ಬೆಂಗಳೂರು
ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎದುರು ಸ್ಪರ್ಧಿಸುವ ಅಭ್ಯರ್ಥಿಗೆ 5 ಕೋಟಿ ರೂಪಾಯಿ ನೀಡುವುದಾಗಿ ಹೇಳಿರುವ ಶಾಸಕ ರಮೇಶ್ ಜಾರಕಿಹೊಳಿಯನ್ನು ತರಾಟೆಗೆ ತೆಗೆದುಕೊಂಡಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮತದಾರರಿಗೆ ಖಾತೆ ಮೂಲಕ ಹಂಚುತ್ತಾರೆಯೆ? ಆರ್ಟಿಜಿಎಸ್ ಮಾಡುತ್ತಾರಾ? ಅಥವಾ ನಗದು ರೂಪದಲ್ಲಿ ನೀಡುತ್ತಾರಾ ಎಂದು ಸ್ಪಷ್ಟಪಡಿಸುವಂತೆ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಿ ತಪ್ಪು ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸೋಲಿಸಲು 5 ಕೋಟಿ ರೂಪಾಯಿ ನೀಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಫೇಸ್ ಬುಕ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವವರ ಪರವಾಗಿ 5 ಕೋಟಿ ರೂಪಾಯಿ ಹಂಚುವುದಾಗಿ ಆಹ್ವಾನ ನೀಡಿದ್ದಾರೆ. ಬಿಜೆಪಿಗೆ ಸೇರಿದ ತಕ್ಷಣ 5 ಕೋಟಿ ರೂ. ಮತದಾರರಿಗೆ ಹಂಚಲು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಚುನಾವಣಾ ಆಯೋಗದ ಅನುಮತಿ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ತಾವು ದುಡ್ಡು ಹಂಚಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳುವ ಅವರು, ಮತ್ತೊಂದು ಕಡೆ ತಾವು 5 ಕೋಟಿ ರೂ. ಹಂಚುವುದಾಗಿ ಹೇಳುವ ಮೂಲಕ ದ್ವಂದ್ವ ಹೇಳಿಕೆ ನೀಡಿದ್ದಾರೆ. ಇದನ್ನು ಸ್ವಾಭಿಮಾನಿ ಮತದಾರರು ಅರ್ಥ ಮಾಡಿಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ ಹಂಚುವುದು, ಬಿಜೆಪಿ ಹಣ ಅಥವಾ ಅವರ ಸ್ವಂತ ಹಣವೇ ಎಂದು ಪ್ರಶ್ನಿಸಿದರು.
ತಾವು ವೈಯಕ್ತಿಕವಾಗಿ ಯಾವುದೇ ಭಾಷೆ, ಜಾತಿ ಹಾಗೂ ದ್ವೇಷದ ರಾಜಕಾರಣ ಮಾಡಿಲ್ಲ. ತಮ್ಮನ್ನು ಬೆಳಗಾವಿ ಕ್ಷೇತ್ರದ ಜನರು ಮಗಳೆಂದು ಆಶೀರ್ವಾದ ಮಾಡಿದ್ದು, ಎಲ್ಲ ಸಮಾಜದ ಬಾಂಧವರ ಜೊತೆ ಅನ್ಯೋನ ವಾಗಿದ್ದೇನೆ.ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವುದು ಹಿಂದುಳಿದ ಕ್ಷೇತ್ರ, ಅಭಿವೃದ್ಧಿ ಆಗಲಿ ಎಂಬ ಕಾರಣಕ್ಕೆ ಹೊರತು ಯಾವುದೇ ಆಸೆ, ಆಮಿಷಕ್ಕೆ ಮತ ಹಾಕಿಲ್ಲ. ಜನರು ಹಣಕ್ಕಾಗಿ ಮತ ಹಾಕಿದ್ದಾರೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ. ಕೂಡಲೆ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.