ಕೊರಟಗೆರೆ
ಋಷಿಮುನಿಗಳ ತಪೋವನ ಎಂದೇ ಬಿಂಬಿತವಾಗುವ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಡಿ.3ರ ಸೋಮವಾರ ಏರ್ಪಡಿಸಲಾಗಿದೆ ಎಂದು ಸಿದ್ದರಬೆಟ್ಟ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ತೋವನಕೆರೆ ಹೋಬಳಿ ಸಿದ್ದರಬೆಟ್ಟ ಕ್ಷೇತ್ರದ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡುತ್ತಾ, ಡಿಸೆಂಬರ್ 3 ರಂದು ನಡೆಯಲಿರುವ ಕಾರ್ತೀಕ ದೀಪೋತ್ಸವ ಕಾರ್ಯಕ್ರಮವನ್ನು ಪ್ರತಿ ಬಾರಿಗಿಂತಲೂ ಈ ಬಾರಿ ಇನ್ನು ವಿಜೃಂಭಣೆಯಿಂದ ಆಚರಿಸಲು ಕೈ ಜೋಡಿಸುವಂತೆ ಕರೆ ನೀಡಿದರು.
ಸಿದ್ದರಬೆಟ್ಟ ಪುಣ್ಯಕ್ಷೇತ್ರದಲ್ಲಿ ನಡೆಯುವ ಲಕ್ಷದಿಪೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆಮೂಲೆಯಿಂದ ಬರುವಂತಹ ಸಾವಿರಾರು ಭಕ್ತಾದಿಗಳಿಗೆ ಯಾವುದೇ ಕೊರತೆ ಬಾರದ ರೀತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಹಾಗೂ ಕಾರ್ತೀಕ ಮಾಸದ ಲಕ್ಷದೀಪೋತ್ಸವವನ್ನು ತುಂಬಾ ಯಶಸ್ವಿಯಾಗಿ ಜರುಗಿಸಲು ತಾಲ್ಲೂಕು ಆಡಳಿತದ ಜೊತೆಗೆ ಸದ್ಬಕ್ತರು ಕೈಜೋಡಿಸಿ ಯಶಸ್ವಿಗೊಳಿಸುವಂತೆ ತಿಳಿಸಿದರು.
ತಹಸೀಲ್ದಾರ್ ನಾಗರಾಜು ಮಾತನಾಡಿ ಲಕ್ಷ ದೀಪೋತ್ಸವ ಕಾರ್ಯಕ್ರಮದ ಬಗ್ಗೆ ಸ್ಥಳೀಯವಾಗಿ ಉತ್ತಮ ಅಭಿಪ್ರಾಯ ಕಾಣದಿರುವುದು ಸೂಕ್ಷ್ಮವಾಗಿ ಕಂಡು ಬರುತ್ತಿದ್ದು ಹಿಂದಿನ ಆಚರಣೆಗಳ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ಆದರೆ ಈ ಬಾರಿ ತಾಲ್ಲೂಕ್ ಆಡಳಿತ ಹಾಗೂ ಭಕ್ತಾದಿಗಳ ಸಹಯೋಗದಲ್ಲಿ ಯಶಸ್ವಿಯಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಿಸಲು ಸಕಲ ಸಿದ್ದತೆ ನಡೆಸಲಾಗಿದ್ದು, ಸ್ಥಳೀಯ ಗ್ರಾ.ಪಂ, ಅರಣ್ಯ ಇಲಾಖೆ, ಬೆಸ್ಕಾಂ ಮತ್ತು ಶ್ರೀಮಠದ ಸಹಕಾರ ಅಗತ್ಯವಾಗಿದೆ. ಅಧಿಕಾರಿ ವರ್ಗ ತಮಗೆ ಸೂಚಿಸಿರುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು
ಮೂಲಭೂತ ಸೌಕರ್ಯಕ್ಕಾಗಿ ಸಾರ್ವಜನಿಕರಿಂದ ಒತ್ತಾಯ: ಎರಡನೇ ಕಾಶಿ ಎನಿಸಿಕೊಂಡಿರುವಂತಹ ಸಿದ್ದರಬೆಟ್ಟ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಭಕ್ತಾದಿಗಳು ಪರಿತಪ್ಪಿಸುವಂತಹ ಪರಿಸ್ಥಿತಿ ಇದ್ದು, ಕ್ಷೇತ್ರದ ಸುತ್ತೆಲ್ಲಾ ಬೀದಿ ದೀಪವಿಲ್ಲದೆ ಕತ್ತಲು ಕವಿದಿದೆ. ಅನೈರ್ಮಲ್ಯ ತಾಂಡವವಾಡುತ್ತಿದ್ದು ಸ್ವಚ್ಛತೆ ಮಾಯವಾಗಿದೆ. ಶೌಚಾಲಯಗಳ ನಿರ್ವಹಣೆ ಲೋಪದಿಂದ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು ಭಕ್ತಾದಿಗಳು ಒಲ್ಲದ ಮನಸ್ಸಿನಲ್ಲಿ ಬಯಲು ಶೌಚಾಲಯ ಅವಲಂಬಿಸುತ್ತಿರುವ ಅನಿವಾರ್ಯತೆ ತಲೆದೋರಿದ್ದು, ಮಂಡೆತೆಗೆಯುವ ಭಕ್ತರಿಗೆ ನೀರಿನ ವ್ಯವಸ್ಥೆ ಇಲ್ಲದೆ. ಕೆರೆಕಟ್ಟೆಯ ನೀರಿನಲ್ಲಿ ಸ್ನಾನ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯ ಮತ್ತು ಹೊರರಾಜ್ಯದಿಂದ ಈ ಧಾರ್ಮಿಕ ಕ್ಷೇತ್ರಕ್ಕೆ ಬರುವ ಸದ್ಭಕ್ತರು ಹಾಗೂ ಪ್ರವಾಸಿಗರಿಗೆ ದೊಡ್ಡ ಸಮಸ್ಯೆಗಳೇ ತಲೆದೋರುತ್ತಿದ್ದು ಇವುಗಳ ನಿವಾರಣೆಯತ್ತ ಸಂಬಂಧಪಟ್ಟ ಇಲಾಖೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಪೂರ್ವಭಾವಿ ಸಭೆಯ ಮುಕ್ತಾಯದವರೆಗೂ ಸಾರ್ವಜನಿಕರು ಇಲಾಖೆಯ ವಿರುದ್ಧ ಏರುಧ್ವನಿಯಲ್ಲಿ ಟೀಕಿಸುತ್ತಿದ್ದದ್ದು ಕಂಡು ಬಂತು.
ಪೂರ್ವಭಾವಿ ಸಭೆಯಲ್ಲಿ ಇಓ ಶಿವಪ್ರಕಾಶ್, ಪಿಡಿಓ ನವ್ಯಾ, ಕಂದಾಯ ಇಲಾಖೆಯ ಕೃಷ್ಣಪ್ಪ, ರಮೇಶ್, ಪಾರುಪತ್ತೇದಾರ್ ವೀರಮಲ್ಲಯ್ಯ, ಅರ್ಚಕ ಲೋಕೇಶ್ಆರಾಧ್ಯ, ಮಹೇಶ್, ಮುಖಂಡರಾದ ನಂಜುಂಡಸ್ವಾಮಿ, ರತ್ನಾಕರ, ಹುಲಿರಾಮಯ್ಯ, ಗಿರೀಶ್, ಪ್ರದೀಪ್, ಹನುಮೇಶ್, ನಾಗರಾಜು, ಹನುಮಂತರಾಜು, ಸುರೇಶ್, ಶಿವಲಿಂಗಯ್ಯ, ರಘುನಂದನ್, ಶಿವಾನಂದ, ರಮೇಶ್ ಸೇರಿದಂತೆ ಇತರರು ಇದ್ದರು.
ದೇವರಾಜಮ್ಮ ಸ್ವಚ್ಛ ಮಾಡುವ ಮಹಿಳೆ ಸಿದ್ದರಬೆಟ್ಟ:
ಸಿದ್ದರಬೆಟ್ಟ ಕ್ಷೇತ್ರದಲ್ಲಿ ಕಳೆದ 6ವರ್ಷದಿಂದ ಶೌಚಾಲಯ, ಕುಡಿಯುವ ನೀರಿನತೊಟ್ಟಿ ಮತ್ತುಚಿಂದಿ ಕಸವನ್ನುಆಯ್ದು ಸ್ವಚ್ಛತೆಯ ಕೆಲಸ ಮಾಡುತ್ತಿದ್ದೇನೆ. ಭಕ್ತಾದಿಗಳು ನೀಡುವ ಐದು, ಹತ್ತು ರೂ. ಹಣದಿಂದಲೇ ಜೀವನ ಸಾಗಿಸಬೇಕು. ಮುಜರಾಯಿ ಇಲಾಖೆಯಿಂದ ಕೂಲಿ ಕೊಡುವುದಾಗಿ ಆಶ್ವಾಸನೆ ಮಾತ್ರ ನೀಡುತ್ತಾರೆ. ನನಗೆ ಇಲ್ಲಿಯವರೆಗೆ ಒಂದು ಪೈಸೆಯೂ ನೀಡಿಲ್ಲ.
ಸಿದ್ದರಬೆಟ್ಟದ ಪ್ರಕೃತಿ ಮತ್ತು ಸಂಸ್ಕತಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಗಿರಿ ನಂಜುಂಡಸ್ವಾಮಿ ಮಾತನಾಡಿ, ಮುಜರಾಯಿ ಇಲಾಖೆಯ ಖರ್ಚು ವೆಚ್ಚದ ಲೆಕ್ಕಾ ಪರಿಶೋಧನೆಯಲ್ಲಿ 60ಲಕ್ಷದ ಲೋಪದೋಷ ಆಗಿದೆ. ಕಳೆದ ಎರಡು ವರ್ಷದಿಂದ ದೇವಾಲಯಕ್ಕೆ ಸುಣ್ಣಬಣ್ಣ ಬಳೆದಿರುವ ಹಣವನ್ನು ನೀಡಿಲ್ಲ. ಖರ್ಚು ವೆಚ್ಚ ಮತ್ತು ಚರಾಸ್ಥಿ, ಸ್ಥಿರಾಸ್ಥಿಯ ಮಾಹಿತಿ ಕೇಳಿದರೆ ಅಧಿಕಾರಿ ವರ್ಗ ಉಡಾಫೆ ಉತ್ತರ ನೀಡುತ್ತಾರೆ. ಪುಣ್ಯಕ್ಷೇತ್ರದ ಗೋಳು ಕೇಳೋರೇ ಇಲ್ಲವೇ ? ಎಂದರು.
ಸ್ಥಳೀಯ ಯುವ ಮುಖಂಡ ಹನುಮಂತರಾಜು ಮಾತನಾಡಿ, ಮುಜರಾಯಿ ಇಲಾಖೆ ಖಜಾನೆಯಲ್ಲಿ ಸಿದ್ದರಬೆಟ್ಟದ 2ಕೋಟಿ ಹಣ ಭದ್ರವಾಗಿದೆ. ಕ್ಷೇತ್ರದ ಅಭಿವೃದ್ದಿಗಾಗಿ ಸರಕಾರದಿಂದ ಬಿಡುಗಡೆ ಆದ 2 ಕೋಟಿ ಹಣ ಅಧಿಕಾರಿಗಳ ನಿರ್ಲಕ್ಷದಿಂದ ಸರಕಾರದ ಖಜಾನೆಗೆ ಹಿಂದಕ್ಕೆ ಹೋಗಿದೆ. ಚುನಾವಣೆ ವೇಳೆ ಕಾರ್ಯಕ್ರಮ ಆಯೋಜನೆಗೆ ಮಾತ್ರ ಕ್ಷೇತ್ರವನ್ನು ರಾಜಕೀಯ ವರ್ಗ ಬಳಸಿಕೊಂಡು ಈಗ ಮರೆತಿರುವುದು ದುರದೃಷ್ಟಕರ. ಬೆಟ್ಟ ಹತ್ತುವ ಭಕ್ತರ ಗೋಳು ಕೇಳೊರೇ ಇಲ್ಲದಾಗಿದೆ. ಮಾನ್ಯಜಿಲ್ಲಾಧಿಕಾರಿ ಕ್ಷೇತ್ರಕ್ಕೆಒಮ್ಮೆ ಬೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯ ಭಕ್ತರು ಒತ್ತಾಯ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








