ಹೊಸದುರ್ಗ
ಮಹಾನ್ ಚೇತನ, ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನೋತ್ಸವದ ಅಂಗವಾಗಿ ವಿಶ್ವಮಾನವ ದಿನಾಚರಣೆ ಯನ್ನು ಆಚರಿಸುವ ಸಂದರ್ಭದಲ್ಲಿಯೇ ಇನ್ನೊಬ್ಬ ಮಹಾನ್ ಚೇತನ, ಸಂತ, ವಯೋವೃದ್ಧರು, ಜ್ಞಾನವೃದ್ಧರು, ಧಾರ್ಮಿಕ ನೇತಾರರೂ ಆದ ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮಿಜಿಗಳವರು ನಿಧನರಾದದ್ದು ಕರ್ನಾಟಕಕ್ಕಷ್ಟೇ ಅಲ್ಲ; ದೇಶಕ್ಕೇ ತುಂಬಲಾರದ ನಷ್ಟ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ ಗ್ರಾಮದ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ ಪೇಜಾವರದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿಗಳ ನಿಧನದ ಸಂತಾಪ ಸೂಚಕ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಜನತೆ ಬಹುದೊಡ್ಡ ಭಾಗ್ಯವನ್ನು ಕಳೆದುಕೊಂಡಂತಾಗಿದೆ. ಕುವೆಂಪು ಮತ್ತು ಪೇಜಾವರ ಶ್ರೀಗಳೀರ್ವರೂ ಆತ್ಮ ಕಲ್ಯಾಣದ ಜೊತೆಗೆ ಲೋಕಕಲ್ಯಾಣಕ್ಕಾಗಿ ಶ್ರಮಿಸಿದವರು. ಕುವೆಂಪು ಅವರು ಮೌಢ್ಯಗಳನ್ನು, ದೇವರುಗಳನ್ನು ನೂಕಾಚೆ, ಭಾರತಾಂಬೆಯೇ ನಮಗೆ ದೇವರು ಎಂದು ಹೇಳುವ ಮೂಲಕ ವೈಚಾರಿಕತೆಯನ್ನು ಮೆರೆದವರು. ಪೇಜಾವರ ಶ್ರೀಗಳು ಸಂಪ್ರದಾಯದ ಕುಟುಂಬದಿಂದ ಬಂದವರು, ಸಂಪ್ರದಾಯಸ್ಥ ಮಠಕ್ಕೆ ಪೀಠಾಧಿಕಾರಿಗಳಾಗಿ ದ್ದವರು. ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡೂ ಸಮಾಜಮುಖಿ ಚಿಂತನೆ ನಡೆಸಿದವರು. ಕೆಲವರ ಜೊತೆ ವಿಶ್ವಾಸ ಮಾಡಿದರೆ ಜಗಳ ಆಡುವಂತಿಲ್ಲ; ಜಗಳ ಮಾಡಿದರೆ ವಿಶ್ವಾಸದಲ್ಲಿ ಇರುವಂತೆ ಇಲ್ಲ. ಆದರೆ ಪೇಜಾವರ ಶ್ರೀಗಳೊಡನೆ ವಿಶ್ವಾಸ ಮತ್ತು ಜಗಳ ಎರಡೂ ಸಾಧ್ಯವಿತ್ತು. ಅವರ ಜೊತೆ ಮುಕ್ತ ಸಂವಾದ-ಚರ್ಚೆಗೆ ಅವಕಾಶವಿತ್ತು. ಅವರ ಇಂಥ ಜನಪರ ಕಾಳಜಿಯ ಹಿನ್ನೆಲೆಯಲ್ಲಿ ಅನ್ಯ ಸ್ವಾಮಿಗಳನ್ನು ಒಪ್ಪದವರೂ ಅವರನ್ನು ಒಪ್ಪುತ್ತಿದ್ದರು
ನಮ್ಮ ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಸ್ವಾಮಿಗಳವರ ಕಾಲದಿಂದಲೂ ನಮ್ಮ ಮಠದೊಡನೆ ಪೂಜ್ಯರಿಗೆ ಉತ್ತಮ ಬಾಂಧವ್ಯವಿತ್ತು. ತರಳಬಾಳು ಹುಣ್ಣಿಮೆಯ ಅನೇಕ ಕಾರ್ಯಕ್ರಮಗಳಲ್ಲಿ ಪೇಜಾವರ ಶ್ರೀಗಳು ಭಾಗವಹಿಸಿದ್ದರು. ನಮ್ಮ ಅವರ ನಡುವೆ ಎರಡು ದಶಕದಷ್ಟು ವಯಸ್ಸಿನ ಅಂತರವಿದ್ದರೂ ನಮ್ಮ ಬಗ್ಗೆ ಅಪಾರವಾದ ಪ್ರೀತಿ-ವಿಶ್ವಾಸವನ್ನಿಟ್ಟಿದ್ದರು. ಇದೇ ನಮ್ಮ ಅವರ ನಡುವಿನ ಬಾಂಧವ್ಯಕ್ಕೆ ಕಾರಣವೂ ಆಗಿತ್ತು. ನಮ್ಮ ಪೂಜ್ಯರ ನಡುವೆ ವೈಚಾರಿಕವಾಗಿ ಭಿನ್ನಾಭಿಪ್ರಾಯಗಳಿದ್ದವೇ ಹೊರತು ಮಾನವೀಯ ಪ್ರೀತಿ-ವಿಶ್ವಾಸಗಳಿಗೆ ಎಂದೂ ಕೊರತೆಯಾಗಿರಲಿಲ್ಲ. ಪೂಜ್ಯರ ನಿಧನ ವಯೋಸಹಜವಾದರೂ ಅವರ ಭಕ್ತರಂತೆ ನಮಗೂ ಆಘಾತ ತಂದಿದೆ. ದೇಶವೇ ಹಿರಿಯರು, ಮಾರ್ಗದರ್ಶಿಯೊಬ್ಬರನ್ನು ಕಳೆದುಕೊಂಡಿದೆ. ವ್ಯಕ್ತಿಗೆ ಸಾವೇ ಹೊರತು; ಸಾಧನೆಗಲ್ಲ. ಪೂಜ್ಯರ ಸಾಧನೆ ಸದಾಸ್ಮರಣೀಯವಾದುದು ಎಂದರು.ಕಾರ್ಯಕ್ರಮದ ಆರಂಭದಲ್ಲಿ ಸಂತಾಪಸೂಚಕವಾಗಿ ಒಂದು ನಿಮಿಷದ ಮೌನವನ್ನು ಆಚರಿಸಲಾಯಿತು.