ಬೆಂಗಳೂರು
ರಸ್ತೆ ಬದಿ ನವಜಾತ ಮಗುವಿಗೆ ಎದೆ ಹಾಲುಣಿಸಿ ಯಲಹಂಕ ಠಾಣೆಯ ಮಹಿಳಾ ಪೊಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ.ಈ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಅಪರಾಧಿಗಳನ್ನು ಮಟ್ಟ ಹಾಕಲು ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳುವ ಪೊಲೀಸರಲ್ಲಿ ಮಾತೃ ಹೃದಯವಿರುವುದನ್ನು ಸಾಬೀತುಪಡಿಸಿದ್ದಾರೆ.
ಕೊರೆಯುವ ಚಳಿಯಲ್ಲಿಯೇ ಸ್ವಲ್ಪವೂ ಕರಣೆಯಿಲ್ಲದೇ ಯಾರೋ ಅಪರಿಚಿತರು ಯಲಹಂಕದ ಜಿಕೆವಿಕೆ ಕ್ಯಾಂಪಸ್‍ನ ರಸ್ತೆ ಬದಿ ನವಜಾತ ಹೆಣ್ಣು ಶಿಶುವನ್ನು ಬುಧವಾರ ಬೆಳಿಗ್ಗೆ ಎಸೆದು ಹೋಗಿದ್ದರು. ಇರುವೆಗಳಿಂದ ಮುತ್ತಿದ್ದ ನವಜಾತ ಶಿಶುವನ್ನು ಕಂಡ ಸ್ಥಳೀಯರು ವಿದ್ಯಾರಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗು ದೊರೆತ ಸ್ಥಳವು ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಗೆ ಬಾರದಿದ್ದರಿಂದ ಯಲಹಂಕ ಪೊಲೀಸರು ಧಾವಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯ ಜೊತೆಗಿದ್ದ ಮಹಿಳಾ ಪೊಲೀಸ್ ಪೇದೆ ಸಂಗೀತಾ ಎಸ್ ಹಲಿಮನಿ ಆ ಮಗುವನ್ನು ನೋಡಿದ ಕೂಡಲೇ ಎದೆ ಹಾಲುಣಿಸಿ, ಆರೈಕೆ ಮಾಡಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಆರೋಗ್ಯವಾಗಿರುವ ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ವೈದ್ಯರು ನಿರ್ಧಾರ ಮಾಡಿದ್ದಾರೆ.
ಸಂಗೀತಾ ಅವರ ಕಾರ್ಯಕ್ಕೆ ಸಹೋದ್ಯೋಗಿಗಳು, ಡಿಸಿಪಿ ಕಲಾ ಕೃಷ್ಣಸ್ವಾಮಿ ಸೇರಿ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸಕಾಲಕ್ಕೆ ಹಾಲುಣಿಸಿ ಮಗು ಕಾಪಾಡಿದ ಸಂಗೀತಾ ಅವರನ್ನು ಆಸ್ಪತ್ರೆ ಸಿಬ್ಬಂದಿ ಪ್ರಶಂಸಿಸಿದ್ದಾರೆ. ಇನ್ನು ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಸಂಗೀತಾಗೆ ಸಲಾಂ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರಸ್ತೆ ಬದಿ ಎಸೆಯಲ್ಪಟ್ಟಿದ್ದ 1 ದಿನದ ಹೆಣ್ಣು ಮಗುವನ್ನು ನೋಡಲು ಬಂದ ಸಂಗೀತಾ ಕೂಡ 10 ತಿಂಗಳ ಹೆಣ್ಣು ಮಗುವಿನ ತಾಯಿ ಆಗಿದ್ದು, 10-15 ನಿಮಿಷ ನವಜಾತ ಶಿಶುವನ್ನು ಆರೈಕೆ ಮಾಡಿ ತಾಯಿಯಂದಿರ ಕರ್ತವ್ಯದ ಬಗ್ಗೆ ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
