ಪಾವಗಡ
ವಿಶೇಷ ವರದಿ:ಹೆಚ್.ರಾಮಾಂಜಿನಪ್ಪ
ಸೋಮವಾರ ರಾತ್ರಿ ಸುರಿದ ಮಳೆಯಿಂದ ತಾಲ್ಲೂಕಿನ ನಾಗಲಮಡಿಕೆ ಕೆರೆ ತುಂಬಿದೆ. ಡ್ಯಾಂಗೆ ಮುಕ್ಕಾಲು ಭಾಗ ನೀರು ಬಂದಿದೆ. ಕೆಲವು ಕೆರೆಗಳಿಗೆ 2-3 ತಿಂಗಳ ಬಳಕೆಗಾಗುವಷ್ಟು ನೀರು ತುಂಬಿರುವ ಮಾಹಿತಿ ತಿಳಿದು ಬಂದಿದೆ.ನಾಗಲಮಡಿಕೆ ಬಳಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ, 13 ಕೋಟಿ ರೂ. ವೆಚ್ಚದಲ್ಲಿ ಜಾಕ್‍ವೆಲ್ ನಿರ್ಮಾಣ ಮಾಡಿದ ನಂತರ ಒಂದು ಬಾರಿ ತುಂಬಿದ್ದು ಬಿಟ್ಟರೆ, ಇದುವರೆಗೂ ತುಂಬಿರಲಿಲ್ಲ. ಸೋಮವಾರ ರಾತ್ರಿ ವರುಣನ ಕೃಪೆಯಿಂದ ತಾಲ್ಲೂಕಿನ 15 ಕೆರೆಗಳಿಗೆ ನೀರು ಬಂದಿದೆ. ನಾಗಲಮಡಿಕೆ ಕೆರೆ ತುಂಬಿದ್ದು, ಜಾಕ್‍ವೆಲ್‍ಗೆ ಮುಕ್ಕಾಲು ಭಾಗ ನೀರು ಬಂದಿದೆ. ಇನ್ನು ಸ್ವಲ್ಪ ಮಳೆ ಬಂದರೂ ಹಲವಾರು ಕೆರೆಗಳು ಸಂಪೂರ್ಣ ತುಂಬುವ ಸೂಚನೆಗಳು ಇವೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಬಂದ ಮಳೆಗೆ ಕೆರೆಗಳಿಗೆ ನೀರು ಬಂದರೂ ಸಹ ಬಳಸಮುದ್ರ ಕೆರೆ, ಉಪ್ಪಾರಹಳ್ಳಿ ಕೆರೆ, ಹೊಸಹಳ್ಳಿ ಕೆರೆಗಳಿಗೆ ರಂಧ್ರ ಬಿದ್ದು, ನೀರು ಪೋಲಾಗುತ್ತಿತ್ತು. ತಕ್ಷಣವೆ ಜಿ.ಪಂ ಉಪವಿಭಾಗ ಸಹಾಯಕ ಕಾರ್ಯಾಪಾಲಕ ಎಂಜಿನಿಯರ್ ದೇಶಪಾಂಡೆ ರಂಧ್ರ ಮುಚ್ಚಲು ಎಲ್ಲ ಪ್ರಯತ್ನ ಮಾಡಿದ್ದು, ಕೆಲವು ಕೆರೆಗಳಲ್ಲಿ ಪೋಲಾಗುವ ನೀರು ನಿಂತಿದೆ. ಇನ್ನು ಕೆಲವು ಕೆರೆಗಳು ಒಡೆಯುವ ಹಂತಕ್ಕೆ ತಲುಪಿದ್ದು, ತಕ್ಷಣವೇ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಿ ಕೆರೆಗಳನ್ನು ರಕ್ಷಣೆ ಮಾಡಬೇಕಾಗಿದೆ ಎಂದು ರೈತಾಪಿ ವರ್ಗದವರು ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಉಪವಿಭಾಗ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಾಣ ಗೊಂಡ ಚೆಕ್ ಡ್ಯಾಂಗಳು ತುಂಬಿ ತುಳುಕುತ್ತಿವೆ. ಮಳೆ ನೀರು ಶೇಖರಣೆಯಾಗಿ ಅಂತರ್ಜಲ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಹೆಚ್ಚಿನದಾಗಿ ನಿರ್ಮಿಸಿದ್ದರೆ ಇನ್ನೂ ಹೆಚ್ಚು ಉಪಯೋಗವಾಗುತ್ತಿತು ಎಂಬುದು ರೈತರ ಅಭಿಪ್ರಾಯವಾಗಿದೆ.
ಪಾವಗಡ ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಕೆರೆ ಕಟ್ಟೆಗಳಿಗೆ ನೀರು ಬರದ ಕಾರಣ ಕಟ್ಟೆಗಳು ಬಿರುಕು ಬಿಟ್ಟಿದ್ದವು. ಈಗ ಬಂದ ಮಳೆ ನೀರಿಗೆ ಪೀಕಪ್‍ಗಳು, ಕೆರೆಗಳು, ಚೆಕ್ ಡ್ಯಾಂಗಳು ರಂಧ್ರ ಬಿದ್ದು, ಒಡೆದು ಹೋಗಿವೆ. ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡ ಚೆಕ್ ಡ್ಯಾಂ ಒಡೆದು, ಇಲ್ಲಿ ಸಹ ನೀರು ಪೋಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಾಣಗೊಂಡ ಎರಡು ಮೂರು ಚೆಕ್ ಡ್ಯಾಂಗಳು ಕಟ್ಟೆ ಒಡೆದು ಹೋಗಿದ್ದು, ಇಂತಹ ಚೆಕ್ ಡ್ಯಾಂಗಳನ್ನು ಪುನಃ ನಿರ್ಮಾಣ ಮಾಡಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ, ಮತ್ತೆ ನೀರು ಶೇಖರಣೆ ಮಾಡಲು ಅನುವು ಮಾಡಿಕೊಡಲು ಕುರಿಗಾಹಿಗಳು ಮತ್ತು ರೈತರು ಒತ್ತಾಯಿಸಿದ್ದಾರೆ.
ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದು ಕೊಳವೆ ಬಾವಿಗಳು ಒಣಗಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಕೆಲವು ಗ್ರಾಮಗಳಲ್ಲಿ ಸಂರ್ಪೂಣ ಕೊಳವೆ ಬಾವಿಗಳು ಒಣಗಿ, ಗ್ರಾಮಸ್ಥರಿಗೆ ಕುಡಿಯುವ ನೀರು ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್ ನೀರು ಪೂರೈಸುತ್ತಿದ್ದನ್ನು ನಾವು ಕಾಣಬಹುದಾಗಿತು.
ತಾಲ್ಲೂಕಿನಲ್ಲಿ ಕೆರೆ, ಕಟ್ಟೆಗಳಿಗೆ ನೀರು ಬರುತ್ತಿದ್ದಂತೆ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ. ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ಯಲ್ಲಪ್ಪನಾಯಕನಹಳ್ಳಿ ಗ್ರಾಮದ ರೈತ ಕೊರೆಸಿದ್ದ ಕೊಳವೆ ಬಾವಿ ಒಣಗಿತ್ತು. ಸೋಮವಾರ ಸುರಿದ ಮಳೆಯಿಂದ ಅಂತರ್ಜಲ ಹೆಚ್ಚಾಗಿ ಒಣಗಿದ ಕೊಳವೆ ಬಾವಿಯಲ್ಲಿ ನೀರು ಉಕ್ಕಿ ಬರುತ್ತಿವೆ ಎಂಬ ಮಾಹಿತಿ ತಿಳಿದು ಬಂದಿದೆ.
ನಾಗಲಮಡಿಕೆ ಬಳಿ ಉತ್ತರ ಪಿನಾಕಿನಿ ನದಿಗೆ ಆಂಧ್ರದ ಹಂದ್ರಿನಿವಾ ನೀರು ಯೋಜನೆ ಮೂಲಕ ನೀರು ಹರಿಸುವ ಕುರಿತು ರಾಜ್ಯ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಮತ್ತು ನೆರೆಯ ಆಂಧ್ರ ಅನಂತಪುರ ಜಿಲ್ಲೆಯ ರ್ಯಾಪ್ತಾಡು ಶಾಸಕ ಪ್ರಕಾಶರೆಡ್ಡಿ, ಪುಟ್ಟಪರ್ತಿ ಶಾಸಕ ದುದ್ದಕುಂಟ ಶ್ರೀಧರರೆಡ್ಡಿರವರು ಸುದೀರ್ ಚರ್ಚೆ ನಡೆಸಿದ್ದರು.
ಯಾವುದೇ ಒಪ್ಪಂದ ಇಲ್ಲದೆ ನೀರನ್ನು ಉತ್ತರ ಪಿನಾಕಿನಿ ನದಿಗೆ ಹರಿಸಿ ಆಂಧ್ರದ ಪೆರೋರು ಗ್ರಾಮದ ಬಳಿ ನಿರ್ಮಿಸಿರುವ, ಒಂದು ಟಿಎಂಸಿ ನೀರು ತುಂಬಿಸಲು ಅನುಕೂಲ ಇರುವ ಡ್ಯಾಂ ತುಂಬಿಸಲು ಸುಲಭ ಮಾರ್ಗ ಇದಾಗಿದೆ. ಆದ್ದರಿಂದ ಉತ್ತರ ಪಿನಾಕಿನಿ ನದಿ ಮೂಲಕ ಹರಿಸಲು ಆಂಧ್ರದ ಇಬ್ಬರು ಶಾಸಕರು ಮುಖ್ಯ ಮಂತ್ರಿಗಳ ಬಳಿ ಪ್ರಸ್ತಾಪಿಸಿದ್ದ ಮಾಹಿತಿ ಸಹ ಕೇಳಿ ಬಂದಿತ್ತು.
ಈ ರೀತಿ ನೀರು ಹರಿಸಿದರೆ ನದಿಯ ಇಕ್ಕೆಲಗಳ 100 ಕ್ಕೂ ಹೆಚ್ಚು ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂಬುದು ಜನ ಪ್ರತಿನಿಧಿಗಳಿಗೆ ಅರಿವಾಗಿ ನಾಗಲಮಡಿಕೆ ಬಳಿ ಕಟ್ಟಲಾಗಿರುವ ಬ್ಯಾರೇಜ್‍ಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಈ ಮೂಲಕ ಪಾವಗಡ ನಗರಕ್ಕೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂಬ ಸುದ್ದಿ ತಿಳಿದ ತಾಲ್ಲೂಕಿನ ಜನತೆಗೆ ಸಂತೋಷವಾಗಿತ್ತು. ಈ ಯೋಜನೆಯು ಚರ್ಚಾ ಹಂತದಲ್ಲಿರುವಾಗಲೆ ವರುಣ ಕೃಪೆಯಿಂದ ಈ ಬಾರಿ ಡ್ಯಾಂ ತುಂಬುವ ನಿರೀಕ್ಷೆಯಲ್ಲಿ ತಾಲ್ಲೂಕಿನ ಜನತೆ ಇದ್ದಾರೆ. ಇದರ ಜೊತೆಗೆ ಆಂಧ್ರದ ಕೃಷ್ಣ ಜಲಾಶಯದಿಂದ ನೀರು ಹರಿಸಿದರೆ ಶಾಶ್ವತವಾಗಿ ಈ ಭಾಗದ ಜನತೆಗೆ ನೀರಿನ ಪರಿಹಾರ ಸಿಗುತ್ತದೆ ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತ ಪಡಿಸಿದ್ದಾರೆ.
ಪಾವಗಡ ತಾಲ್ಲೂಕಿನಲ್ಲಿ ಶುದ್ದ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿ ರೈತರ ಜೀವನ ಸುಗಮಗೊಳಿಸಲು ಸರ್ಕಾರ ಮುಂದಾಗಬೇಕಿದೆ ಎಂಬುದು ತಾಲ್ಲೂಕಿನ ಜನತೆಯ ಒತ್ತಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
