ಪರಂಪರೆಗೆ ಹೊಸ ಆಯಾಮ ನೀಡಿದ ಕುವೆಂಪು

ದಾವಣಗೆರೆ:

    ಭಾರತೀಯ ಪರಂಪರೆಗೆ ಕುವೆಂಪು ಹೊಸ ಆಯಾಮ, ಹೊಸ ದೃಷ್ಟಿಕೋನ ನೀಡಿದ ಮಹಾನ್ ಚೇತನ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್ ಬಣ್ಣಿಸಿದರು.

   ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ `ನನ್ನ ಅರಿವಿನ ಕುವೆಂಪು’ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

   ಪುರೋಹಿತಶಾಹಿ ವ್ಯವಸ್ಥೆಗೆ ಕುವೆಂಪು ನೀಡದ ಹೊಡೆತವನ್ನು ಮತ್ಯಾವ ಕವಿ, ಸಾಹಿತಿಯೂ ನೀಡಲು ಸಾಧ್ಯವಾಗಿಲ್ಲ. ಭಾರತದಲ್ಲಿ ಪುರೋಹಿತಶಾಹಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಕುವೆಂಪು ಅದಕ್ಕೆ ಕಡಿವಾಣ ಹಾಕಿ ಭಾರತೀಯ ಪರಂಪರೆಗೆ ಹೊಸ ಆಯಾಮ, ದೃಷ್ಟಿಕೋನ ನೀಡಿದ್ದರು ಎಂದು ವಿಶ್ಲೇಷಿಸಿದರು.

    ಕುವೆಂಪು ಅವರ ಎರಡು ಕಾದಂಬರಿಗಳು ಇಂದಿಗೂ ಜಗತ್ತಿನ ಶ್ರೇಷ್ಠ ಕಾದಂಬರಿಗಳ ಸಾಲಲ್ಲಿ ನಿಲ್ಲುವಂಥವಾಗಿವೆ. ಅವರು ತಮ್ಮ ಕೃತಿಗಳ ಮೂಲಕ ಮಾತ್ರ ಒಳಗೊಂಡಿದ್ದಲ್ಲ, ಸಾಂಸ್ಕೃತಿಕವಾಗಿಯೂ ಒಳಗೊಂಡವರಾಗಿದ್ದಾರೆ ಎಂದರು.

    ಸ್ವಾತಂತ್ರ್ಯ ಪೂರ್ವದಿಂದಲೂ ಕಾಯಂ ಪ್ರತಿಪಕ್ಷದಂತೆ ಕಾರ್ಯನಿರ್ವಹಿಸಿದ ಕುವೆಂಪು ಆಳುವವರಿಗೆ ಎಂದೂ ಜೈ ಅಂದವರಲ್ಲ ಎಂದ ಅವರು, `ಬೆರಳಿಗೆ ಕೊರಳ್’ ಕೃತಿಯ ಮೂಲಕ ನಾವು ನೀಡುತ್ತಿರುವ ಶಿಕ್ಷಣ ಎಂಥದ್ದು ಎಂಬುದನ್ನು ದ್ರೋಣ, ಅರ್ಜುನ, ಏಕಲವ್ಯರ ಮೂಲಕ ತೋರಿಸಿದ್ದರು. ಅಲ್ಲದೆ, `ಸ್ಮಶಾನ ಕುರುಕ್ಷೇತ್ರ’ದ ಮೂಲಕ ಯುದ್ಧದ ಪರಿಣಾಮವನ್ನು ಕಟ್ಟಿಕೊಟ್ಟಿದ್ದಾರೆ. ಮಹಾಕಾವ್ಯ ಇನ್ನು ಹುಟ್ಟಲು ಸಾಧ್ಯವೇ ಇಲ್ಲ ಎಂಬ ಕಾಲದಲ್ಲಿ ಅವರು ಮಹಾಕಾವ್ಯ ಬರೆದರು ಎಂದು ಸ್ಮರಿಸಿದರು.

    ವಿಶ್ವಮಾನವ ತತ್ವ ಅವರ ಎಲ್ಲ ಕೃತಿಗಳಲ್ಲಿವೆ. ಎಲ್ಲ ಸೋಗಲಾಡಿತನಗಳನ್ನು ಬಯಲುಗೊಳಿಸಿದ ಕುವೆಂಪು ಯಾವ ಸ್ವಾಮಿ, ಪಾದ್ರಿ, ಮುಲ್ಲಾಗಳ ಕಾಲಿಗೂ ಬೀಳದ ಒಂದು ಯುಗದ ಮನೋಧರ್ಮವನ್ನು ಸೃಷ್ಟಿಸಿ, ಚಿಂತನೆಗೆ ಹಚ್ಚಿದ ಚೇತನ ಆಗಿದ್ದಾರೆ ಎಂದರು.

  ಮೈಸೂರು ವಿವಿಯ ಮಾನಸ ಗಂಗೋತ್ರಿ ಆವರಣವು 800 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲು ಕುವೆಂಪು ಕಾರಣ. ಅವರು ವಿಶ್ವವಿದ್ಯಾಲಯದ ಸಮಸ್ಯೆಯನ್ನು ಹೇಳಿಕೊಳ್ಳಲು ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರಿಗೆ ಪತ್ರಬರೆದು ಅವಕಾಶ ಕೇಳಿದಾಗ ಸ್ವತಃ ನಿಜಲಿಂಗಪ್ಪನವರೇ ಶಿಕ್ಷಣ ಮಂತ್ರಿಯನ್ನು ಕುವೆಂಪು ಬಳಿ ಕಳುಹಿಸಿದ್ದರು. ಬಳಿಕ ಆ ಜಾಗ ಮಂಜೂರಾಗಿತ್ತು. ಅಂಥ ಎತ್ತರದ ವ್ಯಕ್ತಿತ್ವ ಕುವೆಂಪು ಅವರದ್ದಾಗಿತ್ತು. ಅಂಥ ಉದಾತ್ತ ನಿಲುವು ಆಗಿನ ಮುಖ್ಯಮಂತ್ರಿಯವರದ್ದಾಗಿತ್ತು. ಆದರೆ, ಈಗಿನ ಸಾಹಿತಿ ಮತ್ತು ರಾಜಕಾರಣಿಗಳಲ್ಲಿ ಎತ್ತರದ ವ್ಯಕ್ತಿತ್ವ ಮತ್ತು ಉದಾತ್ತ ನಿಲುವು ಕಾಣಲು ಸಾಧ್ಯವೇ ಇಲ್ಲ ಎಂದು ಹೇಳಿದರು.

    ಸೀತಮ್ಮ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅರುಣ ಕುಮಾರಿ ಬಿರಾದರ್ ಮಾತನಾಡಿ, ಮತಗಳು ಎಂದರೆ ಒಬ್ಬ ಬೆಪ್ಪ ಮತ್ತು ಒಬ್ಬ ಠಕ್ಕ ಸೇರಿದಾಗ ಹುಟ್ಟಿಕೊಂಡವುಗಳು ಎಂದು ಕುವೆಂಪು ಹೇಳಿದ್ದಲ್ಲದೇ, ಮತಗಳ ಬದಲು ಮತಿ ಬೆಳೆಸಿಕೊಳ್ಳಿ, ನಿರಂಕುಶಮತಿಗಳಾಗಿ ಎಂಬುದು ಅವರ ಆಶಯವಾಗಿತ್ತು. ಅದನ್ನು ಯುವಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

   ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ.ಕಾವ್ಯಶ್ರೀ, ಎಚ್.ಕೆ.ಫಾಲಾಕ್ಷಪ್ಪ ಗೋಪನಾಳ್, ಬಿ.ಎಂ.ಮುರಿಗಯ್ಯ ಕುರ್ಕಿ, ಮಾಗನೂರು ರಾಜಶೇಖರ ಗೌಡ್ರು, ಷಡಕ್ಷರಪ್ಪ ಬೇತೂರು, ಎಸ್.ಎಂ. ಮಲ್ಲಮ್ಮ, ರಾಘವೇಂದ್ರ ನಾಯರಿ, ಸಾಲಿಗ್ರಾಮ ಗಣೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap