ಚಿತ್ರದುರ್ಗ,
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ವರುಣ ಅಬ್ಬರಿಸಿದ್ದು, ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಕೆಲವು ಕಡೆ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಮನೆ ಗೋಡೆ ಕುಸಿದು ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ.ಚಿತ್ರದುರ್ಗ ನಗರ ಪ್ರದೇಶ, ಜಿಲ್ಲೆಯ ಆರು ತಾಲೂಕು ಕೇಂದ್ರಗಳು ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಹಳ್ಳ-ಕೊಳ್ಳ, ಕೆರೆ, ಗೋಕಟ್ಟೆಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಹಿರಿಯೂರು ತಾಲೂಕಿನ ಬಹುತೇಕ ಹಳ್ಳಿಗಳು ಸೇರಿದಂತೆ ಧರ್ಮಪುರ, ಅರಳಿಕೆರೆ, ಹರಿಯಬ್ಬೆ ಸುತ್ತ ಮುತ್ತ ಪ್ರದೇಶಗಳು ಸಾಕಷ್ಟು ಮಳೆಯಾಗಿದ್ದು ರಸ್ತೆ ತುಂಬೆಲ್ಲ ನೀರು ಹರಿಯುತ್ತಿದೆ. ಕೆರೆ, ಹಳ್ಳ ಮುಂತಾದ ನೀರಿನ ಹರಿವು ಕಾಣಿಸುತ್ತಿದ್ದು ರೈತರು ಸಂಭ್ರಮದಲ್ಲಿದ್ದಾರೆ.
ಮಳೆಗೆ ಚಿತ್ರದುರ್ಗ ಐತಿಹಾಸಿಕ ಚಂದ್ರವಳ್ಳಿ ಕೆರೆ ಕೋಡಿ ಬಿದ್ದು ಕಿರುಜಲಪಾತ ಸೃಷ್ಟಿಯಾಗಿದೆ.. ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಕೆರೆ ಕೋಡಿ ಬಿದ್ದ ಪರಿಣಾಮ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ಮತ್ತೊಂದೆಡೆ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಕೃಷಿ ಹೊಂಡಗಳು, ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಇತ್ತ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ, ರೇಣುಕಾಪುರ ಹಳ್ಳಗಳು ಸಹ ಮೈದುಂಬಿ ಹರಿಯುತ್ತಿವೆ.
ಹಿರಿಯೂರು ತಾಲ್ಲೂಕಿನ ಅರಳಿಕೆರೆ ದೊಡ್ಡಹಳ್ಳ ತುಂಬಿ ಹರಿಯುತ್ತಿದೆ. ಐಮಂಗಲ, ಮಸ್ಕಲ್, ಆರನಕಟ್ಟೆ, ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. ಹಿರಿಯೂರು ಒಟ್ಟು 58.6 ಮಿ.ಮೀ. ಮೀಟರ್ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಸಹ ಮಳೆಯಾಗಿದ್ದು ತಾಲೂಕಿನ ತೇಕಲವಟ್ಟಿ ಗ್ರಾಮದ ಕೆರೆ ಕಟ್ಟೆಗಳು ಭರ್ತಿಯಾಗಿ ಹರಿಯುತ್ತಿವೆ. ಹೊಸದುರ್ಗ ತಾಲ್ಲೂಕಿನಲ್ಲಿ ಹದವಾಗಿ ಮಳೆಯಾಗಿದೆ.
ತಗ್ಗು ಪ್ರದೇಶಗಳಲ್ಲಿ ಇರುವ ನಿವಾಸಿಗಳ ಗುಡಿಸಲುಗಳಿಗೆ ನೀರು ನುಗ್ಗಿದ್ದು ಸಾಕಷ್ಟು ಅನಾಹುತ ಸೃಷ್ಠಿಸಿದೆ. ಮಣ್ಣಿನ ಮನೆಗಳು ಮಳೆ ನೀರಿಗೆ ನೆನೆದು ಯಾವುದೇ ಸಂದರ್ಭದಲ್ಲಿ ಬೀಳುವ ಹಂತಕ್ಕೆ ಬಂದಿವೆ.ಜಿಲ್ಲೆಯಾದ್ಯಂತ ಬಿತ್ತನೆ ಮಾಡಿರುವ ಶೇಂಗಾ, ಮೆಕ್ಕೆಜೋಳ ಸೇರಿದಂತೆ ಮತ್ತಿತರ ಫಸಲುಗಳಿಗೆ ಉತ್ತಮ ಹದ ಮಳೆಯಾಗಿದ್ದು ರೈತರು ಹರ್ಷದಲ್ಲಿದ್ದಾರೆ.
ಬಾಲಕಿ ಸಾವು: ತಡರಾತ್ರಿ ಸುರಿದ ಮಳೆ ಆರ್ಭಟಕ್ಕೆ ಚಳ್ಳಕೆರೆ ತಾಲೂಕಿನ ಬಂಗಾರಹಟ್ಟಿಯಲ್ಲಿ ಎರಡು ಕುರಿಗಳು ಸೇರಿದಂತೆ ಒಂದು ಎತ್ತು ಬಲಿಯಾಗಿದೆ. ಇನ್ನು ರತ್ನಮ್ಮ ಎನ್ನುವವರ ಮನೆ ಚಾವಣಿ ಕುಸಿದು ಬಿದ್ದಿದೆ. ಪರುಶುರಾಂಪುರ ಹೋಬಳಿಯ ಜಾಜೂರು ಗ್ರಾಮದಲ್ಲಿ ಪಕ್ಕದ ಮನೆ ಗೋಡೆ ಕುಸಿದ ಪರಿಣಾಮ ಶೃಜನ್ಯ (06) ಎಂಬ ಬಾಲಕಿ ಮೃತಪಟ್ಟಿದ್ದಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ