ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಒತ್ತಾಯ..!

ಬೆಂಗಳೂರು:

      ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಯಾವ ರೀತಿ ಹೋರಾಟ ನಡೆಸಬೇಕು ಎನ್ನುವ ನಿರ್ಣಯ ಕೈಗೊಳ್ಳಲು ಅಕ್ಟೋಬರ್ 11ರಂದು ಅರಮನೆ ಮೈದಾನದಲ್ಲಿ ಸಮುದಾಯದ ಎಲ್ಲಾ ಜನಪ್ರತಿನಿಧಿಗಳ ಸಭೆ ನಡೆಸಲಾಗುತ್ತದೆ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ತಿಳಿಸಿದ್ದಾರೆ.

 

       ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು, ವಾಲ್ಮೀಕಿ ಸಮುದಾಯದ ಮೀಸಲಾತಿಗೆ ನಾವು ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ. ಹಿಂದುಳಿದ ವರ್ಗದ ನಮ್ಮ ಮೀಸಲಾತಿಯೊಂದಿಗೆ ನಾವು ಎಸ್ಟಿ ಸಮುದಾಯಕ್ಕೆ ಸೇರ್ಪಡೆಯಾಗಲು ಹೋರಾಟ ನಡೆಸಲಿದ್ದೇವೆ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

      ಕುರುಬ ಸಮುದಾಯ ಬುಡಕಟ್ಟು ಜನಾಂಗದಿಂದ ಗುರುತಿಸಿಕೊಂಡಿದೆ. ಬೀದರ್, ಕಲಬುರಗಿ, ಯಾದಗಿರಿ ಮೂರು ಜಿಲ್ಲೆಗಳಿಂದ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಪ್ರಸ್ತಾಪ ಕೇಂದ್ರಕ್ಕೆ ಹೋಗಿದೆ. ಕೊಡಗಿನ ಪ್ರಸ್ತಾಪ ವಾಪಸ್ ಬಂದಿದೆ. ಈ ಎರಡೂ ಪ್ರಸ್ತಾವನೆಗಳೊಂದಿಗೆ ಇಡೀ ಕರ್ನಾಟಕದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲು ಕುರುಬ ಎಸ್ಟಿ ಹೋರಾಟ ಸಮಿತಿ ರಚನೆ ಮಾಡಲಾಗಿದೆ ಎಂದರು.

       ಅಕ್ಟೋಬರ್ 11ರಂದು ಸಮುದಾಯದ ಶಾಸಕ, ಸಂಸದರು ಸೇರುದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯಲಾಗಿದ್ದು, ಹೋರಾಟದ ರೂಪುರೇಷೆಗಳನ್ನು ರೂಪಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ. ಚರ್ಚೆ ನಡೆಸಿ ಹೋರಾಟದ ತೀವ್ರತೆ ರೂಪಿಸಲಾಗುತ್ತದೆ. ಇಡೀ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಒತ್ತಾಯ ಮಾಡಲಾಗುತ್ತದೆ ಎಂದರು.

     ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಲ್ಲ: ಎಸ್ಟಿ ಸಮುದಾಯದವರು ಶೇ. 3ರಿಂದ 7ಕ್ಕೆ ಮೀಸಲಾತಿ ಬೇಡಿಕೆ ಇಟ್ಟಿದ್ದು, ಅದಕ್ಕೆ ನಮ್ಮ ಬೆಂಬಲಬಿದೆ. ಎಸ್ಟಿಗೆ ಹೋಗಿ ಅಲ್ಲಿರುವ ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣಕ್ಕೆ ತೊಂದರೆ ಕೊಡಲ್ಲ. ಹಿಂದುಳಿದ ವರ್ಗದ ನಮ್ಮ ಮೀಸಲಾತಿ ಪರ್ಸೆಂಟೇಜ್ ತೆಗೆದುಕೊಂಡೇ ನಾವು ಎಸ್ಟಿಗೆ ಹೋಗುತ್ತೇವೆ ಎಂದರು. 

     ಮಾನ್ಯ ಗ್ರಾಮೀಣಾಭೀವೃದ್ಧಿ ಮತ್ತು ಪಮಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೇಳುವ ಅಂಶಗಳನ್ನು ಕೊಡುತ್ತೇವೆ. ಕುರುಬ ಎಸ್ಟಿ ವ್ಯವಸ್ಥೆ ಆಗಬೇಕು ಎನ್ನುವ ಅಪೇಕ್ಷೆ ಇದೆ. ಇನ್ನು ಕೆಲ ಹಿಂದುಳಿದ ವರ್ಗಗಳು ಬಂದು ನಮಗೂ ಬೆಂಬಲ ಕೊಡಿ ಎನ್ನುತ್ತಿವೆ. ಕೋಲಿ ಸಮಾಜ, ಸವಿತಾ ಸಮಾಜ, ಕಾಡುಗೊಲ್ಲರು ಸಹಕಾರ ಕೇಳಲು ಬಂದಿವೆ. ಅವರಿಗೂ ನಾವು ಸಾಥ್ ನೀಡಲಿದ್ದೇವೆ. ಈ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ಈಗಾಗಲೇ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸಲಾಗಿದೆ. ಅರ್ಹರು ಯಾರಿದ್ದಾರೆ ಅವರೆಲ್ಲಾ ಬಂದರೆ ಅವರ ಪರವಾಗಿಯೂ ನಾವು ಹೋರಾಟ ಮಾಡಲಿದ್ದೇವೆ. ಅಕ್ಟೋಬರ್ 11ರಂದು ಬೆಳಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ ಸಮುದಾಯದ ಎಲ್ಲಾ ಜನಪ್ರತಿನಿಧಿಗಳ ಸಭೆ ನಡೆಸಿ ಮುಂದಿನ ಕಾರ್ಯಕ್ರಮ ಯಾವ ರೀತಿ ಇರಬೇಕು ಎಂದು ನಿರ್ಣಯ ಕೈಗೊಳ್ಳಲಿದೆ ಎಂದರು.

    ಕಾಂಗ್ರೆಸ್ ಮುಖಂಡ ಹೆಚ್.ಎಂ.ರೇವಣ್ಣ ಮಾತನಾಡಿ, ಇದು ಇಂದಿನ ಬೇಡಿಕೆಯಲ್ಲ. ಬಹುಕಾಲದ ಬೇಡಿಕೆಯಾಗಿದೆ. ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಪಕ್ಷಾತೀತವಾಗಿ ನಾವು ಸರ್ಕಾರಕ್ಕೆ ಒತ್ತಾಯ ಮಾಡಲು ಮುಂದಾಗಿದ್ದೇವೆ. ಸಂಘಟಿತರಾಗಿ ಹೋರಾಟ ಮಾಡುತ್ತಿದ್ದೇವೆ. ಜಯ ಸಿಗುವ ವಿಶ್ವಾಸವಿದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಕಾಗಿನೆಲೆ ಪೀಠದ ಶಾಖಾ ಮಠಗಳ ಸ್ವಾಮೀಜಿಗಳಾದ ಶ್ರೀಶ್ರೀಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಕಾಗಿನೆಲೆ ಶಾಖಾಮಠ, ಹೊಸದುರ್ಗ ಶ್ರೀಶ್ರೀಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು, ಕಾಗಿನೆಲೆ ಶಾಖಾಮಠ, ತಿಂಥಣಿ ಶ್ರೀಶ್ರೀಶ್ರೀ ಶಿವಾನಂದಪುರಿ ಮಹಾಸ್ವಾಮಿಗಳು, ಕನಕಗುರುಪೀಠ ಶಾಖಾಮಠ, ಕೆ.ಆರ್.ನಗರ ಮತ್ತು ಬೆಳಗಾವಿ ಜಿಲ್ಲೆಯ ಅಮರೇಶ್ವಸರ ಮಹಾ ಸ್ವಾಮೀಜಿಗಳು ಕೂಡ ಉಪಸ್ಥಿತರಿದ್ದರು.

     ಈ ಪತ್ರಿಕಾಗೋಷ್ಠೀಯಲ್ಲಿ ಪ್ರಾಸ್ತಾವಿಕವಾಗಿ ಅಹಿಂದ ನಾಯಕರೂ ಮತ್ತು ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರಿ ಕೆ.ಮುಕುಡಪ್ಪನವರು ಮಾತನಾಡಿದರು. ಇಂದಿನ ಗೋಷ್ಠಿಯಲ್ಲಿ ಮಾಜಿ ಸಚಿವರಾದ ಶ್ರೀ ಹೆಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯರಾದ ಶ್ರೀ ರಘುನಾಥ್ ರಾವ್ ಮಲಕಾಪೂರೆ, ಮಾಜಿ ಸಂಸದರು ಮತ್ತು ಸಮಿತಿಯ ಅಧ್ಯಕ್ಷರಾದ ಶ್ರೀ ಕೆ,ವಿರುಪಾಕ್ಷಪ್ಪನವರು, ಮಾಜಿಮಹಾಪೌರರು ಮತ್ತು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಡಿ.ವೆಂಕಟೇಶ್ ಮೂರ್ತಿ, ರಾಜೇಂದ್ರ ಸಣ್ಣಕ್ಕಿ,ಶಾಂತಪ್ಪ, ಪುಟ್ಟಸ್ವಾಮಿಯವರು, ಟಿ.ಬಿ.ಬಳಗಾವಿಯವರು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap