ಬೆಂಗಳೂರು
ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯೆಯೊಬ್ಬರು ಮಿತಿ ಮೀರಿದ ಅನಸ್ತೇಶಿಯಾ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಮೂಲದ ಡಾ. ಸಿಂಧು ಪೋತ್ಲಾ (30) ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಮಾನಸಿಕ ದುರ್ಬಲತೆ ಹೊಂದಿದ್ದ ಅವರು ಅದರಿಂದಲೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವಿಜಯನಗರದ ಟ್ಯೂನಿಕ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಂಧು, ಡಾ. ರಂಜಿತ್ ಕುಮಾರ್ ಎನ್ನುವವರನ್ನು ವಿವಾಹವಾಗಿದ್ದರು. ಆಂಧ್ರದಲ್ಲಿ ವೈದ್ಯರಾಗಿದ್ದ ತಂದೆ-ತಾಯಿ ಬಿಟ್ಟು ಸಿಂಧು ಅವರು ಪತಿ ರಂಜಿತ್ ಕುಮಾರ್ ಜತೆ ಬಸವೇಶ್ವರ ನಗರದ 3ನೇ ಹಂತದ 8ನೇ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ಹಠಮಾರಿ ಸ್ವಭಾವ ಹೊಂದಿದ್ದ ಸಿಂಧು, ಪತಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದು, ಇಬ್ಬರ ನಡುವೆ ಕಲಹ ಹೆಚ್ಚಾಗಿದ್ದರಿಂದ ಸಿಂಧು ಅವರ ಪೋಷಕರು ನಗರಕ್ಕೆ ಬಂದು ಕೆಲ ದಿನಗಳ ಕಾಲ ಇಬ್ಬರನ್ನು ಪ್ರತ್ಯೇಕವಾಗಿ ವಾಸಿಸಲು ವ್ಯವಸ್ಥೆ ಮಾಡಿದ್ದರು.
ಕಳೆದ 4 ತಿಂಗಳಿಂದ ಪತಿಯಿಂದ ದೂರವಿದ್ದ ಸಿಂಧು,ಭಾನುವಾರ ಮಧ್ಯಾಹ್ನ 12.30ರ ವೇಳೆ ಮಿತಿ ಮೀರಿದ ಅನಸ್ತೇಶಿಯಾ ಇಂಜೆಕ್ಷನ್ ಚುಚ್ಚಿಕೊಂಡು ಅಸ್ವಸ್ಥರಾಗಿದ್ದಾರೆ. ಮನೆಯಲ್ಲಿದ್ದ ಕೆಲಸದವರು ನೋಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಬಸವೇಶ್ವರ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
