ಹುಳಿಯಾರು:
ಕಾಯಕಯೋಗಿ ಶ್ರೀ ಸಿದ್ಧರಾಮರು 800 ವರ್ಷಗಳ ಹಿಂದೆ ಕಟ್ಟಿದ್ದ ಹುಳಿಯಾರು ಹೋಬಳಿಯ ಯಳನಾಡು ಕೆರೆಗೆ 800 ವರ್ಷಗಳ ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆಯವರ ಪತ್ನಿ ಶ್ರೀಮತಿ ಹೇಮಾವತಿ ವೀ,ಹೆಗ್ಗಡೆಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ನಮ್ಮೂರು-ನಮ್ಮಕೆರೆ ಮೂಲಕ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.
ಹೌದು, 12 ನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿಯ ನಾಯಕತ್ವ ವಹಿಸಿದ್ದ ಬಸವಣ್ಣನವರ ಜತೆಯಲ್ಲಿದ್ದ ಪ್ರಮುಖರಲ್ಲಿ ಸೊನ್ನಾಪುರದ ಸಿದ್ಧರಾಮರು ಸಹ ಒಬ್ಬರಾಗಿದ್ದರು. ತನ್ನೂರಿನಲ್ಲಿ ಕೆರೆ ಕಟ್ಟುವ ಮೂಲಕ ಶ್ರಮದಾನ ಮತ್ತು ಸ್ವಯಂ ಸೇವೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಕಾಯಕ ಪ್ರತಿನಿಧಿಯಾಗಿ ಗುರುತಿಸಿಕೊಂಡರು. ಅಲ್ಲಿಂದ ತಾನು ಹೋಗಿದ್ದ ಊರಲೆಲ್ಲಾ ಕೆರೆ ಕಟ್ಟುವ ಮೂಲಕ ಜೀವ ಸಂಕುಲಗಳ ಬದುಕಿಗೆ ದಾರಿಯಾದರು.
ಸಿದ್ಧರಾಮರು 800 ವರ್ಷಗಳ ಹಿಂದೆ ಕಟ್ಟಿದ ಎಪ್ಪತ್ತಕ್ಕೂ ಹೆಚ್ಚು ಕೆರೆಗಳ ಪೈಕಿ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದ ಕೆರೆಯೂ ಸಹ ಒಂದು. ಇದಕ್ಕೆ ಕೆರೆಯ ದಡದಲ್ಲಿರುವ ಸಿದ್ಧರಾಮರ ದೇವಸ್ಥಾನ ಸಹ ನಿದರ್ಶನವಾಗಿದೆ. 800 ವರ್ಷಗಳಿಂದ ಜೀವ ಸಂಕುಲಕ್ಕೆ ಆಸರೆಯಾಗಿದ್ದ ಈ ಕೆರೆ ಇತ್ತೀಚಿನ ದಿನಗಳಲ್ಲಿ ಜಾಲಿ ಗಿಡಗಳು ಸೇರಿದಂತೆ ಅನಗತ್ಯ ಗಿಡಗಂಟೆಗಳಿಂದ ತುಂಬಿ ಹೋಗುವ ಜೊತೆಗೆ ಅವೈಜ್ಞಾನಿಕವಾಗಿ ಮಣ್ಣು ದೋಚಿದ ಫಲವಾಗಿ ಮಳೆಯಾದರೂ ನೀರು ಸಂಗ್ರಹ ಸಾಮಥ್ರ್ಯ ಇಲ್ಲದಾಯಿತು.
ಸಂಗ್ರಹವಾದ ನೀರು ದೀಘಕಾಲ ಉಳಿಯದಾಯಿತು. ಒಟ್ಟಾರೆ ನೀರಿನ ಅಕ್ಷಯ ಪಾತ್ರೆಯಂತಿದ್ದ ಕೆರೆ ತನ್ನ ಗತಕಾಲದ ವೈಭವವನ್ನೇ ಕಳೆದುಕೊಂಡಿತ್ತು.ಪುರಾತನ ಕಾಲದ ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ರಾಜ್ಯದ ಆಸ್ತಿಕರ ಪಾಲಿನ ಆತ್ಪಾಂಧವರಾದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು. ಈಗ ಇವರ ಪತ್ನಿ ಹೇಮಾವತಿ ಹೆಗ್ಗಡೆಯವರು ರಾಜ್ಯದ ನೀರಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಜಲಮೂಲಗಳನ್ನು ಉಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ನಮ್ಮ ಊರು ನಮ್ಮ ಕೆರೆ ಯೋಜನೆಯ ಮೂಲಕ ರಾಜ್ಯದ ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.
ಇದುವರೆವಿಗೂ ಕೋಟ್ಯಾಂತರ ರೂ.ವೆಚ್ಚದಲ್ಲಿ ನೂರಾರು ಕೆರೆಗಳನ್ನು ಪುನಶ್ಚೇತನ ಮಾಡಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ನಂದಿಹಳ್ಳಿ ಕೆರೆ, ಆಲದಕಟ್ಟೆ ಕೆರೆ ಅಭಿವೃದ್ಧಿಯಾಗಿದ್ದು ಈ ವರ್ಷ ಕಾಯಕಯೋಗಿ ಶ್ರೀ ಸಿದ್ಧರಾಮರು ಕಟ್ಟಿದ ಯಳನಾಡು ಕೆರೆಯನ್ನು 15 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುತ್ತಿದೆ.
800 ವರ್ಷಗಳ ನಂತರ ಅದರಲ್ಲೂ ಶ್ರೀ ಸಿದ್ಧರಾಮರು ಕಟ್ಟಿದ ಕೆರೆ ಪುನಶ್ಚೇತನಗೊಳ್ಳುತ್ತಿರುವುದು ಸ್ಥಳೀಯರಿಗೆ ಸಂಭ್ರಮ ಮತ್ತು ಸಡಗರವನ್ನು ತಂದಿದೆ. ಪಂಚಾಯ್ತಿಯವರೂ ಸಹ ಜಾಲಿ ಗಿಡಗಳನ್ನು ತೆರವು ಮಾಡಿ ಕೊಟ್ಟು ಕೆರೆ ಪುನಶ್ಚೇತನಕ್ಕೆ ಬೆಂಬವಾಗಿ ನಿಂತಿದ್ದಾರೆ. ಊರಿನ ಪ್ರಮುಖರು ಸಭೆ ಸೇರಿ ಕೆರೆ ಸಮಿತಿ ರಚಿಸಿ ಧರ್ಮಸ್ಥಳ ಸಂಸ್ಥೆ ನೀಡಿದ 15 ಲಕ್ಷ ರೂ. ಹಣದಲ್ಲಿ ಒಂದು ರೂಪಾಯಿಯೂ ಲೋಪವಾಗದಂತೆ ಹದ್ದಿನ ಕಣ್ಣಿಟ್ಟು ಕೆರೆಯ ಹೂಳೆತ್ತಿಸಲಾಗುತ್ತಿದೆ. ರೈತರೂ ಸಹ ಸ್ವಯಂ ಪ್ರೇರಣೆಯಿಂದ ಕೆರೆಯ ಮಣ್ಣು ಕೊಂಡೊಯ್ದು ತಮ್ಮ ಜಮೀನು, ತೋಟ ಅಭಿವೃದ್ಧಿಗೊಳಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಸಿದ್ಧರಾಮರು ಕಟ್ಟಿದ್ದ ಕೆರೆಗೆ ಈಗ ಎಲ್ಲರೂ ಒಗ್ಗೂಡಿ ಜೀವಕಳೆ ಕೊಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ