ಕ್ಯಾತ್ಸಂದ್ರ ವಾರದ ಸಂತೆಗೆ ಕಾಯಕಲ್ಪ ಬೇಕಾಗಿದೆ

ತುಮಕೂರು

      ನೂರಾರು ವರ್ಷಗಳ ಇತಿಹಾಸ ಇರುವ ತುಮಕೂರಿನ ಕ್ಯಾತ್ಸಂದ್ರದ ಮಂಗಳವಾರದ ಸಂತೆ ಇವತ್ತಿಗೂ ತನ್ನ ಮಹತ್ವ ಉಳಿಸಿಕೊಂಡು ಬಂದಿದೆ. ನಗರ ವಿಸ್ತಾರಗೊಂಡು, ಜನಸಂಖ್ಯೆ ಹೆಚ್ಚಾಗಿ ಹೈಟೆಕ್ ಸೂಪರ್ ಬಜಾರ್‍ಗಳು, ಬೃಹತ್ ವಾಣಿಜ್ಯ ಮಳಿಗೆಗಳ ಭರ್ಜರಿ ವ್ಯಾಪಾರದ ನಡುವೆಯೂ ಕ್ಯಾತ್ಸಂದ್ರದ ವಾರದ ಸಂತೆಯ ಜನಪ್ರಿಯತೆ, ವಹಿವಾಟು ಕಮ್ಮಿಯಾಗಿಲ್ಲ.

       ಸುತ್ತಮುತ್ತಲ ಗ್ರಾಮಗಳ ರೈತರು ಬೆಳೆದು ಸಂತೆಗೆ ತಂದು ಮಾರಾಟ ಮಾಡುವ ತಾಜಾ ಹೂವು, ತರಕಾರಿ ಮತ್ತಿತರ ಸರಕಿಗೆ ಈ ಸಂತೆ ಹೆಸರುವಾಸಿ. ಇವತ್ತಿಗೂ ತುಮಕೂರಿನ ವಿವಿಧ ಬಡಾವಣೆಗಳಿಂದ, ಸುತ್ತಮುತ್ತಲ ಊರುಗಳಿಂದ ಗ್ರಾಹಕರು ಮಂಗಳವಾರ ಕ್ಯಾತ್ಸಂದ್ರ ಸಂತೆಗೆ ಬಂದು ಬೇಕಾದ್ದನ್ನು ಖರೀದಿಸಿ ಒಯ್ಯುತ್ತಾರೆ.

       ಆದರೆ, ಈ ಸಂತೆಯ ಸ್ಥಿತಿಗತಿ ಆಗಿನಂತೇ ಇದೆ ಹೊರತಾಗಿ ಕನಿಷ್ಟ ಸೌಕರ್ಯಗಳಿಲ್ಲ. ಸಾರ್ವಜನಿಕ ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ. ವ್ಯಾಪಾರಿಗಳು ತಮ್ಮ ಸರಕು ಇಟ್ಟುಕೊಳ್ಳಲು ವ್ಯವಸ್ಥಿತವಾದ ಪ್ಲಾಟ್‍ಫಾರಂ ಇಲ್ಲ. ನೆರಳಿನ ಆಸರೆ ಇಲ್ಲ, ಮಳೆ ಬಂದರೆ ರಕ್ಷಣೆ ಇಲ್ಲ. ರಾತ್ರಿ ವೇಳೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲ.

        ಇಷ್ಟಕ್ಕೂ ಸಂತೆ ನಡೆಯುತ್ತಿರುವ ಈ ಮೈದಾನ ಸರ್ಕಾರದ ಜಾಗವಲ್ಲ. ಪಕ್ಕದ ದೊಡ್ಡಮ್ಮ ದೇವಸ್ಥಾನಕ್ಕೆ ಸೇರಿದ ಜಮೀನು. ಸಾರ್ವಜನಿಕರ ಅನುಕೂಲಕ್ಕಾಗಿ ಈ ಜಾಗದಲ್ಲಿ ಸಂತೆ ನಡೆಯಲು ದೇವಸ್ಥಾನ ಸಮಿತಿ ನೂರಾರು ವರ್ಷಗಳಿಂದ ಜಮೀನು ನೀಡಿ ಅವಕಾಶ ಮಾಡಿಕೊಟ್ಟಿದೆ. ಹಿಂದೆ ಸಂತೆ ಮೈದಾನ ವಿಶಾಲವಾಗಿತ್ತು. ಬೃಹತ್ ಮರಗಳ ತೋಪು ಇತ್ತು. ಅದರ ನೆರಳಿನಲ್ಲಿ ದೊಡ್ಡ ಸಂತೆ ನಡೆಯುತ್ತಿತ್ತು.

        ಈಗ ಆ ಮಟ್ಟದ ಸಂತೆ ಆಗುತ್ತಿಲ್ಲ ಎಂದು ಕ್ಯಾತ್ಸಂದ್ರದ ಹಿರಿಯರು ಸಂತೆಯ ವೈಭವ ನೆನೆಸಿಕೊಳ್ಳುತ್ತಾರೆ. ಗ್ರಾಮವಾಗಿದ್ದ ಕ್ಯಾತ್ಸಂದ್ರ ವಿಸ್ತಾರಗೊಂಡು ತುಮಕೂರು ನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿ ನಗರವಾಯಿಗಿದೆ. ಸಂತೆ ಮೈದಾನ ಜಾಗ ವಸತಿ ಪ್ರದೇಶವಾಗಿ ಸುತ್ತಮುತ್ತಲು ಮನೆಗಳು ನಿರ್ಮಾಣಗೊಂಡು ಉಳಿದ ಜಾಗದಲ್ಲಿ ಸಂತೆ ಸಣ್ಣ ಪ್ರಮಾಣದಲ್ಲಿ ಸಂತೆ ಮುಂದುವರೆದಿದೆ.
ಸಂತೆಗೆ ಸ್ಥಳ ನೀಡಿರುವ ದೊಡ್ಡಮ್ಮ ದೇವಸ್ಥಾನ ಸಮಿತಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗಾಗಿ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡುತ್ತದೆ.

        ಆದರೆ, ಸಾರ್ವಜನಿಕರ ಅನುಕೂಲಕ್ಕಾಗಿ ನಡೆಯುತ್ತಿರುವ ಈ ಸಂತೆಗೆ ನಗರ ಪಾಲಿಕೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ತುರ್ತಾಗಿ ಶೌಚಾಲಯ ಕಟ್ಟಿಕೊಟ್ಟು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲಿ. ಶೌಚಾಲಯಕ್ಕೆ ಹೋಗಬೇಕೆಂದರೆ ಅಂಗಡಿ ಬಿಟ್ಟು ದೂರದ ಕೆರೆ ಅಂಗಳಕ್ಕೆ ಹೋಗಬೇಕು. ಮನೆಯಿಂದ ಊಟ, ನೀರು ತಂದುಕೊಳ್ಳುತ್ತೇವೆ. ಶೌಚಾಲಯದ್ದೇ ಸಮಸ್ಯೆ ಎಂದು ಸುಮಾರು 40 ವರ್ಷಗಳಿಂದ ಸಂತೆ ವ್ಯಾಪಾರ ಮಾಡುತ್ತಿರುವ ಭದ್ರಮ್ಮ ಹೇಳುತ್ತಾರೆ.

        ಸಂತೆ ಮೈದಾನದಲ್ಲಿ ಮೊದಲಿಂದಂತೆ ಈಗ ಗಿಡ ಮರಗಳಿಲ್ಲ. ಬಿಸಿಲಿನಲ್ಲಿ ಕುಳಿತು ವ್ಯಾಪಾರ ಮಾಡಬೇಕು. ಮಳಿಗೆಗಳ ರೀತಿ ಕಟ್ಟೆ ನಿರ್ಮಿಸಿ ಛಾವಣಿ ಹಾಕಿಸಿಕೊಟ್ಟರೆ ಬಿಸಿಲು, ಮಳೆಗೆ ಆಸರೆಯಾಗುತ್ತದೆ. ನಗರ ಪಾಲಿಕೆ ಈ ಕೆಲಸ ಮಾಡಿಕೊಡಲಿ ಎಂದು ವಿಳ್ಯೆದೆಲೆ ವ್ಯಾಪಾರಿ ಕೃಷ್ಣಪ್ಪ ಮನವಿ ಮಾಡಿದರು.

      ನಾನು ತಾತನ ಕಾಲದಿಂದಲೂ ಈ ಸಂತೆಗೆ ವ್ಯಾಪಾರ ಮಾಡಲು ಬರುತ್ತಿದ್ದೇನೆ. ಊರು ಬೆಳೆದರೂ ಕ್ಯಾತ್ಸಂದ್ರ ಸಂತೆ ಪರಿಸ್ಥಿತಿ ಹಾಗೇ ಇದೆ, ಏನೇನೂ ಮೂಲಭೂತ ಸೌಕರ್ಯಗಳಿಲ್ಲ. ಮಳೆ ಬಂದರೆ ಅಂಗಡಿ ಇಟ್ಟಾಡಿ ಹೋಗುತ್ತದೆ. ಶೌಚಾಲಯವಿಲ್ಲದೆ ಹೆಂಗಸರಿಗೆ ತುಂಬಾ ತೊಂದರೆಯಾಗಿದೆ. ಇಲ್ಲಿನ ಸಮಸ್ಯೆ ತಿಳಿದು ನಿವಾರಿಸಿ ಅನುಕೂಲ ಮಾಡಿಕೊಡಬೇಕು ಎಂದು ವ್ಯಾಪಾರಿ ರಮೇಶ್ ವಿನಂತಿ ಮಾಡುತ್ತಾರೆ.

       ದೊಡ್ಡಮ್ಮ ದೇವಸ್ಥಾನ ಸಮಿತಿ ಮುಖಂಡರು, 33ನೇ ವಾರ್ಡಿನ ನಗರಪಾಲಿಕೆ ಸದಸ್ಯೆ ಪತಿ ಯಜಮಾನ್ ಗಂಗಹನುಮಯ್ಯ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕ್ಯಾತ್ಸಂದ್ರ ಸಂತೆ ತೊಡಕಿಲ್ಲದೇ ನಡೆಯಬೇಕು ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಇಲ್ಲಿ ನೀಡಬೇಕು ಎಂದು ತಾವು ನಗರ ಪಾಲಿಕೆಗೆ ಹಾಗೂ ಶಾಸಕರಲ್ಲಿ ಮನವಿ ಮಾಡಿದ್ದು, ಶಾಸಕರೂ ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.
ಇಲ್ಲಿ ತುರ್ತಾಗಿ ಸಾರ್ವಜನಿಕ ಶೌಚಾಲಯ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಜೊತೆಗೆ ವಾಹನಗಳ ಪಾರ್ಕಿಂಗ್‍ಗೆ ಅನುಕೂಲ ಮಾಡಬೇಕು ಎಂದು ತಾವು ವಿನಂತಿ ಮಾಡಿಕೊಂಡಿರುವುದಾಗಿ ತಿಳಿಸಿದರು.

      ನಗರ ವ್ಯಾಪ್ತಿ ಬೆಳೆಯುತ್ತಿದೆ. ವಾರಕ್ಕೊಮ್ಮೆ ನಡೆಯುವ ಕ್ಯಾತ್ಸಂದ್ರ ಸಂತೆಯನ್ನು ಮಿನಿ ಮಾರುಕಟ್ಟೆ ರೀತಿ ಅಭಿವೃದ್ಧಿಪಡಿಸಿ ಪ್ರತಿ ದಿನವೂ ವಹಿವಾಟು ನಡೆಯುವಂತೆ ಮಾಡಬೇಕು. ಸಂಬಂಧಿಸಿದ ಇಲಾಖೆಗಳು ಅಗತ್ಯ ಸೌಕರ್ಯ ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕ್ಯಾತ್ಸಂದ್ರದ ರೇಣುಕಮ್ಮ ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap