ಬೆಂಗಳೂರು
ನಗರದ ಸಸ್ಯಕಾಶಿ ಲಾಲ್‍ಬಾಗ್ ಆವರಣದಲ್ಲಿ ಇದೇ ಮೇ 30 ರಿಂದ ಜೂ. 24ರವರೆಗೆ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ.
ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮತ್ತು ತೋಟಗಾರಿಕೆ ಇಲಾಖೆ ಎರ್ಪಡಿಸಿರುವ ಮಾವು ಮತ್ತು ಹಲಸು ಪ್ರದರ್ಶನದಲ್ಲಿ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ರೈತರುಗಳು ಭಾಗವಹಿಸಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ. ಎಂ.ವಿ ವೆಂಕಟೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾವು ಬೆಳೆಗಾರರಿಗೆ ಒಟ್ಟು 112 ಮಳಿಗೆಗಳು ಮತ್ತು ಹಲಸು ಬೆಳೆಗಾರರಿಗ 10 ಮಳಿಗಗಳು ಹಾಗೂ ಸಂಸ್ಕರಿತ ಪದಾರ್ಥಗಳಿಗೆ 9 ಮಾರಾಟ ಮಳಿಗೆಗಳನ್ನು ವಿತರಿಸಲಾಗಿದೆ.ಸುಮಾರು 50 ರಿಂದ 60 ಮಾವು ತಳಿಗಳು, 12ಕ್ಕೂ ಹೆಚ್ಚು ಹಲಸು ತಳಿಗಳನ್ನು ಈ ಮಾರಾಟ ಮೇಳದಲ್ಲಿ ಪ್ರದರ್ಶಿಸಲಾಗುವುದು. ಕಾರ್ಬೈಡ್ ಮುಕ್ತ ಹಾಗೂ ಸಹಜವಾಗಿ ಮಾಗಿದ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆ ಸೇರಿದಂತೆ 15 ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಮಾವು ಮೇಳಗಳು ನಡೆಯಲಿವೆ ರಾಜ್ಯದಲ್ಲಿ 1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದೆ. ಈ ವರ್ಷ 12 ರಿಂದ 14 ಲಕ್ಷ ಟನ್‍ಗಳಷ್ಟು ಇಳುವರಿಯನ್ನು ನಿರೀಕ್ಷಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನ ಮಾವು ಹಂಗಾಮನ್ನು ಷೇರು ಹಂಗಾಮೆಂದೇ ಪರಿಗಣಿಸಲಾಗಿದೆ ರಾಜ್ಯದಲ್ಲಿ ಎದುರಾದ ಬರದಿಂದಾಗಿ ಈ ಬಾರಿ 3 ರಿಂದ 4 ಲಕ್ಷ ಮೆಟ್ರಿಕ್ ಟನ್ ಮಾವು ಇಳುವರಿ ಕಡಿಮೆಯಾಗಿದ್ದು ಜುಲೈ ತಿಂಗಳ ಕೊನೆಯವರೆಗೂ ಮಾವಿನ ಹಣ್ಣುಗಳು ಸಿಗಲಿದೆ ಎಂದು ಅವರು ತಿಳಿಸಿದರು.
ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೇ 30 ರಂದು ಬೆಳಿಗ್ಗೆ 11.30ಕ್ಕೆ ಲಾಲ್‍ಬಾಗ್ ಆವರಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟಿಸುವರು. ಆನ್‍ಲೈನ್ ಮಾವು ಖರೀದಿ ಫೋರ್ಟಲ್ ಉದ್ಘಾಟನೆ ಮತ್ತು ವಿಶೇಷ ಅಂಚೆ ಲಕೋಟೆಯನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಬಿಡುಗಡೆ ಮಾಡಲಿದ್ದಾರೆ.
ಮಾವು ಮಳಿಗೆಗಳು ಹಾಗೂ ಕರ್ಸುರಿ ಬ್ರಾಂಡ್‍ನ್ನು ತೋಟಗಾರಿಕೆ ಸಚಿವ ಎಂ.ವಿ ಮನುಗುಳಿ ಅವರು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಜಿ ನಾಗರಾಜ್ ಮತ್ತು ಮಾವು ನಿಗಮದ ತಾಂತ್ರಿಕ ಸಮಿತಿ ಅಧ್ಯಕ್ಷ ಡಾ. ಎಸ್.ವಿ. ಹಿತ್ತಲಮನಿ ಮತ್ತಿತರರು ಉಪಸ್ಥಿತರಿದ್ದರು.