಡಿದ್ದು, ಇದರಿಂದ ಕುರುಬ ಜನಾಂಗ ಸೇರಿ ಎಲ್ಲರಿಗೂ ಅನುಕೂಲವಾಯಿತು. ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ಟ್ರೈಫಂಡ್ 10 ಸಾವಿರ ರೂಗೆ ನಿಗದಿಪಡಿಸಿದ್ದು, ಹಿಂದುಳಿದ ವರ್ಗಳ ಆದಾಯ ಮಿತಿಯನ್ನು 2.5 ಲಕ್ಷ ರೂನಿಂದ 8 ಲಕ್ಷ ರೂಗೆ ಏರಿಕೆ ಮಾಡಿರುವ ತೀರ್ಮಾನ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಎಸ್ ಪಿ ಶೇಷಾದ್ರಿ ಹೇಳಿದರು.
ವಸತಿ ಕ್ಷೇತ್ರದಲ್ಲೂ ಹಿಂದುಳಿದ ವರ್ಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದು, ಇದರಿಂದ ಬಿಡಿಎ, ಕೆ.ಎಚ್.ಬಿ, ಕೆಐಡಿಬಿ ನಿವೇಶಗಳನ ಹಂಚಿಕೆಯಲ್ಲಿ ಮೀಸಲಾತಿ ದೊರೆಯುತ್ತಿದೆ. ಕುರಿಗಾರರು, ಮೀನುಗಾರರು, ಪಶುಸಂಗೋಪನಾ ವಲಯದಲ್ಲಿ ವಿಮಾ ಸೌಲಬ್ಯ, ಹಿಂದುಳಿದ ವರ್ಗಗಳ ಇಲಾಖೆಯನ್ನು ಪ್ರತ್ಯೇಕಗೊಳಿಸಿ ಬಲಿಷ್ಠಗೊಳಿಸಿದ್ದು, ದೇವರಾಜ ಅರಸು ನಿಗಮಕ್ಕೆ ಶಕ್ತಿ ತುಂಬುವ ಕೆಲಸವನ್ನು ಸಿದ್ದರಾಮಯ್ಯ ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ ಎಂದರು.
ಹೈದರಬಾದ್ ಕರ್ನಾಟಕ ಭಾಗದ ಬೀದರ್, ಯಾದಗಿರಿಯಲ್ಲಿ ಹೆಚ್ಚಿರುವ ಗೊಂಡಾ, ಕೋಲಿ, ಕಾಡುಗೊಲ್ಲ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಎರಡನೇ ಬಾರಿಗೆ ಶಿಫಾರಸ್ಸು ಮಾಡಿದ್ದಾರೆ. ಈಗಾಗಲೇ 1996 ರಲ್ಲಿ, ಈ ಸಮುದಾಯಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದೀಗ ಮತ್ತೊಮ್ಮೆ ಶಿಫಾರಸ್ಸು ಮಾಡಿದ್ದು, ಕೇಂದ್ರ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಎಸ್.ಪಿ. ಶೇಷಾದ್ರಿ ಆರೋಪಿಸಿದರು.
ಸಿದ್ದರಾಮಯ್ಯ ಅವರ ಕಾಲದಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗಗಳ ವಸತಿ ನಿಲಯಗಳನ್ನು ನಿರ್ಮಿಸಿದ್ದು, ಅರಿವು, ವಿದ್ಯಾಸಿರಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಹಿಂದುಳಿದ ಸಮುದಾಯದ ಶೈಕ್ಷಣಿಕ ಅಭ್ಯುದಯಕ್ಕೆ ಭದ್ರ ಬುನಾದಿ ಹಾಕಿವೆ. ಇವುಗಳಿಗೆ ಇನ್ನಷ್ಟು ಶಕ್ತಿ ತುಂಬಲು ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಕುರುಬ ಸಮುದಾಯ ಪಣತೊಟ್ಟು ಕೆಲಸ ಮಾಡಬೇಕೆಂದು ಎಂದು ಹೇಳಿದರು.